ದೇವಾಲಯಗಳಿಗೆ ಹೋಗಿ ಭಕ್ತಿಯಿಂದ ಭಗವಂತನಿಗೆ ನಮ್ಮ ಕಷ್ಟ ಸುಖಗಳನ್ನು ನಿವೇದನೆ ಮಾಡಿಕೊಂಡಾಗ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿಯು ದೊರೆಯುವ ಜೊತೆಗೆ ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡ ಪಡೆಯಬಹುದು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುವ ಜೊತೆಗೆ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ತಾಲೂಕಿನ ತೇಗನಹಳ್ಳಿ ಶ್ರೀಕೋಣಮ್ಮ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಶ್ರೀಕೋಣಮ್ಮ ಲಕ್ಷ್ಮೀದೇವಿ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಾಲಯಗಳಿಗೆ ಹೋಗಿ ಭಕ್ತಿಯಿಂದ ಭಗವಂತನಿಗೆ ನಮ್ಮ ಕಷ್ಟ ಸುಖಗಳನ್ನು ನಿವೇದನೆ ಮಾಡಿಕೊಂಡಾಗ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿಯು ದೊರೆಯುವ ಜೊತೆಗೆ ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡ ಪಡೆಯಬಹುದು ಎಂದರು.
ಮರಡಿ ಲಿಂಗೇಶ್ವರ ಸುಕ್ಷೇತ್ರದ ದೇವಾಲಯದ ಪುನರುಜ್ಜೀವನದ ಕಾಮಗಾರಿ ತಡೆ ನೀಡಿ ತೊಂದರೆ ನೀಡುತ್ತಿದ್ದೇನೆ ಎಂದು ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ದೇವಾಲಯ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರನು ನಿಧಾನ ಗತಿ ಕಾಮಗಾರಿಯಿಂದ ಹಣ ವಾಪಸ್ ಹೋಗುವ ಆತಂಕವಿತ್ತು ಎಂದರು.ದೇವಾಲಯಕ್ಕೆ ಬಿಡುಗಡೆಯಾದ ಹಣವು ವಾಪಸ್ ಹೋಗದಂತೆ ತಡೆಯಲು ಗುತ್ತಿಗೆದಾರರನ್ನು ಬದಲಿಸಿ ಶೀಘ್ರವೇ ದೇವಾಲಯದ ಕಾಮಗಾರಿ ಸಂಪೂರ್ಣಗೊಳಿಸಿ ಎಂದು ಸಂಬಂಧಪಟ್ಟ ಮುಖ್ಯ ಅಭಿಯಂತರರನ್ನು ಒತ್ತಾಯಿಸಿದ್ದೇನೆಯೇ ಹೊರತು ಹಣವನ್ನು ಬೇರೆ ಕೆಲಸಕ್ಕೆ ವರ್ಗಾಯಿಸಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಗುಲ ಲೋಕಾರ್ಪಣೆ ಮಾಡಿದ ಕೃಷ್ಣರಾಜನಗರದ ಕಾಗಿನೆಲೆ ಕನಕ ಗುರುಪೀಠದ ಡಾ.ಶ್ರೀ.ಶಿವಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕನ್ನಡದ ನೆಲವು ದೇವಾಲಯಗಳ ಸಂಸ್ಕೃತಿಯ ಬೀಡಾಗಿದೆ. ತಾಯಿ ಶ್ರೀಕೋಣಮ್ಮ ಲಕ್ಷ್ಮೀ ದೇವಿಗೆ ಅಪಾರ ದೈವಿ ಶಕ್ತಿಯಿದೆ. ದೇವಾಲಯಗಳನ್ನು ಪುನರುಜ್ಜೀವನಗೊಳಿಸಿ ನಮ್ಮ ಸಂಸ್ಕೃತಿ ಉಳಿಸಿ ಮುಂದಿನ ತಲೆಮಾರಿಗೆ ಜೋಪಾನ ಮಾಡುತ್ತಿರುವ ತೇಗನಹಳ್ಳಿ ಗ್ರಾಮಸ್ಥರ ಸಮಾಜಮುಖಿ ಕಾಳಜಿಯು ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಳವಳ್ಳಿ ಸಿದ್ದರಾಮೇಶ್ವರ ಪುಣ್ಯ ಪೀಠದ ಸದ್ಗುರು ಡಾ.ಮಾದೇಶ್ ಗುರೂಜಿ, ಸಂಗೊಳ್ಳಿ ರಾಯಣ್ಣ ಅಭಿವೃದ್ದಿ ಪ್ರಾಧಿಕಾರದ ನಿರ್ದೇಶಕ ಕೆ.ಆರ್.ರವೀಂದ್ರಬಾಬು, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ, ಶ್ರೀ ಕೋಣಮ್ಮ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಹೆಗ್ಗಡಿ ನಿಂಗರಾಜೇಗೌಡ, ಎಸ್.ಎಂ. ಆಟೋಮೊಬೈಲ್ಸ್ ಮಾಲೀಕ ಟಿ.ಎಸ್.ಮಂಜು, ಮೈಸೂರಿನ ಅಕ್ಕಿ ಚಿಕ್ಕಣ್ಣ ಕುಟುಂಬದ ಶಾರದಮ್ಮ ಸತ್ಯನಾರಾಯಣ, ಭೂ ದಾಖಲೆಗಳ ನಿವೃತ್ತ ಸಹಾಯಕ ನಿರ್ದೇಶಕ ಕೆ.ಆರ್.ರಮೇಶ್, ಸಮಾಜದ ಹಿರಿಯ ಮುಖಂಡರಾದ ಮಾರ್ಗೋನಹಳ್ಳಿ ಕಾಳಿಂಗಪ್ಪ, ಕೋಣಮ್ಮ ಲಕ್ಷ್ಮೀದೇವಿ ಅಮ್ಮನ ಅರ್ಚಕರಾದ ಅಜ್ಜಗುಂಡೇಗೌಡ, ಟಿ.ಎನ್. ಲೋಕೇಶ್, ಪ್ರವೀಣ್, ಶಂಕರ್, ನಾಗೇಗೌಡ, ನಿಂಗರಾಜೇಗೌಡ, ಧರ್ಮೇಶ್ ಸೇರಿದಂತೆ ಹಲವು ಗ್ರಾಮಗಳ ಭಕ್ತರು ಭಾಗವಹಿಸಿದ್ದರು.