ದೇಶದ ಹಲವೆಡೆ ಇರುವ ಶ್ರೀ ಪೇಜಾವರ ಮಠದ ಶಾಖೆಗಳು ಮತ್ತು ಅಧೀನ‌ ಸಂಸ್ಥೆಗಳಲ್ಲಿ ಮಂಗಳವಾರ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ವೈಭವದಿಂದ ವಿವಿಧ ಧಾರ್ಮಿಕ ಸಾಂಸ್ಕೃತಿಕ , ಸಾಮಾಜಿಕ ಹಾಗೂ ಜ್ಞಾನ ಸತ್ರಗಳೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದ ಹಲವೆಡೆ ಇರುವ ಶ್ರೀ ಪೇಜಾವರ ಮಠದ ಶಾಖೆಗಳು ಮತ್ತು ಅಧೀನ‌ ಸಂಸ್ಥೆಗಳಲ್ಲಿ ಮಂಗಳವಾರ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ವೈಭವದಿಂದ ವಿವಿಧ ಧಾರ್ಮಿಕ ಸಾಂಸ್ಕೃತಿಕ , ಸಾಮಾಜಿಕ ಹಾಗೂ ಜ್ಞಾನ ಸತ್ರಗಳೊಂದಿಗೆ ನೆರವೇರಿತು.ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ಮಠದ ಶಾಖೆಯಲ್ಲಿ ನಡೆದ ಗುರು ಸಂಸ್ಮರಣ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವರೂ ಶ್ರೀ ವಿಶ್ವೇಶತೀರ್ಥರೊಂದಿಗೆ ರಾಮಜನ್ಮಭೂಮಿ ಆಂದೋಲನದಲ್ಲಿ ಶ್ರೀಗಳೊಂದಿಗೆ ಮಹತ್ವದ ಭೂಮಿಕೆ ನಿರ್ವಹಿಸಿದ್ದ ಡಾ ಮುರಳಿ ಮನೋಹರ ಜೋಶಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಸಂಸ್ಮರಣಾ ಮಾತುಗಳ ಮೂಲಕ ನಮನ ಸಲ್ಲಿಸಿದರು.ಶ್ರೀ ವಿಶ್ವೇಶ ತೀರ್ಥರು ಶ್ರೇಷ್ಠ ಸಂತ, ವಿಭೂತಿ ಸ್ವರೂಪರಾಗಿದ್ದರು. ವಿಶ್ವಹಿಂದು ಪರಿಷತ್ತಿನ ಸ್ಥಾಪನೆಗೆ, ದೇಶ ವಿದೇಶಗಳಲ್ಲಿ ಅದರ ಕಾರ್ಯವ್ಯಾಪ್ತಿಯ ವಿಸ್ತರಣೆಗೆ ಅವರ ಮಾರ್ಗದರ್ಶನ ಪ್ರೇರಣೆಗಳು ಅಮೂಲ್ಯವಾದವು. ರಾಮಜನ್ಮಭೂಮಿ ಆಂದೋಲನದಲ್ಲಿ ಸಮಸ್ತ ಹಿಂದು ಸಮಾಜಕ್ಕೆ ಅವರು ನೀಡಿದ ನೇತೃತ್ವಗಳು ಅವಿಸ್ಮರಣೀಯ ಎಂದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳ ಪಾದುಕೆ ಮತ್ತು ಭಾವಚಿತ್ರಕ್ಕೆ ಡಾ. ಜೋಶಿ ದೀಪಬೆಳಗಿ ಪುಷ್ಪಾರ್ಚನೆಗೈದು ಮಂಗಳಾರತಿ ಬೆಳಗಿ ಉದ್ಘಾಟಿಸಿದರು. ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.‌ವಿಹಿಂಪ ದೆಹಲಿ ರಾಜ್ಯದ ಕಾರ್ಯದರ್ಶಿ ಸುರೇಂದ್ರ ಕುಮಾರ ಗುಪ್ತಾ , ಮಾಜಿ ಕುಲಪತಿ ಶಿಕ್ಷಣ ತಜ್ಞ ಡಾ. ರಮೇಶ ಕುಮಾರ್ ಪಾಂಡೆ , ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್, ನವದೆಹಲಿಯ ಶ್ರೀ ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.ಶ್ರೀಮಠದ ವ್ಯವಸ್ಥಾಪಕ ವಿದ್ವಾನ್ ದೇವಿಪ್ರಸಾದ ಭಟ್ ಪ್ರಸ್ತಾವನೆಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಅರವಿಂದ ಮೆಟ್ಟಿಮನಿ ವಂದನಾರ್ಪಣೆಗೈದರು. ಗುರುಕುಲದ ಪ್ರಾಧ್ಯಾಪಕರಾದ ಶ್ರೀಕರ ಕುಲಕರ್ಣಿ, ಶ್ರೀನಿಧಿ ಆಚಾರ್ಯ, ಕೃಷ್ಣತೇಜ ಆಚಾರ್ಯ, ಸೌರಭ್ ಶರ್ಮಾ ಮೊದಲಾದವರು ಸಹಕರಿಸಿದರು .