ಎಲ್ಲ ಜಾತಿ ಸಮುದಾಯದ ಹಿಂದೂಗಳ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಎಲ್ಲ ಮಾಹಿತಿ ಪಡೆದರೂ ಜಾತಿಯನ್ನು ಕೇಳದ ಏಕೈಕ ಸಂಘಟನೆ ಸಂಘ.
ಯಲ್ಲಾಪುರ: ಸಂಘ ಸಂಘಟನೆ ಸಂಸ್ಥೆ ಎಂದಾಗ ಅನೇಕ ಸಂಘಟನೆ ಕಣ್ಮುಂದೆ ಬರುತ್ತದೆ. ಅವೆಲ್ಲ ನಮ್ಮ ಬೇಡಿಕೆಗಾಗಿ ಹುಟ್ಟಿಕೊಂಡ ಸಂಘಟನೆಗಳಾಗಿವೆ. ಯಾವುದೇ ಬೇಡಿಕೆ ಇಟ್ಟುಕೊಂಡ ಹುಟ್ಟಿಕೊಂಡ ಸಂಘಟನೆ ಆರ್ಎಸ್ಎಸ್ ಅಲ್ಲ. ಗುಲಾಮಗಿರಿಯ ವಿರುದ್ಧ ಸಮಾಜದ ಕೊರತೆ ನೀಗಿಸಿ ಸಂಘಟನೆ ಆಗುವ ಅಗತ್ಯದಿಂದ ಸಂಘ ಸ್ಥಾಪನೆಯಾಯಿತು. ಅಲ್ಲದೇ ಕಾರ್ಯಕರ್ತರೇ ಸಂಘದ ಆಸ್ತಿ ಎಂದು ಉತ್ತರ ಕರ್ನಾಟಕ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಗೆ ಹೇಳಿದರು.ಪಟ್ಟಣದ ವೈಟಿಎಸ್ಎಸ್ ಮೈದಾನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದ ನಂತರ ಸಾರ್ವಜನಿಕ ಸಭೆಯಲ್ಲಿ ಪ್ರಮುಖ ವಕ್ತಾರರಾಗಿ ಅವರು ಮಾತನಾಡಿದರು.
ಅಂದಿನ 33 ಕೋಟಿ ಜನರನ್ನು ಕೆಲವೇ ಸಾವಿರ ಬ್ರಿಟೀಷರು ನಮ್ಮನ್ನು ಆಳಿದರು. ಅವರಿಗೆ ಸಹಾಯ ನೀಡಿದವರೂ ನಾವೇ. ಮನೆ ಮನೆ ತಿರುಗಿ ತೆರಿಗೆ ಸಂಗ್ರಹಿಸಿ ನೀಡಿದವರು. ಹೋರಾಟಗಾರರ ಸುಳಿವು ನೀಡಿ ಹಿಡಿದು ಕೊಟ್ಟವರೂ ನಮ್ಮವರೇ. ಇದು ನಮ್ಮ ದೇಶದ ದಾರುಣ ಇತಿಹಾಸವಾಗಿದೆ. ಬ್ರಿಟೀಷರ ಮೊದಲು 7 ದೇಶದವರು ನಮ್ಮನ್ನು ಆಳಿದ್ದಾರೆ. ಎಂಟನೇಯವರು ಬ್ರಿಟೀಷರು. ಇವೆಲ್ಲಗಳಿಂದ ಪಾಠ ಕಲಿತು, ಗುಲಾಮಗಿರಿಯಲ್ಲಿರುವ ಸಮಾಜವನ್ನು ಮೇಲಕ್ಕೆತ್ತಬೇಕು ಎನ್ನುವ ಉದ್ದೇಶದಿಂದ 17 ಕಿಶೋರರ ಮೂಲಕ ಡಾ. ಹೆಗಡೆವಾರ್ ಸಂಘದ ಸಂಘಟನೆ ಆರಂಭಿಸಿದರು ಎಂದರು.ದಹದಹಿಸುವ ದೇಶಭಕ್ತಿಯ ಜ್ವಾಲೆಯ ಪರಿಣಾಮ ಇಂದು 101 ವರ್ಷ ಕಳೆದಿದೆ. ಹಿಂದೂ ಸಮಾಜದ ಜಾತಿಯ ಭೂತ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಸಂಘ ಜನ್ಮ ತಾಳಿದೆ. ಎಲ್ಲ ಜಾತಿ ಸಮುದಾಯದ ಹಿಂದೂಗಳ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಎಲ್ಲ ಮಾಹಿತಿ ಪಡೆದರೂ ಜಾತಿಯನ್ನು ಕೇಳದ ಏಕೈಕ ಸಂಘಟನೆ ಸಂಘ. ನಮ್ಮನ್ನು ಜೋಡಿಸುವ ತಂತ್ರ ಹಿಂದುತ್ವ. ಹಿಂದವಾ ಸೋದರಾಹಾ ಸರ್ವೇ ಎನ್ನುವ ಧ್ಯೇಯ ಮಂತ್ರ ನೀಡಿದ್ದು ಆರ್ಎಸ್ಎಸ್ ಸಂಘಟನೆ ಎಂದರು.ಮಾಜಿ ಸೈನಿಕ ಮೋಹನ ಕೃಷ್ಣಾ ನಾಯಕ ಮಾತನಾಡಿ, ಸೇನೆಗೆ ಸೇರಿಯೇ ದೇಶ ಸೇವೆ ಮಾಡಬೇಕಂತಿಲ್ಲ. ನಾಗರಿಕರಾಗಿ ಪ್ರತಿಯೊಂದು ಸೇವೆಯೂ ಸೇವೆಯೇ, ನಿಸ್ವಾರ್ಥ ಸೇವೆ ನಮ್ಮದಾಗಿರಬೇಕು. ಅಂದಾಗ ದೇಶಸೇವೆಗೆ ಸಮನಾಗಿರುತ್ತದೆ. ಸಮವಸ್ತ್ರಕ್ಕೆ ಸಿಗುವ ಗೌರವ ಅಪಾರ. ಸಮವಸ್ತ್ರ ಧರಿಸಿದಾಗ ನಮ್ಮಲ್ಲಿ ಸೇವೆಯ ಶ್ರದ್ಧೆ ಉತ್ಸಾಹ ಒಡಮೂಡುತ್ತದೆ ಎಂದರು.ಮಂಜು ಹಿರೇಮಠ ಸ್ವಾಗತಿಸಿದರು. ರಾಜಶೇಖರ ದೂಳಿ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ವೈಟಿಎಸ್ ಮೈದಾನದಿಂದ ಹೊರಟ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.