ವಿವೇಕಾನಂದರ ಸಂದೇಶಗಳು ಸಾರ್ವಕಾಲಿಕ -ಸಚಿವ ಎಚ್ಕೆ

| Published : Jan 13 2024, 01:34 AM IST

ವಿವೇಕಾನಂದರ ಸಂದೇಶಗಳು ಸಾರ್ವಕಾಲಿಕ -ಸಚಿವ ಎಚ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮಿ ವಿವೇಕಾನಂದರ ತತ್ವ ಸಂದೇಶಗಳು ಸಾರ್ವಕಾಲಿಕ. ಅವರ ತತ್ವ ಸಿದ್ಧಾಂತಗಳನ್ನು ಇಂದಿನ ಯುವಕರು ಇನ್ನೂ ಹೆಚ್ಚು ಹೆಚ್ಚು ಅರಿತುಕೊಳ್ಳಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಸ್ವಾಮಿ ವಿವೇಕಾನಂದರ ತತ್ವ ಸಂದೇಶಗಳು ಸಾರ್ವಕಾಲಿಕ. ಅವರ ತತ್ವ ಸಿದ್ಧಾಂತಗಳನ್ನು ಇಂದಿನ ಯುವಕರು ಇನ್ನೂ ಹೆಚ್ಚು ಹೆಚ್ಚು ಅರಿತುಕೊಳ್ಳಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿ ಪಂ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಘಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಆದರ್ಶಗುಣಗಳನ್ನು ತಿಳಿಸುವ ಕೆಲಸವಾಗಬೇಕು. ಸಮಾಜದ ಬಗ್ಗೆ ಚಿಂತನೆ ಮಾಡುವುದರ ಜೊತೆಗೆ ವಿವೇಕಾನಂದರ ಗುಣಗಳಾದ ದೇಶದ ರಕ್ಷಣೆ, ಸಹನೆ, ಔದಾರ್ಯ, ತಾಳ್ಮೆ ಇವುಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು.

ವಿವೇಕಾನಂದರು ವಿದೇಶದಲ್ಲಿಯೂ ಸಹ ನಮ್ಮ ದೇಶದ ಸಂಸ್ಕೃತಿಯ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾನುಭಾವರು. ಚಿಕ್ಯಾಗೋ ಧರ್ಮ ಸಮ್ಮೇಳನದಲ್ಲಿಯ ಅವರು ಮಾಡಿದ ಭಾಷಣವು ವಿದೇಶಿಗರಲ್ಲಿ ಭ್ರಾತೃತ್ವ ಭಾವನೆ ಮೂಡಿಸಿತು. ವಿವೇಕಾನಂದರು ಹೇಳಿದಂತೆ ಯುವಕರು ತಮ್ಮ ಏಳಿಗೆಗೆ ತಾವೇ ಶಿಲ್ಪಿಗಳಾಗಿರುತ್ತಾರೆ. ಗದಗ ಜಿಲ್ಲೆಯು ವಿವೇಕಾನಂದರ ಸಂದೇಶಗಳನ್ನು ವಿಶ್ವಕ್ಕೆ ಬಿತ್ತರಿಸುವ ಕೇಂದ್ರವಾಗಿ ಕೆಲಸ ಮಾಡುತ್ತಿದೆ.

ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ಇಂದಿನ ಯುವಕರು ಖಿನ್ನತೆಗೊಳಗಾಗದೇ ಸಮಯ ವ್ಯರ್ಥ ಮಾಡದೇ ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಬೇಕು ಎಂದರು.

ಕೆ.ವಿ.ಎಸ್.ಆರ್.ಪ.ಪೂ.ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಅನಿಲ ವೈದ್ಯ ಉಪನ್ಯಾಸ ನೀಡಿದರು. ವಿವೇಕಾನಂದರ ಆದರ್ಶಗಳ ಮೂಲಕ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಇಂದಿನ ಯುವಕರು ಜ್ಞಾನಾರ್ಜನೆ ಮಾಡಿ ಸಹನೆಯಿಂದ ಕೆಲಸ ನಿರ್ವಹಿಸಿದರೆ ಗುರಿ ಮುಟ್ಟಲು ಸಾಧ್ಯ. ಭವ್ಯ ಭಾರತ ಕಟ್ಟುವಲ್ಲಿ ವಿದ್ಯಾರ್ಥಿಗಳು ವಿವೇಕಾನಂದರ ಸಂದೇಶಗಳನ್ನು ಪಾಲಿಸಬೇಕು. ನಮ್ಮ ದೇಶದ ಸಂಸ್ಕøತಿಯನ್ನು ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರು ಯಾವ ವ್ಯಕ್ತಿಯೂ ತನ್ನ ಆತ್ಮ ಗೌರವವನ್ನು ಕಳೆದುಕೊಳ್ಳಬಾರದು. ಹಾಗೂ ಯಾರ ಆತ್ಮ ಗೌರವವನ್ನು ಕಳೆಯುವ ಕೆಲಸ ಮಾಡಬಾರದು ಎಂದು ಸಂದೇಶ ನೀಡಿದ್ದಾರೆ ಎಂದರು.

ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಹುಲಕೋಟಿ-ಗದಗದ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಟಾನದ ಅಧ್ಯಕ್ಷರಾದ ಬ್ರಹ್ಮಚಾರಿ ಅದ್ವೈತ ಚೈತನ್ಯ (ಪುನೀತ್ ಮಹಾರಾಜ್ ) ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಎಸ್ಪಿ ಬಿ.ಎಸ್. ನೇಮಗೌಡ, ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಬಸವರಾಜ ಕಟ್ಟಿಮನಿ, ಬಿ.ಬಿ. ಅಸೂಟಿ, ಪ್ರಭು ಬುರಬುರೆ, ಪೀರಸಾಬ ಕೌತಾಳ, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಬಿ.ಎ. ಯರಗುಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.