ಸಾರಾಂಶ
ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮ ದಿನ, ರಾಷ್ಟ್ರೀಯ ಯುವ ದಿನ
ಕನ್ನಡಪ್ರಭ ವಾರ್ತೆ ಅರಸೀಕೆರೆವಿವೇಕಾನಂದರು ಕೇವಲ ೩೯ ವರ್ಷಗಳಲ್ಲಿ ಕೊಟ್ಟ ಕೊಡುಗೆ, ವಿಚಾರಧಾರೆಗಳು ಸಮಾಜಕ್ಕೆ ಇಂದಿಗೂ ಸ್ಫೂರ್ತಿಯಾಗಿದೆ ಎಂದು ಪಂಚನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಬಿ.ದೇವರಯ್ಯ ತಿಳಿಸಿದರು.
ತಾಲೂಕಿನ ಕಣಕಟ್ಟೆ ಗ್ರಾಮದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಮತ್ತು ಕೈಗಾರಿಕಾ ತರಬೇತಿ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶದಲ್ಲಿ ಹಿಂದೂ ದರ್ಮದ ಮತ್ತು ಭಾರತೀಯ ಸಂಸ್ಕೃತಿಯ ವಿಚಾರಧಾರೆಗಳ ಬಗ್ಗೆ ಮಾತನಾಡಿದ ವಾಗ್ಮಿ ವಿವೇಕಾನಂದರೊಬ್ಬರೇ, ನಿಸ್ವಾರ್ಥ ಸೇವೆಯ ಮೂಲಕ ಹೊಸ ರಾಷ್ಟ್ರ ಕಟ್ಟಲು ಯುವ ಸಮೂಹ ನೇರವಾಗಬೇಕು ಎಂದು ಕರೆ ನೀಡಿದರು.೧೮೯೩ ರಲ್ಲಿ ಚಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಕೇವಲ ೧೫ ನಿಮಿಷಗಳಲ್ಲಿ ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ತತ್ವಾದರ್ಶಗಳ ಬಗ್ಗೆ ಮಾತನಾಡಿದರು. ಸ್ವಾಮಿ ವಿವೇಕಾನಂದರು ಸಾಮರಸ್ಯತೆಯನ್ನು ಕೊಟ್ಟು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ್ದಾರೆ.ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅದ್ಯಯನಶೀಲರಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು ಎಂದರು.
ಶ್ರೀ ವಿದ್ಯಾರಣ್ಯ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎ.ನಾಗೇಶರಾವ್ ಮಾತನಾಡಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ನಿಸ್ವಾರ್ಥ ಸೇವೆಯ ಮೂಲಕ ಹೊಸ ರಾಷ್ಟ್ರ ಕಟ್ಟಲು ನೆರವಾಗಬೇಕು. ಯುವ ಜನಾಂಗಕ್ಕೆ ವಿವೇಕಾನಂದರು ದಾರಿದೀಪವಾಗಿದ್ದಾರೆ. ಅವರ ತತ್ವಾದರ್ಶ ಪಾಲಿಸಬೇಕು. ವಿದ್ಯಾರ್ಥಿಗಳು ಉದಾತ್ತ ಆದರ್ಶ ಮೌಲ್ಯಗಳನ್ನು ಬೆಳಸಿಕೊಂಡು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎ. ಶಶಿಕುಮಾರ್ ಮಾತನಾಡಿ, ವಿವೇಕಾನಂದರ ಜೀವನ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ವಿವೇಕಾನಂದರ ಆದರ್ಶ ಗುಣಗಳು, ವಿಚಾರಧಾರೆಗಳು ಮತ್ತು ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡ ಕಾರಣದಿಂದ ಧೀಮಂತ ವ್ಯಕ್ತಿ ಆಗಿದ್ದಾರೆ. ಅವರ ಆದರ್ಶಗಳನ್ನು ಜಾರಿಗೆ ತರುವ ಮಹತ್ವದ ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ ಎಂದರು.
ವಿದ್ಯಾರಣ್ಯ ಐ.ಟಿ.ಐ ಪ್ರಾಂಶುಪಾಲ ಪುಟ್ಟರಂಗಪ್ಪ, ಎನ್.ಎಸ್.ಎಸ್. ಅಧಿಕಾರಿ ಪ್ರಕಾಶ ಇಳಿಗೇರ ಮತ್ತು ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ಹಾಜರಿದ್ದರು. ಪಂಚನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಬಿ.ದೇವರಯ್ಯ ರವರು ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಧಾನ ಭಾಷಣ ಮಾಡಿದರು.