ಆಸ್ಪತ್ರೆ, ಅಂಗನವಾಡಿಗೆ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ

| Published : Jul 11 2024, 01:31 AM IST

ಸಾರಾಂಶ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಬುಧವಾರ ಚಾಮರಾಜನಗರದ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ, ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಳಿಗಿರಿ ರಂಗನಬೆಟ್ಟದ ಪುರಾಣಿ ಪೋಡಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಇಂದು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ, ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಮತ್ತು ಬಿಳಿಗಿರಿ ರಂಗನಬೆಟ್ಟದ ಪುರಾಣಿ ಪೋಡಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿದರು.

ಮೊದಲಿಗೆ ಕೊಳ್ಳೇಗಾಲಕ್ಕೆ ಆಗಮಿಸಿ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ, ಅಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ರಾಜಶೇಖರ್, ಡಾ. ಲೋಕೇಶ್ವರಿ ಅವರಿಂದ ರೋಗಿಗಳಿಗೆ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ಐಸಿಯು ಘಟಕ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಆತ್ಮೀಯವಾಗಿ ಮಾತನಾಡಿಸಿ ಧೈರ್ಯ ತುಂಬಿದರು.

ಅಸ್ಪತ್ರೆಯ ಹೊರ ಅವರಣ ವೀಕ್ಷಿಸಿ, ಇತ್ತೀಚೆಗೆ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ತ್ಯಾಜ್ಯ, ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಅಸ್ಪತ್ರೆಯ ಟೆರೇಸ್ ಮೇಲಿನ ನೀರಿನ ಟ್ಯಾಂಕರ್‌ಗಳಲ್ಲಿನ ನೀರನ್ನು ಪರಿಶೀಲಿಸಿ ನೀರಿನ ಟ್ಯಾಂಕ್‌ಗಳನ್ನು ಪ್ರತಿ ತಿಂಗಳು ಸ್ವಚ್ಚಗೊಳಿಸಬೇಕು. ಅಸ್ಪತ್ರೆಗೆ ಬರುವವವರಿಗೆ ಶುದ್ದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಉತ್ತಮ ವೈದ್ಯಕೀಯ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಅಲ್ಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ನಂತರ ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರೋಗಿಗಳನ್ನು ಮಾತನಾಡಿಸಿದರು. ಅಲ್ಲಿನ ವೈದ್ಯಾಧಿಕಾರಿಗಳಾದ ಡಾ. ತನುಜಾ, ಡಾ.ರೇವತಿ ಅವರಿಂದ ಆರೋಗ್ಯ ಕೇಂದ್ರದಲ್ಲಿರುವ ಸೌಲಭ್ಯಗಳು ಹಾಗೂ ಐಇಸಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವಂತೆ ತಿಳಿಸಿ ಆರೋಗ್ಯ ಕೇಂದ್ರಕ್ಕೆ ಬೇಕಾಗಿರುವ ವ್ಯವಸ್ಥೆಗಳ ಬಗ್ಗೆ ಪಟ್ಟಿ ತಯಾರಿಸಿ ಸಲ್ಲಿಸುವಂತೆ ವೈದ್ಯರಿಗೆ ಸೂಚಿಸಿದರು.

ತದನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಕುಳಿತು ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ನೀಡುತ್ತಿರುವ ಸೌಲಭ್ಯಗಳ ಕುರಿತು ಮಕ್ಕಳನ್ನೇ ಕೇಳಿ ತಿಳಿದುಕೊಂಡರು. ಮಕ್ಕಳಿಗೆ ಮೆನು ಪ್ರಕಾರವೇ ನಿಗದಿತ ಪೌಷ್ಠಿಕ ಆಹಾರ ನೀಡಬೇಕು. ಅಂಗನವಾಡಿಯ ಸುತ್ತಲಿನ ಪರಿಸರ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಮೇಲ್ವಿಚಾರಕರಾದ ಸರಸ್ವತಿ, ಸಹಾಯಕಿ ಮಂಜುಳ ಅವರಿಗೆ ಸೂಚಿಸಿದರು. ಅಂಗನವಾಡಿಯಲ್ಲಿ ಮಕ್ಕಳಿಗಾಗಿ ಸಿರಿಧಾನ್ಯಗಳಿಂದ ತಯಾರಿಸಿದ್ದ ರುಚಿಯಾದ ತಿಂಡಿಯ ಸ್ವಾದವನ್ನು ಸವಿದರು.

ಈ ವೇಳೆ ಗುಂಬಳ್ಳಿ ಗ್ರಾಪಂ ಕಚೇರಿಗೆ ಭೇಟಿ ನೀಡಿ ಅಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಅವರಿಂದ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ ಎಷ್ಟು ಜನರಿಗೆ ಎಷ್ಟು ದಿವಸ ಕೆಲಸ ನೀಡಲಾಗಿದೆ. ಮಹಿಳೆಯರಿಗೆ ಆದ್ಯತೆ ನೀಡಲಾಗಿದೆಯೇ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಂಡರು. ಕೃಷಿಸಖಿ, ಪಶುಸಖಿ, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರನ್ನು ಮಾತನಾಡಿಸಿ ಅವರ ಕಾರ್ಯವೈಖರಿಯನ್ನು ಆಯೋಗದ ಅಧ್ಯಕ್ಷರು ವಿಚಾರಿಸಿದರು. ಪುರಾಣಿ ಪೋಡಿಗೆ ಭೇಟಿ:

ಬಿಳಿಗಿರಿ ರಂಗನಬೆಟ್ಟದ ದೇವಾಲಯಕ್ಕೆ ಆಗಮಿಸಿದ ಡಾ.ನಾಗಲಕ್ಷ್ಮಿ ಚೌಧರಿ, ಸ್ವಾಮಿಯ ದರ್ಶನ ಪಡೆದರು. ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿ ಸೋಲಿಗರು ವಾಸಿಸುವ ಪುರಾಣಿಪೋಡಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಲಭ್ಯಗಳ ಬಗ್ಗೆ ಆದಿವಾಸಿಗಳಿಂದ ಸಮಸ್ಯೆ, ಕುಂದು ಕೊರತೆ, ಅಹವಾಲುಗಳನ್ನು ಆಲಿಸಿದರು. ಪುರಾಣಿ ಪೋಡುವಿನಲ್ಲಿ 108 ಅದಿವಾಸಿ ಕುಟುಂಬಗಳು ವಾಸಿಸುತ್ತಿದ್ದು, ವಾಸಿಸಲು ಮನೆ, ಸಮರ್ಪಕ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳಿಲ್ಲದೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಸಂಜೆಯಾದರೆ ಕಾಡುಪ್ರಾಣಿಗಳ ಉಪಟಳದಿಂದ ಯಾರು ಸಹ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರತಿದಿನ ರಾತ್ರಿ ಕಗ್ಗತ್ತಲಿನಲ್ಲಿ ಕಾಲ ಕಳೆಯಬೇಕಾಗಿದೆ. ಅದಷ್ಟು ಶೀಘ್ರವಾಗಿ ಅವಶ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಅಲ್ಲಿನ ನಿವಾಸಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ನಾಗಲಕ್ಷ್ಮಿ ಚೌಧರಿ, ಈ ಬಗ್ಗೆ ವಿವರವಾದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದರು. ಪುರಾಣಿ ಪೋಡಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸಲು 5 ವರ್ಷಗಳ ಅವಧಿಗೆ ಏಜೆನ್ಸಿಯಿಂದ ಕರಾರು ಮಾಡಿಕೊಳ್ಳಲಾಗಿತ್ತು. 5 ವರ್ಷಗಳ ಕರಾರು ಒಪ್ಪಂದ ಮುಗಿದು 2 ವರ್ಷಗಳಾಗಿವೆ. ವಿದ್ಯುತ್ ಲೈನ್ ವ್ಯವಸ್ಥೆಗೂ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಪೋಡಿಗೆ 2 ವರ್ಷಗಳಿಂದ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕಗ್ಗತ್ತಲಿನಲ್ಲಿರುವ ಜನರ ಸ್ಥಿತಿ ಕಂಡು ತೀವ್ರ ಮರುಕ ಹಾಗೂ ವಿಷಾದ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷರು ಅದಿವಾಸಿ ಜನರ ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಜನರ ಸಂಕಷ್ಟಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು. ಈ ಬಗ್ಗೆ ಸಿಎಂ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ಈ ವೇಳೆ ಪುರಾಣಿ ಪೋಡಿನ ಮನೆಗಳಿಗೆ ಹಲವು ಭೇಟಿ ನೀಡಿ ಮನೆಗಳ ದುಸ್ಥಿತಿಯನ್ನು ವೀಕ್ಷಣೆ ಮಾಡಿದರು. ಬಳಿಕ ಅಲ್ಲಿನ ಆಶ್ರಮ ಶಾಲೆಗೆ ಭೇಟಿ ನೀಡಿ ಶಾಲೆಯ ಮಕ್ಕಳನ್ನು ಮಾತನಾಡಿಸಿದರು. ವಿದ್ಯಾಭ್ಯಾಸದ ಮುಂದಿನ ಗುರಿ ಏನೆಂದು ಮಕ್ಕಳಿಂದ ತಿಳಿದುಕೊಂಡರು. ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ ವಿತರಣೆಯಾಗುತ್ತಿರುವ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಕ್ಕಳಿಗೆ ಹಾಲು ವಿತರಣೆಯಾಗದಿರುವ ಬಗ್ಗೆ ಗಮನಿಸಿದ ಅಧ್ಯಕ್ಷರು ಸರ್ಕಾರವೇ ಮಕ್ಕಳಿಗೆ ಮಕ್ಕಳಿಗೆ ಹಾಲು ನೀಡುವಂತೆ ಮೆನು ಚಾರ್ಟ್ ನೀಡಿದೆ. ಅದರಂತೆ ಕಡ್ಡಾಯವಾಗಿ ಹಾಲು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಳಂದೂರು ತಾಲೂಕು ತಹಸೀಲ್ದಾರ್ ಜಯಪ್ರಕಾಶ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಪುರಾಣಿಪೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾವ್ಯ, ಜಿಲ್ಲಾ ಬುಡಕಟ್ಟು ಅದಿವಾಸಿಗಳ ಸಂಘದ ಅಧ್ಯಕ್ಷರಾದ ಮಾದೇಗೌಡ, ಅರಣ್ಯ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಅದಿವಾಸಿ ಮುಖಂಡರು, ಇತರರು ಇದ್ದರು.