ಕನ್ನಡಪ್ರಭ ವಾರ್ತೆ ಟಿ. ನರಸೀಪುರತಾಲೂಕಿನ ಹಳೇ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಮೃತರಾದ ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಪುತ್ರಿ ರಕ್ಷಿತಾ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.ದುರಂತದಲ್ಲಿ ಮೃತಪಟ್ಟವರ ನಿವಾಸಕ್ಕೆ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪುಟ್ಟರಂಗಶೆಟ್ಟಿ ಹಾಗೂ ಎಚ್.ಎಂ. ರೇವಣ್ಣ ಅವರೊಂದಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಕುಟುಂಬದ ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.ಈ ವೇಳೆ ಮಾತನಾಡಿದ ಅವರು, ಇಂತಹ ಮನಕಲಕುವ ಘಟನೆ ನಡೆಯಬಾರದಿತ್ತು. ಆದರೆ ಈಗ ಸಂಭವಿಸಿರುವ ದುರ್ಘಟನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಕುಟುಂಬದ ಉಳಿದ ಸದಸ್ಯರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಜೀವನವನ್ನು ಧೈರ್ಯದಿಂದ ಎದುರಿಸಬೇಕು. ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ನಿಮ್ಮೊಂದಿಗೆ ನಿಲ್ಲಲಿದ್ದಾರೆ ಎಂದು ಧೈರ್ಯ ತುಂಬಿದರು.ಬಳಿಕ ಜಿಪಂ ಮಾಜಿ ಸದಸ್ಯ ಕೆ. ಮಹದೇವ್, ಪಿ.ಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪಯ್ಯನಹುಂಡಿ ಮಹದೇವಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಸಿ.ಟಿ. ಕುಮಾರ್ ಅವರು ಪ್ರಕರಣದ ಸಂಪೂರ್ಣ ವಿವರವನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಿದರು.ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಹೊಸ ಮನೆಯ ಬಳಿ ಆರೋಪಿ ಹಾಗೂ ಆತನ ಕುಟುಂಬದವರು ಬಂದು ಜಮೀನಿನ ವಿಚಾರವಾಗಿ ಗಲಾಟೆ ನಡೆಸಿ ಬೆದರಿಕೆ ಹಾಕಿದ್ದರಿಂದ ಕುಟುಂಬ ಮತ್ತಷ್ಟು ಆತಂಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿತ್ತು ಎಂದು ಮುಖಂಡರು ತಿಳಿಸಿದರು. ಈ ಎಲ್ಲ ಬೆಳವಣಿಗೆಗಳಿಂದ ಕುಟುಂಬ ತೀವ್ರವಾಗಿ ನೊಂದಿದ್ದು, ಕೊನೆಗೆ ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ದುರಂತವಾಗಿ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.ಈ ಮಾಹಿತಿ ಆಲಿಸಿದ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಯಾವುದೇ ರಾಜಕೀಯ ಅಥವಾ ಇತರೆ ಒತ್ತಡಗಳಿಗೆ ಮಣಿಯದೆ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಎಸ್ಪಿಗೆ ಸೂಚಿಸಿದರು.ಅಲ್ಲದೆ, ಹಲವು ವರ್ಷಗಳಿಂದ ಶಿವಣ್ಣ ಅವರೇ ಕೃಷಿ ಮಾಡಿಕೊಂಡು ಬರುತ್ತಿದ್ದ ಜಮೀನಿನ ದಾಖಲೆ ಹಾಗೂ ಕಾನೂನು ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯ ಸರ್ವೇ ಹಾಗೂ ಪೋಡಿ ಕಾರ್ಯ ಪೂರ್ಣಗೊಳಿಸಿ ಮೃತರ ಕುಟುಂಬದ ಹೆಸರಿಗೆ ಖಾತೆ ಮಾಡುವಂತೆ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ಅವರಿಗೆ ನಿರ್ದೇಶನ ನೀಡಿದರು.ಈ ವೇಳೆ ಜಿಪಂ ಮಾಜಿ ಸದಸ್ಯ ಕೆ. ಮಹದೇವ್ ಅವರು ಮೃತ ಶಿವಣ್ಣ ಅವರ ಮತ್ತೊಬ್ಬ ಪುತ್ರಿ ಬೃಂದಾಗೆ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಿದರು. ಅಲ್ಲದೆ, ಪ್ರಕರಣದ ಪ್ರಮುಖ ಆರೋಪಿಯ ಕುಟುಂಬದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದರು.