ವಿಠ್ಠಲಗೆ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ ಪ್ರದಾನ

| Published : Oct 11 2024, 11:50 PM IST

ಸಾರಾಂಶ

ವಿಠ್ಠಲ ಬಾಂದಿ ಅವರು 2019ರಿಂದ ಗ್ರೇಡ್‌- 1 ಕಾರ್ಯದರ್ಶಿಯಾಗಿ ಬೆಳಸೆ ಗ್ರಾ ಪಂನಲ್ಲಿ ಕರ್ತವ್ಯ ನಿರ್ವಹಿಸಿ 2023ರಲ್ಲಿ ಪಿಡಿಒ ಹುದ್ದೆಗೆ ಮುಂಬಡ್ತಿ ಪಡೆದು ಪ್ರಸ್ತುತ ಅಚವೆಯಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದಾರೆ.

ಕಾರವಾರ: ಜಿಪಂನಿಂದ ಪ್ರತಿ ತಿಂಗಳು ನೀಡಲಾಗುವ ಸೆಪ್ಟೆಂಬರ್‌ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಭಾಜನರಾದ ಅಂಕೋಲಾ ತಾಲೂಕಿನ ಅಚಿವೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಠ್ಠಲ ವಾಸು ಬಾಂದಿ ಅವರಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಗುರುವಾರ ಜಿಪಂನಲ್ಲಿ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿಕೊಂಡಿರುವ ಪಿಡಿಒ ವಿಠ್ಠಲ ಬಾಂದಿ ರವರು, 1987ರಲ್ಲಿ ಆಗಿನ ಮಂಡಲ ಪಂಚಾಯಿತಿ ವ್ಯವಸ್ಥೆಯಲ್ಲಿ ಹಿಲ್ಲೂರು ಮಂಡಲ ಪಂಚಾಯಿತಿಯಲ್ಲಿ ಕ್ಲರ್ಕ್ ಆಗಿ ಸೇವೆ ಸೇರಿಕೊಂಡರು. ನಂತರ ಸತತ 12 ವರ್ಷಗಳ ಕಾಲ ಕ್ಲರ್ಕ್‌ ಸೇವೆಯ ಆಧಾರದಡಿ 1999ರಲ್ಲಿ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿ 2019ರ ರವರೆಗೆ ಅಚವೆ, ಮೊಗಟಾ, ಡೋಂಗ್ರಿ ಹಾಗೂ ಹೊಸದಾಗಿ ರಚನೆಯಾದ ಹೊನ್ನೆಬೈಲ್ ಗ್ರಾಪಂನಲ್ಲಿ ಪ್ರಬಾರ ಪಿಡಿಒ ಆಗಿ ಕೆಲಸ ನಿರ್ವಹಿಸಿದ್ದಾರೆ. 2019ರಿಂದ ಗ್ರೇಡ್‌- 1 ಕಾರ್ಯದರ್ಶಿಯಾಗಿ ಬೆಳಸೆ ಗ್ರಾ ಪಂನಲ್ಲಿ ಕರ್ತವ್ಯ ನಿರ್ವಹಿಸಿ 2023ರಲ್ಲಿ ಪಿಡಿಒ ಹುದ್ದೆಗೆ ಮುಂಬಡ್ತಿ ಪಡೆದು ಪ್ರಸ್ತುತ ಅಚವೆಯಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದಾರೆ.

ಪ್ರಶಸ್ತಿ ಪ್ರಮಾಣಪತ್ರ ವಿತರಣೆ ಸಂದರ್ಭದಲ್ಲಿ ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಸಹಾಯಕ ಕಾರ್ಯದರ್ಶಿ ಸುನಿಲ ನಾಯ್ಕ ಇದ್ದರು. ತೇಲಂಗಾರಿನಲ್ಲಿ ಶಾರದೋತ್ಸವಕ್ಕೆ ಚಾಲನೆ

ಯಲ್ಲಾಪುರ: ತಾಲೂಕಿನ ತೇಲಂಗಾರಿನ ಮೈತ್ರಿ ಕಲಾಬಳಗ, ಮಾತೃ ಮಂಡಳಿ ಚಿನ್ನಾಪುರ ಸೀಮೆ, ಮೇಲ್ತರ್ಪು ವನಸಿರಿ ಕಲಾಕೂಟ ಚಿಮ್ನಳ್ಳಿ ಇವರ ಸಹಯೋಗದೊಂದಿಗೆ ನಡೆಯುವ ೨ ದಿನಗಳ ಶಾರದೋತ್ಸವಕ್ಕೆ ಅ. ೯ರಂದು ಚಾಲನೆ ನೀಡಲಾಯಿತು.ಬೆಳಗ್ಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ರಂಗೋಲಿ, ಗುರಿ ಹೊಡೆಯುವುದು, ಚೆಸ್ ಸ್ಪರ್ಧೆಗಳು ನಡೆದವು. ಕಲ್ಪೋಕ್ತ ಪೂಜೆಯೊಂದಿಗೆ ಕೃಷ್ಣ ಭಟ್ಟ ಮುಂಡಗೆತಗ್ಗು ಶಾರದಾ ಸ್ಥಾಪನೆಯನ್ನು ವಿಧಿವತ್ತಾಗಿ ನಡೆಸಿದರು. ನಾಗರಾಜ ಕೋಣೆಮನೆ, ಜೋತಿ ಡಯಾಸ್, ವಿದ್ಯಾ ನಾಯ್ಕ, ಮೇಘನಾ ಆಚಾರಿ, ಜಿ.ಎನ್. ಅರುಣಕುಮಾರ, ಮಂಜುನಾಥ ಮೂಲೆಮನೆ ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ಮಧ್ಯಾಹ್ನ ಸೀಮಾ ಮಹಿಳೆಯರಿಂದ ಭಕ್ತಿಗೀತೆ, ಭಜನೆ ಮುಂತಾದ ಕಾರ್ಯಕ್ರಮಗಳು ಜರುಗಿದವು. ಮೈತ್ರಿ ಮಹಿಳಾ ತಾಳಮದ್ದಳೆ ಕೂಟದ ಮಹಿಳೆಯರಿಂದ ಪ್ರಸ್ತುತಗೊಂಡ ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದ ಭೀಷ್ಮ ವಿಜಯ ತಾಳಮದ್ದಳೆಯ ಹಿಮ್ಮೇಳದಲ್ಲಿ ವೆಂಕಟ್ರಮಣ ಭಟ್ಟ ಚಂದಗುಳಿ(ಭಾಗವತ), ನಾಗಪ್ಪ ಕೋಮಾರ(ಮದ್ದಲೆ) ಹಾಗೂ ಸಂಜಯ ಕೋಮಾರ(ಚಂಡೆ) ಕಾರ್ಯ ನಿರ್ವಹಿಸಿದರು. ಹೊಸ ಪ್ರತಿಭೆ ಗಣೇಶ ಗಾಂವ್ಕರ ಸೆಳೆಮನೆ ಕೂಡ ಮದ್ದಲೆ ನುಡಿಸಿದರು.

ನಾರಾಯಣ ಗಾಂವಕರ ಗೋಡೆಪಾಲ, ಟಿ.ವಿ. ಕೋಮಾರ, ಗಣಪತಿ ಕಂಚಿಪಾಲ, ಮಂಜುನಾಥ ಮೂಲೆಮನೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.