ಪಠ್ಯಕ್ಕೆ ಸೀಮಿತವಾಗದೇ ಅದರಾಚಿನ ಸ್ಪರ್ಧಾತ್ಮಕ ಜಗತ್ತಿಗೆ ಯುವ ಸಮುದಾಯವನ್ನು ಸಿದ್ಧಗೊಳಿಸುವ ಸ್ವಯಂಪ್ರೇರಿತ ಸ್ಪರ್ಧಾ ಅರಿವು ತರಬೇತಿ ಮೂಲಕ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಡುವ ಸಂಕಲ್ಪದಿಂದ ಯಶಸ್ವಿಯಾಗಿ ಇಲ್ಲಿನ ಉಪನ್ಯಾಸಕರ ಶ್ರಮ ಸಾರ್ಥಕವಾಗಿ ಮುನ್ನಡೆದಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಪಠ್ಯಕ್ಕೆ ಸೀಮಿತವಾಗದೇ ಅದರಾಚಿನ ಸ್ಪರ್ಧಾತ್ಮಕ ಜಗತ್ತಿಗೆ ಯುವ ಸಮುದಾಯವನ್ನು ಸಿದ್ಧಗೊಳಿಸುವ ಸ್ವಯಂಪ್ರೇರಿತ ಸ್ಪರ್ಧಾ ಅರಿವು ತರಬೇತಿ ಮೂಲಕ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಡುವ ಸಂಕಲ್ಪದಿಂದ ಯಶಸ್ವಿಯಾಗಿ ಇಲ್ಲಿನ ಉಪನ್ಯಾಸಕರ ಶ್ರಮ ಸಾರ್ಥಕವಾಗಿ ಮುನ್ನಡೆದಿದೆ.

೧೯೯೧ರಲ್ಲಿ ಆರಂಭವಾದ ಹಾನಗಲ್ಲ ತಾಲೂಕಿನ ಪ್ರಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದಾಗಿದ್ದು, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೆಸರು ಮಾಡಿದೆ. ಕಾಲೇಜುಗಳು ಕೇವಲ ಪಠ್ಯದೊಂದಿಗೆ ಮಾತ್ರ ಗಿರಕಿ ಹೊಡೆಯದೇ, ಭವಿಷ್ಯ ರೂಪಿಸಿಕೊಳ್ಳಲು ಈ ಔದ್ಯೋಗಿಕ ಪೈಪೋಟಿಯಲ್ಲಿ ಯಶ ಕಾಣುವ ಕುಶಲತೆಯ ಅರಿವು ಮೂಡಿಸಲಾಗುತ್ತಿದೆ.

ನಿತ್ಯ ನಡೆಯುವ ವರ್ಗವಾರು ಪಾಠಗಳ ಜೊತೆಗೆ ಆಸಕ್ತ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯುವ ಈ ಸ್ಪರ್ಧಾ ಯಶಸ್ಸಿನ ತರಬೇತಿಗೆ ನೂರಾರು ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಯಾರ ಒತ್ತಡ ಇಲ್ಲದೆ ಆಸಕ್ತಿಯಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಮಾತ್ರವಲ್ಲ, ಇಲ್ಲಿ ೩೦ ಉಪನ್ಯಾಸಕರೂ ಯಾವುದೇ ಸಂಬಳ ಗೌರವಧನದತ್ತ ನಿರೀಕ್ಷಿಸದೇ ಆಸಕ್ತಿಯಿಂದ ತರಬೇತಿ ನೀಡುತ್ತಿದ್ದಾರೆ.

ವಾರದ ೫ ದಿನ ತರಬೇತಿ ಪಾಠಗಳು ನಡೆದರೆ ಒಂದು ದಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಶೈಕ್ಷಣಿಕವಾಗಿ ಸೇವೆಯಲ್ಲಿರುವ ವಿವಿಧ ಫೌಂಡೇಶನ್‌ಗಳನ್ನು ಸಂಪರ್ಕಿಸಿ ಅಲ್ಲಿನ ತಜ್ಞರನ್ನು ಕರೆಸಿ ಮಾರ್ಗದರ್ಶನ ಮಾಡಲಾಗುತ್ತದೆ.

ಉದ್ಯೋಗದ ಅರಿವು ಮೂಡಿಸುವ ಒಂದು ಪ್ರತ್ಯೇಕ ಸೂಚನಾ ಫಲಕವನ್ನೇ ಅಳವಡಿಸಲಾಗಿದ್ದು, ಇಲ್ಲಿ ನಿತ್ಯ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಇರುವ ಅವಕಾಶಗಳ ಬಗೆಗೆ ಮಾಹಿತಿ ನೀಡಲಾಗುತ್ತದೆ. ನಾಳೆಗಳಿಗಾಗಿ ಇಂದೇ ಸಿದ್ಧರಾಗಿ ಎಂಬ ಘೋಷ ವಾಕ್ಯದೊಂದಿಗೆ ನಡೆದಿರುವ ಈ ತರಬೇತಿಗೆ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ ನಡೆಯುವ ವರ್ಗದ ವಿಷಯದ ಮಾಹಿತಿಯನ್ನು ವಾಟ್ಸಪ್ ಗ್ರುಪ್ ಮೂಲಕ ತಿಳಿಸಲಾಗುತ್ತದೆ. ಇಲ್ಲಿ ಓದುತ್ತಲೆ ಹಲವರು ಉದ್ಯೋಗಿಗಳಾಗಿ ತೆರಳಿದ್ದಾರೆ. ಉನ್ನತ ಶಿಕ್ಷಣಕ್ಕೂ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ೪೦ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿನ ಪಾಠಗಳಿಂದ ಪ್ರೇರಣೆ ಪಡೆದು ಉದ್ಯೋಗಿಗಳಾಗಿದ್ದಾರೆ. ಇದೆಲ್ಲಕ್ಕೂ ಇಲ್ಲಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಅರ್ಪಣಾ ಮನೋಭಾವವೇ ಪ್ರೇರಣೆಯಾಗಿದೆ.

ಪಠ್ಯದೊಂದಿಗೆ ಔದ್ಯೋಗಿಕ ತರಬೇತಿ ಪಡೆಯುತ್ತಿರುವ ಲಕ್ಷ್ಮೀ ಲಮಾಣಿ ಹಾಗೂ ಎಸ್.ಪವನ್, ಇಲ್ಲಿನ ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಬಗೆಗೆ ಇರುವ ಕಳಕಳಿಯೇ ಅತ್ಯಂತ ಗೌರವ ನೀಡುವಂತಹದ್ದು. ನಾವು ಇಲ್ಲಿ ಬಂದ ಮೇಲೆ ಓದು ಹಾಗೂ ಸಮಯದ ಮಹತ್ವ ಅರಿತಿದ್ದೇವೆ. ಪರೀಕ್ಷೆಯ ಭಯವಿಲ್ಲ. ಇನ್ನೂ ಕಲಿಯಬೇಕೆಂಬ ಉತ್ಸಾಹ ಮೂಡಿದೆ. ಈ ತರಬೇತಿ ಉಚಿತವಾದರೂ ಅರ್ಥಪೂರ್ಣ ಹಾಗೂ ಫಲಪ್ರದವಾಗಿದೆ. ನಮ್ಮ ಉದ್ಯೋಗದ ಭರವಸೆ ಈಡೇರುವ ಮಾರ್ಗದರ್ಶನ ಇಲ್ಲಿದೆ ಎನ್ನುತ್ತಾರೆ.

ಈ ಗ್ರಾಮೀಣ ಮಕ್ಕಳ ಪ್ರತಿಭೆ ಅಪಾರ. ಅವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಅದನ್ನು ಇಲ್ಲಿ ಮಾಡಲಾಗುತ್ತಿದೆ. ಈ ಮಕ್ಕಳಿಗೆ ಬದುಕಿನ ಶಿಕ್ಷಣ, ಅದಕ್ಕಾಗಿ ಗುರಿ ಪರಿಶ್ರಮದ ಪಾಠ ಇಲ್ಲಿ ನಡೆಯುತ್ತಿದೆ. ೩೦ ಉಪನ್ಯಾಸಕರೂ ಆಸಕ್ತಿಯಿಂದ ಸ್ಪರ್ಧಾ ಅರಿವಿನಲ್ಲಿ ತಲ್ಲೀನರಾಗಿ ಬೋಧನೆ ಮಾಡುತ್ತಾರೆ ಎಂದು ಪ್ರಾಚಾರ್ಯ ಡಾ. ವೀರೇಶ ಕುಮ್ಮೂರ ಹೇಳಿದರು.

ಇನ್ನೂ ಬಡತನವನ್ನೇ ಉಸಿರಾಡುವ ಸ್ಥಿತಿ ಇಲ್ಲಿನ ಬಹುತೇಕ ಮಕ್ಕಳದ್ದಾಗಿದೆ. ಪ್ರತಿಭಾವಂತರಿದ್ದಾರೆ ಮುನ್ನಡೆಯಲು ಆರ್ಥಿಕ ಬೆಂಬಲವಿಲ್ಲ. ಈ ತರಬೇತಿ ಉಚಿತವಾಗಿ, ಇಲ್ಲಿ ಓದಿದ ಯಾವುದೇ ವಿದ್ಯಾರ್ಥಿ ನಿರುದ್ಯೋಗಿಯಾಗಿ ಉಳಿಯಬಾರದು ಎಂಬ ಧ್ಯೇಯ ನಮ್ಮದಾಗಿದೆ. ಪಠ್ಯ ಹೊರತುಪಡಿಸಿ, ಸ್ಪರ್ಧಾತ್ಮಕ ವಿಷಯಗಳನ್ನು ಇಲ್ಲಿ ವಿದ್ಯಾರ್ಥಿಗಳಿಗೆ ಹೇಳಲಾಗುತ್ತದೆ ಎಂದು ಕಾಲೇಜಿನ ಉದ್ಯೋಗಕೋಶ ಅಧಿಕಾರಿ ಎಸ್.ಪ್ರವೀಣ ಹೇಳಿದರು.