ಸಮಸ್ಯಾತ್ಮಕ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ,ಪರಿಶೀಲಿಸಿ: ಡೀಸಿ ಶುಭಾ ಕಲ್ಯಾಣ್

| Published : Apr 30 2024, 02:10 AM IST

ಸಾರಾಂಶ

ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಪ್ರತಿನಿತ್ಯ ಸಮರ್ಪಕ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳ ನಿವಾಸಿಗಳು ನೀರನ್ನು ಸಣ್ಣ ಹಾಗೂ ದೊಡ್ಡ ಟ್ಯಾಂಕ್‌ಗಳಲ್ಲಿ ಸಂಗ್ರಹಿಸುತ್ತಾರೆ. ಇಂತಹ ಸ್ಥಳಗಳಲ್ಲಿ ಅತೀ ಹೆಚ್ಚು ಸೊಳ್ಳೆಗಳು ಉತ್ಪತ್ತಿಗೊಂಡು ಮಲೇರಿಯಾ, ಡೆಂಗ್ಯೂವಿನಂತಹ ಅನೇಕ ಕಾಯಿಲೆಗಳು ಉಲ್ಭಣಗೊಳ್ಳುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಅಧಿಕಾರಿಗಳು ಸೇರಿ ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು ಅಂತಹ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು ಹಾಗೂ ಮೇವು ಬ್ಯಾಂಕ್ ಸ್ಥಾಪನೆಗೊಂಡ ಪ್ರದೇಶಗಳು ಸೇರಿ ಸಮಸ್ಯಾತ್ಮಕ ಪ್ರದೇಶಗಳಿಗೆ ಅಧಿಕಾರಿಗಳು ಆಗಾಗ್ಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆ ಅವಧಿ, ಸುಸ್ಥಿತಿಯಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ, ಬತ್ತಿ ಹೋಗಿರುವ ಕೊಳವೆ ಬಾವಿಗಳು, ದುರಸ್ತಿಯಲ್ಲಿರುವ ಕೊಳವೆ ಬಾವಿಗಳು, ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆಯುತ್ತಿರುವ ಗ್ರಾಮಗಳು ಸೇರಿ ಮೊದಲಾದ ಮಾಹಿತಿ ಪಡೆದ ಅವರು, ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.ಜಿಲ್ಲೆಯಾದ್ಯಂತ ಸಮರ್ಪಕ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳು ಸಲ್ಲಿಸಿದ ಎಲ್ಲಾ ಕಾಮಗಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಅನುಮೋದನೆ ನೀಡಲಾಗಿದ್ದು, ಎನ್‌ಡಿ ಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಧಿಕಾರಿಗಳು ಕಾರ್ಯೋನ್ಮುಖರಾಗಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಅಗತ್ಯವಿರುವ ಕಡೆ ಖಾಸಗಿ ಕೊಳವೆ ಬಾವಿಗಳು, ಟ್ಯಾಂಕರ್‌ಗಳ ಮೂಲಕ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಬತ್ತಿ ಹೋದ ಕೊಳವೆ ಬಾವಿಗಳನ್ನು ಇನ್ನಷ್ಟು ಆಳ ಕೊರೆಯಲು ಕ್ರಮಕೈಗೊಳ್ಳಬೇಕು, ಅವಶ್ಯಕತೆಯಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಯಲು ಈಗಾಗಲೇ ಅನುಮತಿ ನೀಡಲಾಗಿದ್ದು, ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಸಂಬಂಧ ಕಾರ್ಯಪಡೆ ಸಭೆಯಲ್ಲಿ ಅನುಮೋದನೆ ಪಡೆದು ಕ್ರಮವಹಿಸಬೇಕು. ಬರಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಜಿಲ್ಲಾಡಳಿತ ಹಾಗೂ ಜಿಪಂ ಗಮನಕ್ಕೆ ತರಬೇಕು ಎಂದು ಸೂಚಿಸಿದರು.ನಿಗಧಿತ ಅವಧಿಯಲ್ಲಿ ವೆಚ್ಚ ಪಾವತಿಗೆ ಸೂಚನೆ: ಮೇವಿನ ಬ್ಯಾಂಕ್, ಕುಡಿಯುವ ನೀರು ಮೊದಲಾದ ಕಾರ್ಯಗಳಿಗಾಗಿ ಮಾಡಲಾದ ವೆಚ್ಚಗಳನ್ನು ಸಂಬಂಧಿಸಿದವರಿಗೆ ನಿಗಧಿತ ಅವಧಿಯೊಳಗೆ ಪಾವತಿ ಮಾಡಬೇಕು. ಯಾವುದೇ ಬಿಲ್ಲುಗಳನ್ನು ಅನಗತ್ಯ ಕಾರಣಗಳಿಗಾಗಿ ಬಾಕಿ ಇಟ್ಟುಕೊಳ್ಳಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಪ್ರತಿನಿತ್ಯ ಸಮರ್ಪಕ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳ ನಿವಾಸಿಗಳು ನೀರನ್ನು ಸಣ್ಣ ಹಾಗೂ ದೊಡ್ಡ ಟ್ಯಾಂಕ್‌ಗಳಲ್ಲಿ ಸಂಗ್ರಹಿಸುತ್ತಾರೆ. ಇಂತಹ ಸ್ಥಳಗಳಲ್ಲಿ ಅತೀ ಹೆಚ್ಚು ಸೊಳ್ಳೆಗಳು ಉತ್ಪತ್ತಿಗೊಂಡು ಮಲೇರಿಯಾ, ಡೆಂಗ್ಯೂವಿನಂತಹ ಅನೇಕ ಕಾಯಿಲೆಗಳು ಉಲ್ಭಣಗೊಳ್ಳುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಅಧಿಕಾರಿಗಳು ಸೇರಿ ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು ಅಂತಹ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಸೂಚಿಸಿದರು. ಹುಳಿಯಾರಿನಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಲು ನಿರ್ಣಯಿಸಲಾಗಿದ್ದು, ಜಿಲ್ಲೆಯಾದ್ಯಂತ ಹೆಚ್ಚುವರಿ ಮೇವಿನ ಬ್ಯಾಂಕ್ ಸ್ಥಾಪಿಸಲು ಅವಶ್ಯಕತೆ ಇದ್ದಲ್ಲಿ ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಹೊಸದಾಗಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುದ್ದೀಕರಣಗೊಳಿಸಿರುವ ಬಗ್ಗೆ ಮಾಹಿತಿ ಪಡೆದ ಅವರು, ಬಾಡಿಗೆ ಆಧಾರದಲ್ಲಿ ಕುಡಿಯುವ ನೀರು ಪಡೆಯುತ್ತಿರುವ ಖಾಸಗಿ ಕೊಳವೆ ಬಾವಿಗಳು ಸೇರಿ ಅಧೀನದಲ್ಲಿರುವ ಎಲ್ಲಾ ಕೊಳವೆ ಬಾವಿಗಳಿಗೆ ಕಡ್ಡಾಯವಾಗಿ ನಿರಂತರ ಜ್ಯೋತಿಯಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಗಿರೀಶ್ ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ರವೀಶ್, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್ ಕುಮಾರ್, ಸೇರಿ ಎಲ್ಲಾ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಸಮಸ್ಯೆಗಳೆಲ್ಲಿರುತ್ತವೆಯೋ ಅಲ್ಲಿ ತುರ್ತು ಕ್ರಮ ಕೈಗೊಳ್ಳಿ:

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಸಮರ್ಪಕ ಬರ ನಿರ್ವಹಣೆ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇನ್ನು ಅವಶ್ಯಕತೆ ಇದ್ದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದಲ್ಲಿ ತ್ವರಿತವಾಗಿ ಅನುಮೋದನೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಎಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಜನವಸತಿ ಪ್ರದೇಶಗಳಲ್ಲಿ 60ಕ್ಕಿಂತ ಹೆಚ್ಚು ಮನೆಗಳಿರುತ್ತವೋ, ಅಂತಹ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಲ್ಲಿ, ಬದಲಿ ವ್ಯವಸ್ಥೆಯಾಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಮರ್ಪಕ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಬಗ್ಗೆ ಭಾವಚಿತ್ರಗಳನ್ನು ಲಗತ್ತಿಸಿ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.