ರಾಣಿಬೆನ್ನೂರು ತಹಸೀಲ್ದಾರ್ ಕಚೇರಿ, ಸರಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಸ್ಥಳೀಯ ನಗರಸಭೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕರ್ನಾಟಕ ರಾಜ್ಯ ಲೋಕಾಯುಕ್ತ ಸಿಬ್ಬಂದಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಣಿಬೆನ್ನೂರು: ಇಲ್ಲಿನ ತಹಸೀಲ್ದಾರ್ ಕಚೇರಿ, ಸರಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಸ್ಥಳೀಯ ನಗರಸಭೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕರ್ನಾಟಕ ರಾಜ್ಯ ಲೋಕಾಯುಕ್ತ ಸಿಬ್ಬಂದಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಎ.ವಿ. ಪಾಟೀಲ, ಲೋಕಾಯುಕ್ತ ಡಿವೈಎಸ್ಪಿ ಸಿದ್ದಪ್ಪ ಬೀಳಗಿ, ಇನ್‌ಸ್ಪೆಕ್ಟರ್ ಗುರಣ್ಣ ಹೆಬ್ಬಾಳ ನೇತೃತ್ವದಲ್ಲಿ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿ ಸಾರ್ವಜನಿಕರ ದೂರುಗಳ ಕುರಿತು ಮಾಹಿತಿ ಪಡೆದುಕೊಂಡರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತಕ್ಕೆ ಬಂದ ದೂರುಗಳನ್ನು ಪರಿಶೀಲಿಸಿದರು. ಕೆಲವು ಸಿಬ್ಬಂದಿಗಳ ವಿಭಾಗದ ಕಡತಗಳ ವಿಲೇವಾರಿ ಕುರಿತು ಮಾಹಿತಿ ಪಡೆಯುವಾಗ ತಡಬಡಿಸಿದ ಸಿಬ್ಬಂದಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜೊತೆಗೆ ಕೆಲ ಸಿಬ್ಬಂದಿಗಳ ಮೊಬೈಲ್ ಪರಿಶೀಲಿಸಿದ್ದು ಕಂಡು ಬಂದಿತು. ದೂರುಗಳ ಹಿನ್ನೆಲೆಯಲ್ಲಿ ತಹಸೀಲ್ದಾರ್ ಆರ್.ಎಚ್ ಭಾಗವಾನ್ ಅವರಿಂದ ಮಾಹಿತಿ ಪಡೆದುಕೊಂಡರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳು ಔಷಧಿಗಳ ಮಳಿಗೆಗೆ ತೆರಳಿ ಕೂಲಂಕುಷವಾಗಿ ಪರಿಶೀಲಿಸಿದರು. ಅವಧಿ ಮುಗಿದ ಔಷಧಿಗಳನ್ನು ರೋಗಿಗಳಿಗೆ ನೀಡದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಮಾತನಾಡಿಸಿದ ಲೋಕಾಯುಕ್ತರು ವೈದ್ಯರಗಳು ಸರಿಯಾದ ಚಿಕಿತ್ಸೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು. ಆನಂತರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜು ಶಿರೂರ ಅವರಿಂದ ಮಾಹಿತಿ ಪಡೆದುಕೊಂಡರು.

ನಗರಸಭೆಗೆ ಭೇಟಿ ನೀಡಿದ ಎ.ವಿ. ಪಾಟೀಲ ಮತ್ತವರ ಅಧಿಕಾರಿಗಳು ಉದ್ಯಾನ, ನಗರಸಭೆಯ ಸ್ವತ್ತಿನ ಕುರಿತಂತೆ ಒತ್ತುವರಿಯಾದ ಜಾಗಗಳ ಬಗ್ಗೆ ಹಾಗೂ ಸ್ವಚ್ಛತೆಯ ಕುರಿತು ಮತ್ತು ಹೋಟೆಲ್, ಬೇಕರಿ ಅಂಗಡಿಗಳಲ್ಲಿಯ ಆಹಾರದ ಗುಣಮಟ್ಟ ಕುರಿತಂತೆ ಪೌರಾಯುತ್ತ ಎಫ್ ಐ ಇಂಗಳಗಿ ಅವರಿಂದ ವಿವರವಾದ ಮಾಹಿತಿ ಪಡೆದರು. ರಾಜ್ಯದಲ್ಲಿಯೇ ರಾಣಿಬೆನ್ನೂರು ನಗರದಲ್ಲಿ ಅತ್ಯುತ್ತಮವಾಗಿ 24*7 ನೀರು ಪೂರೈಕೆಯಾಗುತ್ತಿರುವುದರ ಬಗ್ಗೆ, ದಾಖಲೆ ಪ್ರಮಾಣದಲ್ಲಿ ನೀರಿನ ಕರ, ತೆರಿಗೆ ಕರ ವಸೂಲಿ, ಬೀದಿಬದಿ ತಿಂಡಿ ತಿನಿಸುಗಳ ಅಂಗಡಿ ಮತ್ತು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ದಂಡ ಹಾಕಿ ನೋಟಿಸ್ ನೀಡಿ ತುರ್ತು ಕ್ರಮ ಕೈಗೊಂಡ ಬಗ್ಗೆ ಹಾಗೂ ಯಾವುದೇ ಕಡತಗಳು ಬಾಕಿ ಇರದ ನಗರಸಭೆಯ ಕಾರ್ಯ ವೈಖರಿ ಕುರಿತು ಲೋಕಾಯುಕ್ತರು ಪ್ರಶಂಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ದೊಡ್ಡಕೆರೆಗೆ ಹೋಗುತ್ತಿರುವ ಅನುಪಯುಕ್ತ ನೀರನ್ನು ತಡೆಯಲು ಮತ್ತು ನಗರದಲ್ಲಿನ ಸ್ವಚ್ಛತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲು ಸೂಚನೆ ನೀಡಿದರು. ಹೋಟೆಲ್ ಡಾಬಾಗಳಲ್ಲಿ ಕೃತಕ ಪನ್ನೀರ ಬಳಸುತ್ತಾರೆಯೇ? ಎಂಬುದನ್ನು ಪರಿಶೀಲಿಸಲು ಪೌರಾಯುಕ್ತರಿಗೆ ವಿಶೇಷವಾಗಿ ಸೂಚನೆ ನೀಡಿದರು.

ಈ ಸಮಯದಲ್ಲಿ ಲೋಕಾಯುಕ್ತ ಕೆ.ವಿ.ಪಾಟೀಲ ಮಾತನಾಡಿ, ಸರಕಾರಿ ಕೆಲಸ ದೇವರ ಕೆಲಸ, ದೇವರು ಕೊಟ್ಟ ಕಾಣಿಕೆಯಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಅವರ ನೋವುಗಳಿಗೆ ಕಾರಣರಾದರೆ ಆ ದೇವರು ಸಹ ಮೆಚ್ಚುವುದಿಲ್ಲ ಎಂದರು.