ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಗಾಳಿ- ಮಳೆಯಿಂದ ಅವಘಡ ಸಂಭವಿಸಿದ ಪ್ರದೇಶಳಿಗೆ ಅಧಿಕಾರಿಗಳು ತುರ್ತಾಗಿ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ಹಾಗೂ ಕುಡಿಯುವ ನೀರಿನ ಸ್ಥಿಗತಿಗಳ ಕುರಿತಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಗಾಳಿ- ಮಳೆಯಿಂದ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬೀಳುವುದು, ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಸಂಪರ್ಕ ಕಡಿತಗೊಂಡರೆ ತುರ್ತಾಗಿ ಸ್ಪಂದಿಸಿ ಕ್ರಮ ವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನೆ ಹಾಗೂ ರಸ್ತೆಗಳ ಮೇಲೆ ಬಾಗಿದ ಹಾಗೂ ಹಳೆ ಮರಗಳನ್ನು ಮತ್ತು ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಹಾಕಬೇಕು ಎಂದು ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.ಗಾಳಿ- ಮಳೆಯಿಂದ ಯಾವುದೇ ಜೀವಹಾನಿ ಹಾಗೂ ಜಾನುವಾರು ಪ್ರಾಣಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅವಘಡಗಳು ಸಂಭವಿಸಿದಾಗ ಪರಿಹಾರ ಒಳಗೊಂಡಂತೆ ತಕ್ಷಣ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದರು. ಮನೆಹಾನಿ, ಜಾನುವಾರು ಹಾನಿ ಹಾಗೂ ಬೆಳೆಹಾನಿ ವರದಿ ಪಾರದರ್ಶಕವಾಗಿ ಹಾಗೂ ನಿಖರವಾದ ವರದಿ ನೀಡಬೇಕು. ತಹಸೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮನೆಹಾನಿ ವರದಿ ನೀಡುವಾಗ ಈ ಮಳೆಗೆ ಹಾನಿಯಾಗಿದೆಯಾ ಅಥವಾ ಈಗಾಗಲೇ ಪರಿಹಾರ ಪಡೆದುಕೊಂಡಿದ್ದಾರಾ? ಎಂದು ಕೂಲಂಕಷವಾಗಿ ಪರಿಶೀಲಿಸಿ ನಿಖರವಾದ ಮಾಹಿತಿ ನೀಡಬೇಕು ಎಂದರು. ನಿಗಾ ವಹಿಸಿ: ಗ್ರಾಮೀಣ ಪ್ರದೇಶದಲ್ಲಿನ ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳ ಬಗ್ಗೆ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತೀವ್ರ ನಿಗಾವಹಿಸಬೇಕು. ಮಳೆಗೆ ಮನೆಗಳು ನೆನೆದು ಬಿಳುವ ಸಾಧ್ಯತೆ ಇರುವುದರಿಂದ, ಅಂತಹ ಮನೆಗಳಲ್ಲಿ ವಾಸಿಸುವವರಿಗೆ ರಾತ್ರಿ ಸಮಯದಲ್ಲಿ ಶಾಲೆ- ಅಂಗನವಾಡಿ ಅಥವಾ ಸಮುದಾಯ ಭವನದಲ್ಲಿ ವಸತಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾಜಕಾಲುವೆಗಳು ಒಳಗೊಂಡಂತೆ ಎಲ್ಲ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಕಾಲುವೆಗಳಲ್ಲಿ ನೀರು ನಿಲ್ಲದಂತೆ ಹಾಗೂ ಕಾಲುವೆಗಳ ನೀರು ರಸ್ತೆಗಳ ಮೇಲೆ ಹರಿಯದಂತೆ ನೋಡಿಕೊಳ್ಳಬೇಕು ಎಂದರು. ಕೆರೆಗಳ ಒತ್ತುವರಿ ತೆರವಿಗೆ ಹಾಗೂ ಕಾಲುವೆಗಳ ಸ್ವಚ್ಛತೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಅವರು, ಮಳೆ ನೀರಿನಿಂದಾಗಿ ಕೆರೆಯ ದಡಗಳು ಒಡೆದು ಹೋಗುವುದು, ಕೋಡಿಯ ಮೂಲಕ ರಸ್ತೆಗೆ ನೀರು ಹರಿದು ಸಂಪರ್ಕ ಕಡಿತಗೊಳ್ಳುವ ಪ್ರದೇಶಗಳ ಮೇಲೆ ನಿಗಾ ವಹಿಸಲು ತಿಳಿಸಿದರು.ಸಹಾಯವಾಣಿ: ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರಿನ ನಿರಂತರ ಗುಡುಗು ಸಿಡಿಲು ಸಹಿತ ಮಳೆ- ಗಾಳಿಯಿಂದ ಉಂಟಾದ ಹಾನಿಗೆ ಸ್ಪಂದಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಚಿತ ಸಹಾಯವಾಣಿ ಕೇಂದ್ರ 08375-249102, 1077 ತೆರೆಯಲಾಗಿದೆ. ಸಹಾಯವಾಣಿ ನಿರಂತರವಾಗಿ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರಿಂದ ಸ್ವೀಕೃತವಾಗುವ ಕರೆಗಳಿಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ತಾಲೂಕುಗಳ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.