ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕಾಗಿ ಜಾಗಕ್ಕೆ ಅರ್ಜಿ ಸಲ್ಲಿಸಿರುವವರಿಗೆ ರಾಜ್ಯ ಸರಕಾರದ ವತಿಯಿಂದ 2.75 ಸೆಂಟ್ಸ್ ಜಾಗ ಮಂಜೂರು ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಬಂಟ್ವಾಳ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕಾಗಿ ಜಾಗಕ್ಕೆ ಅರ್ಜಿ ಸಲ್ಲಿಸಿರುವವರಿಗೆ ರಾಜ್ಯ ಸರಕಾರದ ವತಿಯಿಂದ 2.75 ಸೆಂಟ್ಸ್ ಜಾಗ ಮಂಜೂರು ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ವಿಟ್ಲ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಅಂದಿನ ರಾಜ್ಯ ಸರಕಾರ ಕೇವಲ 1.38 ಸೆಂಟ್ಸ್ ಜಾಗ ಮಂಜೂರು ಮಾಡಿತ್ತು. ಆದರೆ ಆ ಜಾಗದಲ್ಲಿ ಮನೆ ಕಟ್ಟಲು ಸಾಧ್ಯವಾಗದ ಕಾರಣ ಹಾಗೂ ಬ್ಯಾಂಕ್ ಸಾಲವೂ ಲಭ್ಯವಾಗದೆ ಹಲವರು ಆ ಜಾಗವನ್ನು ತ್ಯಜಿಸಿದ್ದರು. ಈ ವಿಚಾರವನ್ನು ಆಗಲೇ ನಾನು ಪ್ರಸ್ತಾಪಿಸಿದ್ದೆ ಎಂದು ಹೇಳಿದರು.ಶಾಸಕನಾದ ಬಳಿಕ ನಿರಂತರವಾಗಿ ಕಂದಾಯ ಸಚಿವರ ಮೇಲೆ ಒತ್ತಡ ಹೇರಿ 94ಸಿ ಮತ್ತು 94 ಸಿಸಿ ಅಡಿಯಲ್ಲಿ 2.75 ಸೆಂಟ್ಸ್ ಜಾಗ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಈ ಹಿಂದೆ ಇಕಾಖೆಯಿಂದ ತಿರಸ್ಕೃತವಾಗಿದ್ದ ಸುಮಾರು 4,800 ಅರ್ಜಿಗಳ ಮರುಶೀಲನೆಗೂ ಒತ್ತಾಯಿಸಿದ್ದೇನೆ ಎಂದು ಶಾಸಕರು ತಿಳಿಸಿದರು.
2015ರ ಮೊದಲು ಅಕ್ರಮ–ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದ ಮೂವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಅವರಿಗೆ ನ್ಯಾಯಾಲಯದಲ್ಲಿ ಜಯ ಲಭಿಸಿದೆ. ಆ ಅರ್ಜಿದಾರರಿಗೆ ಹಾಗೂ ಅರ್ಜಿ ಸಲ್ಲಿಸಿದ ಎಲ್ಲರಿಗೂ ಜಾಗ ಸಕ್ರಮವಾಗಲಿದೆ. ಈ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಭರವಸೆ ನೀಡಿದರು.ಕಬಕ–ವಿಟ್ಲ ಚತುಷ್ಪಥ ರಸ್ತೆಗೆ ಮೊದಲ ಹಂತದಲ್ಲಿ 10 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ರಸ್ತೆಯ ನಿರ್ವಹಣೆಯನ್ನು ಹೆದ್ದಾರಿ ಇಲಾಖೆ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.
ವಿಟ್ಲ ಸಮುದಾಯ ಆಸ್ಪತ್ರೆಯ ಹಿಂಬಡ್ತಿ ವಿಚಾರವನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು, ಆಸ್ಪತ್ರೆಯ ಸಿಬ್ಬಂದಿ ಮತ್ತು ಮೂಲ ಸೌಕರ್ಯವನ್ನು ಹೆಚ್ಚಿಸಲಾಗುವುದು. ಜೊತೆಗೆ ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭವಾಗಲಿದೆ ಎಂದರು.ವಿಟ್ಲಕ್ಕೆ ಅಗ್ನಿಶಾಮಕ ವಾಹನ ಮಂಜೂರಾಗಿದ್ದು, ಸ್ಥಳ ಗುರುತಿಸುವಿಕೆ ಪೂರ್ಣಗೊಂಡ ಬಳಿಕ ಸೇವೆ ಆರಂಭವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಕ್ರಮ–ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ಮಹಮ್ಮದ್ ಬಡಗನ್ನೂರು, ರೂಪಲೇಖಾ ಆಳ್ವ, ಪುತ್ತೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ರೈ ಪೆರ್ನೆ, ವಿಟ್ಲ ಗ್ರಾಪಂ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.