ವಿಶ್ವೇಶ್ವರಯ್ಯನವರದ್ದು ದೂರದೃಷ್ಟಿಯ ಅಭಿವೃದ್ಧಿ: ಗಜಾನನ ಶರ್ಮ

| Published : Sep 16 2024, 01:47 AM IST

ವಿಶ್ವೇಶ್ವರಯ್ಯನವರದ್ದು ದೂರದೃಷ್ಟಿಯ ಅಭಿವೃದ್ಧಿ: ಗಜಾನನ ಶರ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭಾನುವಾರ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ನಡೆಯಿತು. ಇತಿಹಾಸ ತಜ್ಞ ಗಜಾನನ ಶರ್ಮ ಅವರು ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೂರದೃಷ್ಟಿಯ ಯೋಜಿತ ಅಭಿವೃದ್ಧಿ ಪರಿಕಲ್ಪನೆ ಹೊಂದಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ಅವರು ಕ್ಲಿಷ್ಟಕರ ಸಂದರ್ಭದಲ್ಲೂ ತಮ್ಮ ಬದ್ಧತೆಯಿಂದ ಹಿಂದೆ ಸರಿದಿರಲಿಲ್ಲ ಎಂದು ಇತಿಹಾಸಕಾರ ಗಜಾನನ ಶರ್ಮಾ ಹೇಳಿದರು.

ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತ ಪ್ರದರ್ಶನ ಫಲಕ ಅನಾವರಣ, ಸರ್‌ ಎಂ.ವಿ. ಜನ್ಮ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸಮಯಪ್ರಜ್ಞೆ, ಕಾಯಕನಿಷ್ಠೆ, ಕಾರ್ಯೋತ್ಸಾಹ ಮತ್ತು ದೇಶಪ್ರೇಮಕ್ಕೆ ಹೆಸರಾಗಿದ್ದ ವಿಶ್ವೇಶ್ವರಯ್ಯ ಅವರು 1921ರಲ್ಲಿಯೇ ಭಾರತವು ಹೇಗೆ ಪುನರ್‌ನಿರ್ಮಾಣ ಅಗಬೇಕು ಎಂಬುದರ ಬಗ್ಗೆ ಬರೆದಿದ್ದರು. 1933ರಲ್ಲಿ ‘ಪ್ಲಾನ್ಡ್‌ ಎಕಾನಮಿ ಆಫ್‌ ಇಂಡಿಯಾ’ ಎಂಬ ಕೃತಿ ಬರೆದಿದ್ದರು. ಪಂಚವಾರ್ಷಿಕ ಯೋಜನೆ, ದಶವಾರ್ಷಿಕ ಯೋಜನೆಗಳನ್ನು ಅದರ ಮೂಲಕ ತಿಳಿಸಿದ್ದರು. ಅದೇ ಮುಂದೆ ಯೋಜನಾ ಆಯೋಗ ರಚನೆಗೆ ಬುನಾದಿ ಆಯಿತು ಎಂದು ಹೇಳಿದರು.ವಿಶ್ವೇಶ್ವರಯ್ಯ ಅವರಿಗೆ ತಾನು ಒಪ್ಪದೇ ಇರುವುದನ್ನು ನೇರವಾಗಿ ಹೇಳುವ ಪ್ರಾಮಾಣಿಕತೆ ಇತ್ತು. 1918ರಲ್ಲಿ ಮಿಲ್ಲರ್‌ ಸಮಿತಿಯ ವರದಿಯನ್ನು ಅವರು ಒಪ್ಪದೇ ಇದ್ದಾಗ ರಾಜೀನಾಮೆ ನೀಡಬೇಕಾದ ಸನ್ನಿವೇಶ ಬಂದರೂ ತನ್ನ ನಂಬಿಕೆ, ಬದ್ಧತೆಯಿಂದ ಹಿಂದೆ ಸರಿದಿರಲಿಲ್ಲ ಎಂದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ರಮೇಶಚಂದ್ರ ಲಹೋಟಿ, ಹೊಸ ಲೇಖಕರ ಅತ್ಯುತ್ತಮ ಒಂದು ಕವನ ಸಂಕಲನ, ಒಂದು ಗದ್ಯ ಕೃತಿಗೆ ತಲಾ ₹25 ಸಾವಿರದಂತೆ ಪ್ರಶಸ್ತಿ ನೀಡಲು ವರ್ಷಕ್ಕೆ ₹50 ಸಾವಿರದಂತೆ ಐದು ವರ್ಷ ನೀಡುವುದಾಗಿ ಎಂದು ಭರವಸೆ ನೀಡಿದರು.

ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನದ ನೆಲವಾಗಿ ಅಭಿವೃದ್ಧಿ ಹೊಂದುವಲ್ಲಿ ವಿಶ್ವೇಶ್ವರಯ್ಯ ಅವರ ಪರಿಶ್ರಮ, ಕೊಡುಗೆ ದೂರದೃಷ್ಟಿ, ಸಮಾಜಮುಖಿ ಯೋಜನೆಗಳ ಬುನಾದಿ ಕಾರಣ. ಬೆಂಗಳೂರು ಜನ ಒಂದು ಲೋಟ ನೀರು ಕುಡಿಯಬೇಕಿದ್ದರೂ ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿಕೊಳ್ಳಬೇಕು ಎಂದರು.

2024ನೆಯ ಸಾಲಿನ ‘ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿ’ಯನ್ನು ಎಂ.ಎನ್. ಸತೀಶ್ ಕುಮಾರ್ ಅವರಿಗೆ ಹಾಗೂ ‘ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿ’ಯನ್ನು ದಯಾನಂದ ಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.

ದತ್ತಿ ದಾನಿ ಎಂ.ಜಿ. ನಾಗರಾಜ್, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾ ಶಿವಲಿಂಗಯ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಪದ್ಮಿನಿ ನಾಗರಾಜು, ಗೌರವ ಕೋಶಾದ್ಯಕ್ಷ ಬಿ.ಎಂ.ಪಟೇಲ ಪಾಂಡು, ಪ್ರಕಟಣಾ ವಿಭಾಗ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ಇದ್ದರು.