ಉಪಲೋಕಾಯುಕ್ತರ ಭೇಟಿ, ಭ್ರಷ್ಟ ಅಧಿಕಾರಿಗಳಲ್ಲಿ ನಡುಕ!

| Published : May 26 2024, 01:42 AM IST / Updated: May 26 2024, 11:52 AM IST

CORRUPTION 1

ಸಾರಾಂಶ

ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಗಂಭೀರ ಸ್ವರೂಪದ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಉಪಲೋಕಾಯುಕ್ತರ ಆಗಮನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ

ಶಿವಕುಮಾರ ಕುಷ್ಟಗಿ 

ಗದಗ :  ರಾಜ್ಯದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಜೂ.14ರಿಂದ 16ರ ವರೆಗೆ ಗದಗ ಜಿಲ್ಲೆಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸುವುದು, ವಿವಿಧ ಇಲಾಖೆಗಳ ಪರಿಶೀಲನೆ ನಡೆಸಲಿದ್ದಾರೆ. ಜಿಲ್ಲೆಯ ಭ್ರಷ್ಟ ಅಧಿಕಾರಿಗಳಲ್ಲಿ ಈಗಿನಿಂದಲೇ ನಡುಕ ಪ್ರಾರಂಭವಾಗಿದೆ.

ಗದಗ ಜಿಪಂ ಸಿಇಒ ಹುದ್ದೆ 2023 ಜು.8ರಿಂದ 8 ತಿಂಗಳು ಖಾಲಿ ಇತ್ತು. ಈ ಹುದ್ದೆ ಖಾಲಿಯಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಗದಗ ಜಿಲ್ಲಾಧಿಕಾರಿಗೆ ಹೆಚ್ಚುವರಿಯಾಗಿ ಜಿಪಂ ಸಿಇಒ ಹುದ್ದೆ ವಹಿಸಲಾಗಿತ್ತು. ಈ ಅವಧಿಯಲ್ಲಿಯೇ ಪ್ರಭಾರ ಜಿಪಂ ಸಿಇಒ ಅವರು ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಿಲ್ಲೆಯ 3 ತಾಲೂಕುಗಳಿಗೆ ಪಶು ವೈದ್ಯಾಧಿಕಾರಿಗಳನ್ನು ತಾಪಂ ಇಒ ಎಂದು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಈ ಪ್ರಕರಣವನ್ನು ಸಾರ್ವಜನಿಕರೋರ್ವರು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಉಪಲೋಕಾಯುಕ್ತರು ಗದಗ ಜಿಲ್ಲೆಯ ಭೇಟಿಗೆ ಈ ಪ್ರಕರಣವೂ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಹಲವಾರು ಪ್ರಕರಣಗಳು ಬಾಕಿ: ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು ಮಾಫಿಯಾ ಕುರಿತು ಪ್ರಕರಣ, ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಕಬಳಿಕೆ ಪ್ರಕರಣ, ಗದಗ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ವಿಷಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ಲಕ್ಷ್ಯ, ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ನಡೆದಿರುವ ಅಕ್ರಮ, ರೈತರಿಂದ ಖರೀದಿಸಿದ ಕಡಲೆ ಹಣ ಬಾಕಿ ಪ್ರಕರಣ ಸೇರಿದಂತೆ ಜಿಲ್ಲಾಡಳಿತದಿಂದ ಆಗಿರುವ ಪ್ರಮುಖ ಲೋಪಗಳ ಬಗ್ಗೆ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಇದುವರೆಗೂ ದಾಖಲಾಗಿರುವ ಎಲ್ಲ ಪ್ರಕರಣಗಳ ಕುರಿತು ತನಿಖೆ ನಡೆಸುವುದು, ತನಿಖೆಗೆ ಪರೋಕ್ಷವಾಗಿ ಅಸಹಕಾರ ತೋರುತ್ತಿರುವ ಹಿರಿಯ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡುವುದು ಹೀಗೆ ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಗಂಭೀರ ಸ್ವರೂಪದ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಉಪಲೋಕಾಯುಕ್ತರ ಆಗಮನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಪತ್ರದಲ್ಲೇನಿದೆ?: ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಮೇ 18ರಂದು ಗದಗ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಗೆ ಪತ್ರ ರವಾನೆಯಾಗಿದ್ದು, ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಜೂ. 14ರಿಂದ 16ರ ವರೆಗೆ ಗದಗ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ವಿಚಾರಣೆ ನಡೆಸುವ ಜತೆಗೆ ಗದಗ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ಸಭೆ ನಡೆಸಲಿದ್ದಾರೆ. ಇದಕ್ಕಾಗಿ ನಿಮ್ಮ ಅಧೀನ ಅಧಿಕಾರಿಗಳು ಅಗತ್ಯ ಸಿದ್ಧತೆಯೊಂದಿಗೆ ಹಾಜರಿರುವಂತೆ ಸೂಚಿಸಲಾಗಿದೆ.

ದೂರು ನೀಡಲು ಸಿದ್ಧತೆ: ಗದಗ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ಹಲವಾರು ದಶಕಗಳಿಂದ ಇಲ್ಲಿಯೇ ಬೇರು ಬಿಟ್ಟಿದ್ದಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಯಾವುದೇ ಸರ್ಕಾರ ಬಂದರೂ ಅವರೇ ಪ್ರಮುಖ ಹುದ್ದೆಗಳಲ್ಲಿ ಮುಂದುವರಿಯುತ್ತಿದ್ದಾರೆ. ಇದರೊಟ್ಟಿಗೆ ಜಿಲ್ಲೆಯಲ್ಲಿ ಅಕ್ರಮ ಮರಳು, ಮಣ್ಣು, ಅಕ್ರಮ ಪಡಿತರ ಅಕ್ಕಿ, ಮಟ್ಕಾ, ಇಸ್ಪೀಟ್ ಎಲ್ಲವೂ ಸಲೀಸಾಗಿಯೇ ನಡೆಯುತ್ತಿದೆ. ಈ ಬಗ್ಗೆಯೂ ಹಲವಾರು ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಉಪಲೋಕಾಯುಕ್ತರ ಗಮನಕ್ಕೆ ತರಲು ತುದಿಗಾಲ ಮೇಲೆ ನಿಂತಿದ್ದಾರೆ.

ಕನ್ನಡಪ್ರಭ ವರದಿ: ಪ್ರಭಾರ ಗದಗ ಜಿಪಂ ಸಿಇಒ ಅವರು 3 ಪಶು ವೈದ್ಯಾಧಿಕಾರಿಗಳನ್ನು ತಾಪಂ ಇಒ ಆಗಿ ನೇಮಿಸಿ ಆದೇಶ ಹೊರಡಿಸಿದ್ದು, ಈ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ''''ಕನ್ನಡಪ್ರಭ'''' ಮಾ. 4ರಂದು ಸವಿಸ್ತಾರವಾದ ವರದಿ ಪ್ರಕಟಿಸಿತ್ತು. ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಉಲ್ಲಂಘನೆಯ ಬಗ್ಗೆಯೂ ಉಲ್ಲೇಖಿಸಿತ್ತು.