ಕನಕಪುರ: ರೈತ ಸಮುದಾಯದ ಶಕ್ತಿ ಹಾಗೂ ಆರಾಧ್ಯ ದೈವ ಪ್ರೊ.ನಂಜುಂಡಸ್ವಾಮಿ ಮತ್ತು ಸುಂದರೇಶ್ ಅವರ ಜನಪರ ಹೋರಾಟ ಮತ್ತು ವಿಚಾರಧಾರೆಗಳು ಎಂದಿಗೂ ಶಾಶ್ವತ. ಅವರ ಹೋರಾಟಗಳೇ ನಮಗೆ ಸ್ಪೂರ್ತಿ ಹಾಗೂ ದೊಡ್ಡ ಶಕ್ತಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು
ಕನಕಪುರ: ರೈತ ಸಮುದಾಯದ ಶಕ್ತಿ ಹಾಗೂ ಆರಾಧ್ಯ ದೈವ ಪ್ರೊ.ನಂಜುಂಡಸ್ವಾಮಿ ಮತ್ತು ಸುಂದರೇಶ್ ಅವರ ಜನಪರ ಹೋರಾಟ ಮತ್ತು ವಿಚಾರಧಾರೆಗಳು ಎಂದಿಗೂ ಶಾಶ್ವತ. ಅವರ ಹೋರಾಟಗಳೇ ನಮಗೆ ಸ್ಪೂರ್ತಿ ಹಾಗೂ ದೊಡ್ಡ ಶಕ್ತಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಕೋಟೆ ಗಣಪತಿ ದೇವಾಲಯದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೆನಪು ಮತ್ತು ವಿಚಾರ ಮಂಥನ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ.63ರಷ್ಟು ಕೃಷಿಕರಿದ್ದಾರೆ. ಭಾರತದಲ್ಲಿ ಬಹುತೇಕ ತುಂಡು ಭೂಮಿ ಇರುವವರೇ ಹೆಚ್ಚಾಗಿದ್ದು, ತುಂಡು ಭೂಮಿಯಿಂದ ಏನೂ ಬದಲಾವಣೆ ಆಗುವುದಿಲ್ಲ, ಎಲ್ಲವನ್ನು ಒಟ್ಟುಗೂಡಿಸಬೇಕು. ರೈತರನ್ನು ಒಕ್ಕಲೆಬ್ಬಿಸಿ ಅವರ ತುಂಡು ಭೂಮಿಗಳನ್ನು ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ಕೊಡುವ ವ್ಯವಸ್ಥೆತರುವ ಉದ್ದೇಶದಿಂದ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಹಾಗಾಗಿ ರೈತರು ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಿತ್ತುಕೊಳ್ಳುತ್ತಿರುವ ಸರ್ಕಾರದ ಭೂ ಸುಧಾರಣೆ ಕಾಯ್ದೆ ಮತ್ತು ಭೂ ಸ್ವಾಧೀನದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ರೈತರ ಪಾಲಿನ ಇಬ್ಬರು ನಾಯಕರು ನಡೆಸಿದ ಹೋರಾಟಗಳಿಗೆ ಎಂದೂ ಸಾವಿಲ್ಲ. ಸಂಘಟನೆಗಳ ಹೆಸರಿನಲ್ಲಿ ರೈತ ಹೋರಾಟಗಳಿಗೆ ಕೆಟ್ಟ ಹೆಸರು ಅಪಕೀರ್ತಿ ತರುವಂತಹ ಕೆಲಸವನ್ನ ಯಾರು ಮಾಡಬಾರದು. ಇದರಿಂದ ಕೆಲವು ರಾಜಕೀಯ ಪಕ್ಷಗಳು, ನಾಯಕರು ಲಾಭ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ದೇಶದ ಸ್ವಾತಂತ್ರ್ಯ ನಂತರ ಪ್ರೊ.ನಂಜುಂಡಸ್ವಾಮಿ ಮತ್ತು ಸುಂದರೇಶ್ ನೇತೃತ್ವದಲ್ಲಿ ಬಹುದೊಡ್ಡ ರೈತ ಸಂಘದ ಚಳವಳಿ ಪ್ರಾರಂಭವಾಯಿತು. 90ರ ದಶಕದಲ್ಲಿ ನಂಜುಂಡಸ್ವಾಮಿ ಹೇಳಿದ್ದೆಲ್ಲವೂ ಇಂದು ನಿಜವಾಗುತ್ತಿವೆ. ರೈತರ ಚಳವಳಿ ಒಂದು ಆಕರ್ಷಣೆ, ವಿಚಾರಧಾರೆ ಸಿದ್ಧಾಂತದ ತುಡಿತ ಇದ್ದಂತೆ, ಅವರು ಬರಿ ರೈತ ಸಂಘದ ಚಳವಳಿ ಮಾತ್ರವಲ್ಲ, ಸಮಾಜವಾದದ ಸಿದ್ಧಾಂತವನ್ನು ದಲಿತ ಚಳವಳಿ ಮೂಲಕ ಪ್ರತಿ ಮನೆಗೆ ತಲುಪಿಸಬೇಕು. ಒಂದು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಹೋರಾಟವನ್ನು ಹುಟ್ಟು ಹಾಕಿದರು. ನಂಜುಂಡಸ್ವಾಮಿಯವರು ಕನಕಪುರದ ಗಣಿಗಾರಿಕೆ ವಿರುದ್ಧ ಬೃಹತ್ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದರು ಎಂದು ಸ್ಮರಿಸಿದರು.ಸಂಘದ ರಾಜ್ಯ ಉಪಾಧ್ಯಕ್ಷರಾದ ಮಲ್ಲಯ್ಯ ಮಾತನಾಡಿ, ರೈತರ ಹೋರಾಟ ನಿತ್ಯ ಮತ್ತು ನಿರಂತರ. ಸಮಸ್ಯೆಗಳು ಬಂದೇ ಬರುತ್ತವೆ. ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಕೆಲವೊಂದು ನಿರಂತರ ಹೋರಾಟಗಳಿಗೆ ಜಯ ಸಿಕ್ಕಿದೆ. ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಂಡರೂ ಆ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ಹೋರಾಡಬೇಕು. ರೈತ ಹೋರಾಟವನ್ನು ಹುಟ್ಟುಹಾಕಿದ ನಂಜುಂಡಸ್ವಾಮಿ ಹೋರಾಟ ಅವರ ತತ್ವ ಸಿದ್ಧಾಂತ ಆದರ್ಶಗಳನ್ನ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಹೋರಾಟ ಹಾಗೂ ಆಚರಣೆಗಳಿಗೆ ಅರ್ಥ ಮತ್ತು ಅವರಿಗೆ ನಾವು ಗೌರವ ಕೊಟ್ಟಂತೆ ಆಗುತ್ತದೆ. ಎಂತದ್ದೇ ಹೋರಾಟಗಳಿದ್ದರೂ ನಾವು ಸದಾ ರೈತರ ಪರ ನಿಲ್ಲುವುದಾಗಿ ತಿಳಿಸಿದರು.
ಜಯ ಕರ್ನಾಟಕ ಜನಪರ ವೇದಿಕೆ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು ಮೇಕೆದಾಟು ಹೋರಾಟದಿಂದ ಮಾತ್ರ. ನಾವು ಅಧಿಕಾರಕ್ಕೆ ಬಂದರೆ ಮೇಕೆದಾಟು ಅಣೆಕಟ್ಟೆ ಕಟ್ಟುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ ಈಗ ಮೇಕೆದಾಟು ಯೋಜನೆಯನ್ನು ಸಂಪೂರ್ಣ ನಿರ್ಲಕ್ಷ ಮಾಡುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನವಾದರೆ ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಜನರಿಗೆ ಮುಂದಿನ ಐವತ್ತು ವರ್ಷದವರೆಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ತಮಿಳುನಾಡು ಹಾಕಿದ್ದ ತಕರಾರು ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥ ಆಗಿದೆ, ಹಸಿರು ನ್ಯಾಯಾಧಿಕರಣದಿಂದ ಮಾತ್ರ ಅನುಮತಿ ನೀಡುವುದು ಬಾಕಿ ಇದ್ದು ತಕ್ಷಣ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬೃಹತ್ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.ರೈತ ಸಂಘದ ರಾಜ್ಯಸಂಚಾಲಕ ಚೀಲೂರು ಮುನಿರಾಜು, ಮಂಡ್ಯ ಕಾರ್ಯದರ್ಶಿ ರವಿ, ಜಿಲ್ಲಾಧ್ಯಕ್ಷ ಕೃಷ್ಣಯ್ಯ, ರಾಜ್ಯ ಮಹಿಳಾ ಕಾರ್ಯದರ್ಶಿ ರಮ್ಯಾ ರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಮಹಿಳಾ ಅಧ್ಯಕ್ಷ ರತ್ನಮ್ಮ ಸೇರಿದಂತೆ ಹಾರೋಹಳ್ಳಿ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ತಾಲೂಕಿನ ರೈತ ಮುಖಂಡರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 03:ಕನಕಪುರದ ಕೋಟೆ ಗಣಪತಿ ದೇಗುಲದಲ್ಲಿ ರೈತ ಸಂಘ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೆನಪು ಮತ್ತು ವಿಚಾರ ಮಂಥನ ಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಸಂಘದ ರಾಜ್ಯ ಉಪಾಧ್ಯಕ್ಷರಾದ ಮಲ್ಲಯ್ಯ, ರಾಜ್ಯಸಂಚಾಲಕ ಚೀಲೂರು ಮುನಿರಾಜು, ರಾಜ್ಯ ಮಹಿಳಾ ಕಾರ್ಯದರ್ಶಿ ರಮ್ಯಾ ರಾಮಣ್ಣ ಇತರರಿದ್ದರು.