ಮತದಾನ ಮಾಡಿ ಪ್ರಜಾಪ್ರಭುತ್ವ ಸದೃಢಗೊಳಿಸಿ: ಗಿರೀಶ ಸ್ವಾದಿ

| Published : Apr 29 2024, 01:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕೆಂದು ತಹಸೀಲ್ದಾರ್‌ ಗಿರೀಶ ಸ್ವಾದಿ ಹೇಳಿದರು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕೆಂದು ತಹಸೀಲ್ದಾರ್‌ ಗಿರೀಶ ಸ್ವಾದಿ ಹೇಳಿದರು.

ತಾಲೂಕು ಸ್ವೀಪ್ ಸಮಿತಿಯಿಂದ ಇಲ್ಲಿನ ಎಸ್‌ಆರ್‌ಎ ಮೈದಾನದಲ್ಲಿ ಆಯೋಜಿಸಿದ್ದ `ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಹಕ್ಕು. ಹೀಗಾಗಿ ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಚುನಾವಣೆಯ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದರು..

ಲೋಕಸಭೆ ವ್ಯಾಪ್ತಿಯ ೨೩೬ ಮತಗಟ್ಟೆಗಳಲ್ಲಿ ಮತದಾರರಿಗೆ ಮತಗಟ್ಟೆಗಳಲ್ಲಿ ಸಿಗುವ ಸೌಲಭ್ಯಗಳು ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ನಡೆ ಮತಗಟ್ಟೆಗಳ ಕಡೆ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆಗಳಿಗೆ ಭೆಟ್ಟಿ ನೀಡಿ ಧ್ವಜಾರೋಹಣ ನೆರವೇರಿಸಿ ಮತಗಟ್ಟೆಗಳ ಬಗ್ಗೆ ಜನರಲ್ಲಿ ಹಾಗು ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಮತದಾರರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಮತದಾನ ದಿನ ಬೇಕಾಗುವ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಗೃಹ, ಹಿರಿಯರು ಮತ್ತು ವಿಶೇಷಚೇತನರಿಗೆ ವೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿದೆ. ಇದನ್ನು ಪ್ರತಿಯೊಬ್ಬ ಮತದಾರರು ಉಪಯೋಗಿಸಿಕೊಂಡು ಮತದಾನ ಮಾಡಲು ಮುಂದೆ ಬರಬೇಕೆಂದರು.

ಚುನಾವಣಾಧಿಕಾರಿ ಸಾಜಿದ್ ಮುಲ್ಲಾ, ಗ್ರೇಡ್-೨ ತಹಸೀಲ್ದಾರ್‌ ಎಸ್.ಬಿ. ಕಾಂಬಳೆ, ಪೌರಾಯುಕ್ತ ಜಗದೀಶ ಈಟಿ ಸೇರಿದಂತೆ ಅನೇಕ ಸಿಬ್ಬಂದಿ ಇದ್ದರು.