ಇದೇ 10ರ ಭಾನುವಾರ ಪಟ್ಟಣದ ಮುರುಘರಾಜೇಂದ್ರ ವಿರಕ್ತಮಠದಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿ ಹಾಗೂ ತ್ರಿವಿಧ ದಾಸೋಹಿ, ಕಾಯಕಯೋಗಿ, ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿರುವ ತುಮಕೂರು ಸಿದ್ದಗಂಗಾ ಮಠದ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜನ್ಮ ದಿನೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀ ಜಗಜ್ಯೋತಿ ಬಸವೇಶ್ವರ ಯುವ ಬಳಗದ ಅಧ್ಯಕ್ಷ ಡಿ.ಕೆ ಪ್ರವೀಣ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಇಲ್ಲಿನ ಶ್ರೀ ಜಗಜ್ಯೋತಿ ಬಸವೇಶ್ವರ ಯುವ ಬಳಗ,ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ,ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ವತಿಯಿಂದ ಇದೇ 10ರ ಭಾನುವಾರ ಪಟ್ಟಣದ ಮುರುಘರಾಜೇಂದ್ರ ವಿರಕ್ತಮಠದಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿ ಹಾಗೂ ತ್ರಿವಿಧ ದಾಸೋಹಿ, ಕಾಯಕಯೋಗಿ, ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿರುವ ತುಮಕೂರು ಸಿದ್ದಗಂಗಾ ಮಠದ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜನ್ಮ ದಿನೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀ ಜಗಜ್ಯೋತಿ ಬಸವೇಶ್ವರ ಯುವ ಬಳಗದ ಅಧ್ಯಕ್ಷ ಡಿ.ಕೆ ಪ್ರವೀಣ್ ಕುಮಾರ್ ತಿಳಿಸಿದರು.ಪಟ್ಟಣದ ಸುದ್ದಿಮನೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರ್ಯಾಯ ವಸ್ತುವಿಲ್ಲದ, ಕೃತಕವಾಗಿ ತಯಾರಿಸಲು ಸಾದ್ಯವಿಲ್ಲದ ದಾನದಿಂದ ಮಾತ್ರ ಪಡೆಯಬಹುದಾದ ರಕ್ತದ ಕೊರತೆ ಪ್ರಸ್ತುತ ಹೆಚ್ಚಿದ್ದು, ರಕ್ತದಾನದ ಮೂಲಕ ಸಮಾಜಕ್ಕೆ ಕೊಡುಗೆಯನ್ನು ಸಲ್ಲಿಸಲು ಕಿರಿಯ ವಯಸ್ಸಿನಿಂದ ತಾಯಿ ಮಕ್ಕಳಿಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಕೇವಲ 10 ಬ್ಲಡ್ ಬ್ಯಾಂಕ್‌ಗಳಿದ್ದು, ಶಿವಮೊಗ್ಗದಲ್ಲಿ 8 ಹಾಗೂ ತೀರ್ಥಹಳ್ಳಿಯಲ್ಲಿ 2 ಬ್ಯಾಂಕ್ ಮೂಲಕ ನಿತ್ಯ ಅಗತ್ಯವಿರುವ 350 ಪ್ಯಾಕೇಟ್‌ಗಳಿಗೆ ಕೇವಲ 200 ಮಾತ್ರ ಪೂರೈಸಲು ಸಾದ್ಯವಾಗುತ್ತಿದೆ. ರೋಗಿಗಳಿಗೆ ಅತ್ಯಗತ್ಯವಾಗಿರುವ ರಕ್ತವನ್ನು ಕೇವಲ ದಾನದಿಂದ ಮಾತ್ರ ಪಡೆಯಬಹುದಾಗಿದೆ 18 ವರ್ಷ ಮೀರಿದ ಕನಿಷ್ಠ 50 ಕೆ.ಜಿ ತೂಕದ ಪ್ರತಿಯೊಬ್ಬರೂ ರಕ್ತವನ್ನು ದಾನದ ರೂಪದಲ್ಲಿ ನೀಡಲು ಅರ್ಹರಾಗಿದ್ದಾರೆ.ಸತತ 16 ನೇ ವರ್ಷದ ರಕ್ತದಾನ ಶಿಬಿರದಲ್ಲಿ ಇದುವರೆಗೂ 2 ಸಾವಿರ ಅಧಿಕ ದಾನಿಗಳು ರಕ್ತ ನೀಡಿದ್ದಾರೆ ಎಂದರು.ಬಳಗದ ಮಾಜಿ ಅಧ್ಯಕ್ಷ ಹದಡಿ ಪ್ರವೀಣ್ ಮಾತನಾಡಿ, 2011ರಲ್ಲಿ ಬಳಗದ ಉದ್ಘಾಟನೆ ಸಂದರ್ಭದಲ್ಲಿ ಪಟ್ಟಣದಲ್ಲಿ ಬ್ಲಡ್ ಬ್ಯಾಂಕ್ ಆರಂಭಕ್ಕೆ ಸಂಸದರಿಗೆ ಸಲ್ಲಿಸಲಾದ ಮನವಿಗೆ ಇದುವರೆಗೂ ಸ್ಪಂದನೆ ದೊರೆತಿಲ್ಲ. ರಕ್ತದಾನ ಕೇಂದ್ರದ ಆರಂಭದಿಂದ ತಾಲೂಕಿನ 180ಕ್ಕೂ ಅಧಿಕ ಹಳ್ಳಿಯ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ. ರಕ್ತದ ತುರ್ತು ಅಗತ್ಯದ ಸಂದರ್ಭದಲ್ಲಿ ಬಳಗವನ್ನು ಸಂಪರ್ಕಿಸುವಂತೆ ತಿಳಿಸಿದರು.
ಬಳಗದ ಕಾರ್ಯದರ್ಶಿ ಜಿ.ಪ್ರವೀಣ್,ಸದಸ್ಯ ಡಿ.ಸಿ ಪ್ರಸಾದ್,ನವೀನ್ ಶಾಸ್ತ್ರಿ,ಸಂಜಿತ್ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಬಿ ರಾಘವೇಂದ್ರ, ರಾಜೇಂದ್ರ ಪ್ರಸಾದ್, ಸಿದ್ದಲಿಂಗೇಶ್ ಕ್ವಾರಡಿ ಮತ್ತಿತರರು ಇದ್ದರು.