ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಪಟ್ಟಣದ ಅಣ್ಣಪ್ಪ ಬೀದಿಯಲ್ಲಿರುವ ಪ್ರಸಿದ್ಧ ಶ್ರೀ ಸತ್ಯಪ್ರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಶುಭದಿನದಂದು ಅಲಂಕಾರ ಪ್ರಿಯ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಯೊಂದಿಗೆ ಸುಪ್ರಭಾತ ಸೇವೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜಿಸಲಾಯಿತು.ನಗರದ ರಾಜ ಬೀದಿಯಲ್ಲಿ ಸ್ವಾಮಿ ಸಂಕೀರ್ತನೆ, ಪಂಚಾಮೃತ ಅಭಿಷೇಕ, ವೈಕುಂಠ ನಾರಾಯಣ ಪೂಜೆ, ತೋಮಾಲ ಸೇವೆ, ವಿಶೇಷ ಹೂವುಗಳಿಂದ ಅಲಂಕಾರ, ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯದೊಂದಿಗೆ 7 ಗಂಟೆಗೆ ಮಹಾಮಂಗಳಾರತಿ ನಂತರ ವೈಕುಂಠ ದ್ವಾರ ಪ್ರವೇಶ ಮತ್ತು ವೈಕುಂಠ ನಾರಾಯಣ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಅಖಂಡ ಭಜನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ವಿಜೃಂಭಣೆಯಿಂದ ನಡೆಯಿತು.
ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ. ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರನ ದರ್ಶನ್ ಪಡೆದರೆ ಮೋಕ್ಷ ಪ್ರಾಪ್ತಿ ಎಂಬ ಭಾವನೆಯಿಂದ ಬೆಳಗಿನಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಂಡಿದ್ದರು.ಭಕ್ತರು ಗೋವಿಂದ, ಗೋವಿಂದ, ಗೋವಿಂದ ನಾಮ ಸ್ಮರಣೆ ಮೊಳಗಿಸಿದರು. ನಾಡಿನೆಲ್ಲೆಡೆ ಗೋವಿಂದ ನಾಮ ಸ್ಮರಣೆಯಿಂದ ಸ್ವಾಮಿಯನ್ನು ಪೂಜಿಸಿದರೆ ಫಲಪ್ರದ ಎಂಬ ನಂಬಿಕೆ ಇದೆ. ಭಕ್ತರ ಬಳಗ ವಿಶೇಷ ಸರತಿ ಸಾಲಿನಲ್ಲಿ ಭಗವಂತನ ದರ್ಶನ ಪಡೆದು ಭಕ್ತರು ನಮನ ಸಲ್ಲಿಸಿದರು. ನಾಡಿನೆಲ್ಲೆಡೆ ದೇವಾಲಯದಲ್ಲಿ ತಿಮ್ಮಪ್ಪ ಸ್ವಾಮಿಯನ್ನು ಕಣ್ತುಂಬಿ ಕೊಳ್ಳುತ್ತಿರುವ ಭಕ್ತ ಸಾಗರ, ತರಿಕೆರೆ ಪಟ್ಟಣದ ಎಲ್ಲಾ ಭಜನಾ ಮಂಡಳಿಗಳು ಸದಸ್ಯರು ಅಖಂಡ ಭಜನೆಯಲ್ಲಿ ಭಾಗವಹಿಸುತ್ತಿದ್ದರು. ವೈಕುಂಠ ಏಕಾದಶಿ ವೈಭವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಸಪ್ತಗಿರಿ, ಶ್ರೀಶೇಷಗಿರಿ ಭಜನಾ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿ, ಭಜನೆ ಮಾಡಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕೃಪೆಗೆ ಪಾತ್ರರಾದರು. ಭಕ್ತರಿಗೆ ಲಾಡು ಪ್ರಸಾದ ವಿತರಣೆ ಮಾಡಲಾಯಿತು.