ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಜಗತ್ತಿಗೆ ಸಂದೇಶ ಸಾರಿ, ಮಹಾನ್ ನಾಯಕರಾಗಿ ಪ್ರಸಿದ್ಧಿ ಪಡೆದಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರ ಸಂಘ ಹಾಗೂ ಅನ್ನದಾತ ಸಹಕಾರ ಸಂಘದ ಆಶ್ರಯದಲ್ಲಿ ಸ್ವಾಮಿ ವೀವೇಕಾನಂದರ 161ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡ ವಿವೇಕ ಉತ್ಸವ-8ರಲ್ಲಿ ರೋಬೋಟಿಕ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿ ಮತ್ತೆ ಕಾರ್ಯಾಗಾರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಲವಾರು ವಿಶೇಷತೆ ಹೊಂದಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಶಿಕ್ಷಣ, ಕೃಷಿ, ಆರ್ಥಿಕ ಸಂಸ್ಥೆಗಳನ್ನು ಹುಟ್ಟು ಹಾಕಿರುವ ಎಂ.ಎನ್. ಪಾಟೀಲರು ಲಾಭ ಪಡೆಯುವ ಉದ್ದೇಶದಿಂದ ಸಂಸ್ಥೆ ಹುಟ್ಟುಹಾಕದೆ, ಮಕ್ಕಳಿಗೆ ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣ ಕೊಡಲು ಹುಟ್ಟುಹಾಕಿ, ಪ್ರಯತ್ನ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.ಡಿಡಿಪಿಐ ಕಾರ್ಯಾಲಯದ ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಜಿ. ಮಿರ್ಜಿ ಮಾತನಾಡಿ, ಮಕ್ಕಳು ಬೆಳೆವಣಿಗೆಯಲ್ಲಿ ತಂದೆಗಿಂತ ತಾಯಿಯ ಪಾತ್ರ ಹಿರಿದಾಗಿದೆ. ತಾಯಂದಿರು ಸದಾ ಜಾಗ್ರತೆಯಿಂದ ಮಕ್ಕಳನ್ನು ನೋಡಿಕೊಳ್ಳಬೇಕು. ಉದಾಸೀನ ಮಾಡಿದರೆ ಮನೆ, ರಾಜ್ಯ, ರಾಷ್ಟ್ರ ಹಾಳಾಗಿ ಹೋಗುತ್ತದೆ. ಬಲಿಷ್ಠ ಭಾರತ ಕಟ್ಟಲು ಮನೆಯಲ್ಲಿ ಮಕ್ಕಳಿಗೆ ನೈತಿಕ ಮತ್ತು ಜೀವನ ಶಿಕ್ಷಣ ಕೊಡಬೇಕು ಎಂದರು. ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ನಿರ್ದೇಶಕ ಬಸವರಾಜ ಹನಗಂಡಿ ಮಾತನಾಡಿ, ಮಕ್ಕಳು ಓದಲು ಒಳ್ಳೆಯ ಸುಸಜ್ಜಿತ ಕಟ್ಟಡದ ಜೊತೆಗೆ ಪ್ರತಿಭಾನ್ವಿತ ಶಿಕ್ಷಕರ ಅಗತ್ಯತೆ ಹೆಚ್ಚಾಗಿದೆ ಹೇಳಿದರು.
ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ. ಎನ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಬೆಂಗಳೂರಿನ ಶಿಕ್ಷಣ ಜ್ಞಾನ ಪತ್ರಿಕೆಯ ಸಂಪಾದಕ ಎಸ್. ವಿ. ನಾಗರಾಜ, ಜೆಮ್ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಮನಗೌಡ ಜಕ್ಕನಗೌಡ್ರ ಮಾತನಾಡಿದರು.ಬೆಂಗಳೂರಿನ ಶಿಕ್ಷಣ ಜ್ಞಾನ ಪತ್ರಿಕೆಯ ವತಿಯಿಂದ ಶ್ರುತಿ ದಾಸರಗೆ ಜ್ಞಾನ ಜ್ಯೋತಿ ಪ್ರಶಸ್ತಿ, ಜಿ.ಆರ್. ಪಾಟೀಲರಿಗೆ ಶೈಕ್ಷಣಿಕ ಆಡಳಿತ ಸೇವಾ ರತ್ನ ಪ್ರಶಸ್ತಿ, ರಾಜೇಶ್ವರಿ ದೇಶಪಾಂಡೆಗೆ ಜ್ಞಾನ ಚಿಗುರು ಕವಚ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಪ್ರೌಢ ಶಾಲೆಗಳಿಗೆ ಗಣಿತ ಪ್ರಯೋಗಾಲಯದ ಕಿಟ್ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸ್ಟೀಮ್ ಎಕ್ಸ್ ಸಂಸ್ಥೆಯ ಸಂಸ್ಥಾಪಕ, ಸಿಇಒ ನರಸಿಂಹ ನಾಯ್ಡು ರೋಬೋಟಿಕ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿ ಮತ್ತೆಯ ಕುರಿತು ಮಾಹಿತಿ ನೀಡಿದರು.ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಚ್. ಆರ್. ಮಲ್ಲಾಪೂರ ಉದ್ಘಾಟಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಡಿ. ಎಸ್. ಕುಂಠೆ ವರದಿ ವಾಚಿಸಿದರು. ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಜರುಗಿದವು.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಲ್. ಬಿ. ಕುರ್ತಕೋಟಿ, ವಿಷಯ ಪರಿವೀಕ್ಷಕ ಡಿ. ಎಂ. ಯಾವಗಲ್, ವಿವೇಕ ಉತ್ಸವ ಸಮಿತಿ ಅಧ್ಯಕ್ಷ ಡಿ. ಪಿ. ಅಮಲಝರಿ, ಸಮೂಹ ಸಂಸ್ಥೆಗಳ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಎಸ್. ಎಂ. ಕಲಬುರ್ಗಿ ನಿರೂಪಿಸಿದರು. ವಿ. ಆರ್. ಹಿರೇನಿಂಗಪ್ಪನವರ ವಂದಿಸಿದರು.