ರಾಮಕುಂಜದಿಂದ ರಾಮ ಜನ್ಮ ಭೂಮಿಯವರೆಗೆ ವಿಶ್ವೇಶತೀರ್ಥರ ಪಯಣ

| Published : Jan 22 2024, 02:19 AM IST

ರಾಮಕುಂಜದಿಂದ ರಾಮ ಜನ್ಮ ಭೂಮಿಯವರೆಗೆ ವಿಶ್ವೇಶತೀರ್ಥರ ಪಯಣ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ರಾಮಕುಂಜ ಪೇಜಾವರ ಮಠಾಧೀಶ ವೃಂದಾವನಸ್ಥ ವಿಶ್ವೇಶತೀರ್ಥರ ಜನ್ಮ ಭೂಮಿ. ಈ ಹಳ್ಳಿಯ ಸಂಸ್ಕಾರವಂತ ಕುಟುಂಬದ ಕುಡಿ ವೆಂಕಟ್ರಾಮ. ಪೇಜಾವರ ಪೀಠವೇರಿ ಸಂತ ಕುಲಕ್ಕೆ ಆದರ್ಶತೆ ತೋರಿದ, ಆಧುನಿಕ ಜಗತ್ತಿಗೆ ಪರಿವರ್ತನೆಯ ಪಾಠ ಹೇಳಿದ ಮಹಿಮಾನ್ವಿತರು. ಅಯೋಧ್ಯೆ ಹೋರಾಟದ ವರೆಗಿನ ಅವರು ಸಾಗಿದ ದಾರಿ ಅಪೂರ್ವ.

ಶ್ರೀರಾಮಚಂದ್ರ ನಮ್ಮ ಅಸ್ಮಿತೆ. ನಮ್ಮ ಆದರ್ಶಪುರುಷ. ಉತ್ತರ- ದಕ್ಷಿಣ ಭೇದವಿಲ್ಲ. ರಾಷ್ಟ್ರದ ಉದ್ದಗಲ ಮಾತ್ರವಲ್ಲ ವಿಶ್ವವೇ ಶ್ರೀ ರಾಮನ ಪ್ರಭಾವದಲ್ಲಿದೆ. ಆತ ಬದುಕಿ ಬಾಳಿದ ಸಹಸ್ರಾರು ಕುರುಹುಗಳು ದೇಶದಾದ್ಯಂತ ಇಂದಿಗೂ ಇದೆ. ಇಷ್ಟಿದ್ದರೂ ಅವೆಲ್ಲವುಗಳು ಕಪೋಲ ಕಲ್ಪಿತ, ಆತ ಸೇತುವೆ ನಿರ್ಮಿಸಲು ಇಂಜಿನಿಯರ್ ಆಗಿದ್ದನೇ ಎಂಬಿತ್ಯಾದಿ ಅವಹೇಳನಕಾರಿ ಟೀಕೆಗಳನ್ನು ನಮ್ಮವರಿಂದಲೇ ಕೇಳುತ್ತಾ ಕಿವುಡರಂತಿದ್ದೆವು. ಎಲ್ಲೂ ಗುಲ್ಲು ಎಬ್ಬಿಸಲಿಲ್ಲ. ಹಾಗೆಂದು ನಂಬಿಕೆ ಕಳೆದುಕೊಳ್ಳಲಿಲ್ಲ.ಸ್ಮರಣೆ ಬಿಡಲಿಲ್ಲ ಯಾಕೆಂದರೆ ಆತ ಸತ್ಯ- ನಿತ್ಯ ಸತ್ಯ ಎಂಬ ದೃಢ ನಂಬಿಕೆ.

ಶ್ರೀರಾಮನ ಜನ್ಮ ಭೂಮಿ ಎಂದು ಸಹಸ್ರಾರು ಸಾಕ್ಷಿಗಳು ಕಣ್ಣ ಮುಂದೆ ಇದ್ದರೂ, ಜನಮಾನಸ ಬಲವಾಗಿ ನಂಬಿದ್ದರೂ 500 ವರ್ಷಗಳಿಂದ ಕಾನೂನಾತ್ಮಕ ಪರಿಧಿಯಲ್ಲಿ ಎಳೆದಾಡುತ್ತಲೇ ಸಾಗಿ ಬಂದಿತು. ಹೋರಾಡಿದೆವು -ಹೊಡೆದಾಟ ಬಡಿದಾಟ ನಡೆಯಿತು. ಅಯೋಧ್ಯೆಯ ರಾಮಮಂದಿರದ ಕನಸು ಕಂಡೆವು .ಅದಕ್ಕಾಗಿ ಪ್ರಾಣಾರ್ಪಣೆ ಮಾಡಿದವರೆಷ್ಟೋ ಮನೆಮಠ ಕಳೆದುಕೊಂಡವರೆಷ್ಟೋ ಲೆಕ್ಕವಿಲ್ಲ. ರಾಷ್ಟ್ರದ ಎಲ್ಲ ಸಂತರು ಒಗ್ಗೂಡಿ ಹೋರಾಡಿದರು ಫಲ ಸಿಗಲಿಲ್ಲ. ಕೋರ್ಟುಗಳಿಗೆ ಅಲೆದಲೆದು ಫಲ ಸಿಗಲಿಲ್ಲ. ರಾಜಕೀಯ ಬಲವಿಲ್ಲದೆ ಅಸಾಧ್ಯವೆಂದು ನಂಬಿದ ಸಂತರು ಕೊನೆಗೂ, ಬೆಂಬಲಿಸುವ ರಾಜಕೀಯ ಪಕ್ಷದ ಕಡೆ ಒಲವು ಹರಿಸಿದರು. ಆಗ ಬೆಂಬಲಿಸಿದವರು ಬಿಜೆಪಿಯ ಕಟ್ಟಾಳುಗಳು. ಆ ಹೊತ್ತಿಗೆ ಪಕ್ಷದಲ್ಲಿ ಅಧಿಕಾರ ಬಲವಿರಲಿಲ್ಲ. ಅಧಿಕಾರವಿದ್ದವರು ಅತ್ತ -ಇತ್ತ ಎಂಬಂತೆ ಕಾಲ ಕಳೆದು ಸಮಸ್ಯೆಗಳನ್ನು ಸದಾ ಜೀವಂತವಾಗಿರಿಸಿದರು. ವಿರೋಧಿಗಳಿಗೆ ಮನ ನೋಯುವುದೆಂದು ದೂರವಿದ್ದರು. ಆದರೆ ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿಯವರು ನೇತೃತ್ವ ವಹಿಸಿ ಯುವ ರಕ್ತಗಳನ್ನು ಒಂದುಗೂಡಿಸಿದರು. 1992 ರಲ್ಲಿ ರಾಮಜನ್ಮ ಭೂಮಿಯ ಅಕ್ರಮ ಕಟ್ಟಡ ಪತನಗೊಂಡಲ್ಲಿಗೆ ಜಟಿಲ ಸಮಸ್ಯೆಯೊಂದು ನಿರ್ಣಾಯಕ ಹಂತ ತಲುಪಿತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಮಮಂದಿರ ಕಟ್ಟುವ ಶಪಥ ಮಾಡಿತು. ರಾಜಕೀಯ ಪಕ್ಷಗಳ ಆಶ್ವಾಸನೆಗಳು ಬಹುತೇಕ ಆಶ್ವಾಸನೆಗಳಾಗಿಯೇ ಉಳಿದು ಬಿಡುವುದಿದೆ. ಅದರಲ್ಲೂ ಇಂತಹ ಜಟಿಲ ಸಮಸ್ಯೆ ಪರಿಹಾರ ಸುಲಭದ ಮಾತಲ್ಲ. ವಿಧಿ ಲಿಖಿತವೋ ಎಂಬಂತೆ ರಾಮಮಂದಿರದ ಕನಸು ನಮ್ಮ ಕಣ್ಣಮುಂದೆ ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾ ಶಕ್ತಿಯೋ- ಯೋಗ್ಯತೆಯೋ- ಯೋಗವೋ ಅವರ ನೇತೃತ್ವದಲ್ಲಿ ಮಂದಿರದ ಪ್ರಾಣ ಪ್ರತಿಷ್ಠೆ ನಡೆಯುತ್ತಿದೆ. ರಾಮ ಭಕ್ತರು ಸಂತಸ ಸಂಭ್ರಮ ಪಡುತ್ತಿರುವರು. ವಿಶ್ವವೇ ಅಚ್ಚರಿಯಿಂದ ಮೂಕ ವಿಸ್ಮಿತವಾಗಿದೆ. ನಂಬಿಕೆ ಕೊನೆಗೂ ಗೆದ್ದು ಬಿಟ್ಟಿತು.ರಾಮಮಂದಿರ ನಿರ್ಮಾಣದಲ್ಲಿ ದಕ್ಷಿಣ ಭಾರತದಲ್ಲಿರುವ ಕನ್ನಡಿಗರ ಹೋರಾಟ ಕಡಿಮೆಯೇನಿಲ್ಲ. ರಾಮ ಈ ಮಣ್ಣಿಗೂ ಕಾಲಿಟ್ಟು ಶತ ಶತಮಾನಗಳಿಗೂ ಅಚ್ಚಳಿಯದ ಛಾಪು ಮೂಡಿಸಿರುವನು. ಆತ ನಮ್ಮ ಮೈ ಮನವೆಲ್ಲಾ ಆವರಿಸಿ ಬಿಟ್ಟಿದ್ದಾನೆ. ರಾಮಾಯಣದ ಕಥೆ ಬದುಕಿನ ಅವಿಭಾಜ್ಯ ಅಂಗ. ಸತ್ಯ- ನ್ಯಾಯ- ತ್ಯಾಗಗಳಿಗೆ ಆತನೇ ಆದರ್ಶ. ಆತನ ಬದುಕು ನಮಗೊಂದು ಮಾರ್ಗದರ್ಶಿ. ಅವಿದ್ಯಾವಂತರ ನಾಲಗೆಯ ತುದಿಯಲ್ಲೂ ಆತನದೇ ಆದರ್ಶಗಳು ಉಲ್ಲೇಖಿಸಲ್ಪಡುತ್ತವೆ. ಸಹಜವಾಗಿಯೇ ನಮ್ಮಲ್ಲಿ ರಾಮ ಭಕ್ತಿ ಹೃದ್ಗತವಾಗಿದೆ. ವಂಶವಾಹಿನಿಯಲ್ಲೇ ಹರಿದಾಡುತ್ತಿದೆ. ರಾಮನಾಮ ಪ್ರತಿ ಕುಟುಂಬಗಳಲ್ಲೂ ಹಾಸು ಹೊಕ್ಕಾಗಿದೆ. ನಮ್ಮ ಮಕ್ಕಳಿಗೆ ರಾಮ-ಕೃಷ್ಣರ ವೇಷತೊಡಿಸಿ ಸಂಭ್ರಮಿಸುವ ಸಂಸ್ಕೃತಿ ನಮ್ಮದು.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ರಾಮಕುಂಜ ಪೇಜಾವರ ಮಠಾಧೀಶ ವೃಂದಾವನಸ್ಥ ವಿಶ್ವೇಶತೀರ್ಥರ ಜನ್ಮ ಭೂಮಿ. ಈ ಹಳ್ಳಿಯ ಸಂಸ್ಕಾರವಂತ ಕುಟುಂಬದ ಕುಡಿ ವೆಂಕಟ್ರಾಮ. ಪೇಜಾವರ ಪೀಠವೇರಿ ಸಂತ ಕುಲಕ್ಕೆ ಆದರ್ಶತೆ ತೋರಿದ, ಆಧುನಿಕ ಜಗತ್ತಿಗೆ ಪರಿವರ್ತನೆಯ ಪಾಠ ಹೇಳಿದ ಮಹಿಮಾನ್ವಿತರು. ಮಾಧ್ವ ಪೀಠವೇರಿ ಅಷ್ಟಕ್ಕೆ ಅಂಟಿಕೊಳ್ಳದೆ ಸಮಸ್ತ ಸಮಾಜದ ಅಂಕುಡೊಂಕು ತಿದ್ದಿ ದಿಕ್ಕು ತೋರಿದ ಪ್ರಚಂಡ ಎದೆಗಾರಿಕೆಯ ಸಂತಕುಲ ಚಕ್ರವರ್ತಿ ಎಂದೆನಿಸಿದರು. ದೇಶದ ಸಂತ ಗಡಣವೇ ಹೋರಾಟದಲ್ಲಿ ಭಾಗವಹಿಸಲು ಸ್ಫೂರ್ತಿ ನೀಡಿದರು. ರಾಮಮಂದಿರದ ಕನಸು ಜಪಿಸಿದರು. ನಿರ್ಭಿಡೆಯಿಂದ ಶ್ರೀರಾಮನ- ರಾಮಾಯಣದ ಆದರ್ಶಗಳ ಸಾರುತ್ತಾ ಧರ್ಮ ಜಾಗೃತಿ ಬಡಿದೆಬ್ಬಿಸಿದರು.1992ರಲ್ಲಿ ಅಯೋಧ್ಯೆಯ ಕರಸೇವೆಗೆ ದೇಶವೇ ಒಂದುಗೂಡಿ ಕರಸೇವಕರ ದಂಡು ಅಯೋಧ್ಯೆಗೆ ಮುತ್ತಿಗೆ ಹಾಕಿತು. ಉತ್ತರ ಭಾರತದಲ್ಲಿ ಉಡುಪಿ ಸಂತರೆಂದೇ ಖ್ಯಾತಿ ಪಡೆದ ಪಾದರಸದಂತಹ ವ್ಯಕ್ತಿತ್ವದ ಪೂಜ್ಯರು ಎಲ್ಲರ ಅಭಿಮಾನಕ್ಕೆ ಪಾತ್ರರು. ಒಂದೆಡೆ ಸಂತರು- ಗಣ್ಯರು ಸಭೆ ಸೇರಿ ಮುಂದಿನ ನಡೆಯ ಸಮಾಲೋಚನೆ ನಡೆಸುತ್ತಿದ್ದಂತೆ ರಾಮ ಜನ್ಮಸ್ಥಳದಲ್ಲಿ ಬಾಬರ ನಿರ್ಮಿಸಿದ ಕಟ್ಟಡ ಧಡಧಡನೆ ಧರೆಗುರುಳಿತು. ಸಂತರೆಲ್ಲಾ ಅಚ್ಚರಿಗೊಂಡು ಧಾವಿಸಿ ಬಂದರು. ಸಮುದ್ರದ ಹೆದ್ದರೆಗಳಂತೆ ಕರಸೇವಕರ ಆಕ್ರೋಶ ತಡೆಯುವುದು ಯಾರಿಂದಲೂ ಸಾಧ್ಯವಾಗದೇ ಹೋಯಿತು. ಬಿದ್ದುನಿಂತ ಅವಶೇಷಗಳ ಮೇಲೆಯೇ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪಿಸಲು ವಿಶ್ವೇಶ ತೀರ್ಥರನ್ನೇ ಪ್ರಾರ್ಥಿಸಿದರು. ಲಕ್ಷಾಂತರ ಕರಸೇವಕರ ಒಕ್ಕೊರಲಿನ ಕೋರಿಕೆ ನೆರವೇರಿಸಲೇಬೇಕಾಯಿತು. ತಾತ್ಕಾಲಿಕ ಛಾವಣಿಯಡಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಬಿಟ್ಟರು. ಆರತಿ ಎತ್ತಿ ಪೂಜಿಸಿದರು. ನಮಿಸಿದರು. ಭಕ್ತ ಜನಸ್ತೋಮವೇ ಕಣ್ತುಂಬಿಕೊಂಡಿತು. ಭಾವುಕತೆಯ ಪರಾಕಾಷ್ಟೆಗೆ ತಲುಪಿ ಭಾವೋದ್ವೇಗದ ಅಲೆಯಲ್ಲಿ ಕಣ್ಣೀರ ಧಾರೆ ಹರಿಯಿತು. ಇಡೀ ದೇಶವೇ ಅಲ್ಲೋಲ ಕಲ್ಲೋಲವಾಯಿತು. ನಮ್ಮದು ಪ್ರಜಾಪ್ರಭುತ್ವ ದೇಶವಲ್ಲವೇ. ಅವರವರ ಭಾವಕ್ಕೆ ತಕ್ಕಂತೆ -ಭಕುತಿಗೆ ತಕ್ಕಂತೆ ಪುಂಖಾನುಪುಂಖವಾಗಿ ಸುದ್ದಿಗಳು ಹರಿದಾಡಿದವು. ರಾಜಕೀಯ ಪಕ್ಷಗಳ ನಾಯಕರು ಮತ ಬ್ಯಾಂಕಿನತ್ತ ಕಣ್ಣಿಟ್ಟು ಆರೋಪ- ಪ್ರತ್ಯಾರೋಪಕ್ಕೆ ತೊಡಗಿದರು. ವಿಶ್ವೇಶತೀರ್ಥರ ಸಮದರ್ಶಿತ್ವದ ಸಮತೂಕದ ಹೇಳಿಕೆಗಳು ಎಲ್ಲರಿಗೂ ದಿಕ್ಸೂಚಿಯಾದವು. ಜನರ ಭಾವನೆಗಳ ತೀವ್ರತೆ ಮನಗಂಡ ಆಡಳಿತವು ನಲುಗಿ ಹೋಯಿತು. ನಂಬಿಕೆಯ ಶಕ್ತಿ ಬಲ್ಲವರಾರು?ಸುಮಾರು 25 ವರ್ಷಗಳ ಕಾಲ ಕಾನೂನು ಹೋರಾಟಗಳು ನಡೆಯುತ್ತಲೇ ಮುಂದೆ ಸಾಗಿತು. ಭಾರತೀಯ ಜನತಾ ಪಕ್ಷ ತನ್ನ ಆಶ್ವಾಸನೆಯ ಈಡೇರಿಸಲು ಇನ್ನಿಲ್ಲದಂತೆ ನ್ಯಾಯ ತೀರ್ಮಾನಕ್ಕೆ ದುಂಬಾಲು ಬಿದ್ದು ಸುಪ್ರೀಂ ಕೋರ್ಟ್ ಸಾಕ್ಷಿಗಳ ಆಧಾರದಲ್ಲಿ 2019ರಲ್ಲಿ ಇದು ರಾಮ ಜನ್ಮ ಭೂಮಿ ಎಂದು ಸ್ಪಷ್ಟವಾಗಿ ಕೋರ್ಟ್ ಸಾರಿ ಬಿಟ್ಟಿತು. ಒದಗಿಸಿದ ಸಾಕ್ಷಿಗಳು, ವಾದಿಸಿದ ನ್ಯಾಯವಾದಿಗಳು, ವಿರೋಧಿಸಿದ ರಾಜಕಾರಣಿಗಳು, ನಮ್ಮದೆಂದು ಹಕ್ಕು ಮಂಡಿಸುತ್ತಲೇ ಬಂದವರು ಅಷ್ಟಿಷ್ಟಲ್ಲ. ಇಷ್ಟಿದ್ದರೂ ಸತ್ಯವೇ ಜಯಿಸಿತು. ಅದುವೇ ರಾಮನ ಮಹಿಮೆ.ತೊಂಬತ್ತರ ಹರೆಯದ ಉತ್ಸಾಹಿ ಶ್ರೀ ವಿಶ್ವೇಶತೀರ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನನ್ನ ಬದುಕಿನ ಪರಮೋಚ್ಚ ಗುರಿ ಈಡೇರಿತು. ಇನ್ನು ವಾನಪ್ರಸ್ಥಕ್ಕೆ ತೆರಳುವೆನೆಂದು,ತೀರ್ಪು ಕೇಳಿ ಬರುತ್ತಿದ್ದಂತೆ ಉದ್ಗರಿಸಿಬಿಟ್ಟರು. ನನ್ನದೆಲ್ಲವೂ ಮುಗಿಯಿತು, ನನ್ನ ಪರವಾಗಿ ರಾಮಮಂದಿರ ನಿರ್ಮಾಣ ಟಸ್ಟಿಗೆ ನನ್ನ ಶಿಷ್ಯ ಕಿರಿಯಪಟ್ಟದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಸದಸ್ಯರಾಗಲೆಂದು ಸೂಚಿಸಿದಂತೆ ಇಂದು ದಕ್ಷಿಣ ಭಾರತದ ಏಕೈಕ ಟ್ರಸ್ಟಿ ಆಗಿ ಸಕ್ರಿಯರಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತಿರುವರು.ಪ್ರತಿ ಹಂತದಲ್ಲೂ ತನ್ನ ಅನುಭವದ ಧಾರೆಯರೆದು ರಾಮಮಂದಿರ ನಿರ್ಮಾಣದಲ್ಲಿ ವಿಶ್ವ ಪ್ರಸನ್ನತೀರ್ಥರು ತೊಡಗಿರುವರು. ರಾಮ ಮಂದಿರ ನಿರ್ಮಾಣದ ಗುರಿ ತಲುಪಿದ್ದೇವೆ, ರಾಮರಾಜ್ಯ ನಿರ್ಮಾಣದ ಗುರಿ ನಮ್ಮ ಮುಂದಿದೆ ಎಂದು ಸಾರಿ -ಸಾರಿ ಹೇಳುತ್ತಿರುವರು. ಮಂದಿರ ನಿರ್ಮಾಣದ ಆಶಯ ಈಡೇರಿದೆ. ದೇವಾಲಯದ ಮೂಲಕ ದೇಶವೇ ಐಕ್ಯತೆಯ ಹಾದಿ ತುಳಿಯಬೇಕಿದೆ. ರಾಮ ಭಕ್ತಿ ಮೈಗೂಡಿಸಿಕೊಂಡು ಆತನ ಆದರ್ಶತೆಯ ನಡೆ-ನುಡಿ ನಮ್ಮದಾಗಬೇಕು. ಅದಾದಾಗಲೇ ಸುಖ- ಶಾಂತಿ- ನೆಮ್ಮದಿ ನೆಲೆಯಾಗಿ 140 ಕೋಟಿ ಜನರು ಸಹೋದರರಂತೆ ಸಹಬಾಳ್ವೆ ನಡೆಸಲು ಸಾಧ್ಯವೆನ್ನುತ್ತಲೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ, ತನ್ನ ಗುರು ನಡೆದ ಹಾದಿಯಲ್ಲೇ ದೇಶದಲ್ಲೆಡೆ ಸುತ್ತುತ್ತಿರುವರು.2019 ಡಿಸೆಂಬರ್ 29ರಂದು ಪೂಜ್ಯ ವಿಶ್ವೇಶತೀರ್ಥರು ಕಾಯಿಲೆಯ ಬಳಲಿಕೆಯಿಂದ ಇಹಲೋಕ ತ್ಯಜಿಸಿದರು. ಕೊನೆಯುಸಿರು ಇರುವವರೆಗೂ ಪೂಜೆ -ಪುನಸ್ಕಾರ -ಉಪನ್ಯಾಸ- ಸಂಚಾರ ನಿರತರಾಗಿ ಪರಂಧಾಮವನೈದಿದರು. ಜನವರಿ 14 ಗುರುಗಳ ನಾಲ್ಕನೆಯ ಆರಾಧನೆ ಜರಗಿತು. ರಾಮಮಂದಿರದ ಈ ಸಂಭ್ರಮದಲ್ಲಿ ಗುರುಗಳು ಇರಬೇಕಿತ್ತು ಎಂದು ಹಂಬಲಿಸುವ ಹೃದಯಗಳಿಗೆ ಲೆಕ್ಕವಿಲ್ಲ. ವಿಶ್ವೇಶತೀರ್ಥ ನಾಮದ ದೇಹ ತೊರೆದ, ಪೂಜ್ಯರ ಆತ್ಮ ಎಲ್ಲೋ ನೆಲೆ ನಿಂತು ನಮ್ಮಂತೆಯೇ ಸಂಭ್ರಮಿಸುತ್ತಿರಬಹುದು. ನಮ್ಮ ಅರಿವಿಗೆ ಅದು ಬಾರದು. ಗತಿಸಿದ ಆತ್ಮಕ್ಕೆ ನಡೆದು ಬಂದ ಹಾದಿಯ ನೆನಪಿರದು.-ಟಿ ನಾರಾಯಣ ಭಟ್ ರಾಮಕುಂಜ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು