ಮತದಾನ ಮಾಡಿ ಪ್ರಜಾಪ್ರಭುತ್ವ ಸದೃಢಗೊಳಿಸಿ- ತಹಸೀಲ್ದಾರ್ ಬಡಿಗೇರ ಕರೆ

| Published : Jan 26 2024, 01:46 AM IST

ಮತದಾನ ಮಾಡಿ ಪ್ರಜಾಪ್ರಭುತ್ವ ಸದೃಢಗೊಳಿಸಿ- ತಹಸೀಲ್ದಾರ್ ಬಡಿಗೇರ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಕರೆ ನೀಡಿದರು.

ಶಿರಹಟ್ಟಿ: ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸಬೇಕು. ವಿದ್ಯಾವಂತರೇ ಮತದಾನದಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಮತದಾನ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಗುಣಾತ್ಮಕ ಮತ್ತು ಪಾರದರ್ಶಕ ಮತದಾನ ಜರುಗಲು ಪ್ರತಿಯೊಬ್ಬರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಕರೆ ನೀಡಿದರು.

ಭಾರತ ಚುನಾವಣಾ ಆಯೋಗ, ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಗುರುವಾರ ನಡೆದ ಮತದಾನದ ಮಹತ್ವ, ಮತದಾನ ಮಾಡುವ ಪ್ರಕ್ರಿಯೆ ಹಾಗೂ ಜಾಗೃತಿ ಕಾರ್ಯಕ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರು ಸಂವಿಧಾನಬದ್ಧ ಮತದಾನದ ಹಕ್ಕಿನ ಅರಿವು ಪಡೆದುಕೊಳ್ಳಬೇಕು. ಆಸೆ, ಆಮಿಷಗಳಿಗೆ ಬಲಿಯಾಗದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರು ಸರಿಯಾದ ವ್ಯಕ್ತಿಗೆ ಮತ ನೀಡಬೇಕು. ಜನರು ಚುನಾವಣೆಯನ್ನು ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದು ಹೇಳಿದರು.

ಮತದಾನದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂಬುದು ಚುನಾವಣಾ ಆಯೋಗದ ಗುರಿ. ಈ ನಿಟ್ಟಿನಲ್ಲಿ ಮತದಾನ ಹಾಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ನಿರ್ಭಿಡೆಯಿಂದ ಮತದಾನ ಮಾಡಬೇಕು. ದೇಶ ಕಟ್ಟುವ ಜವಾಬ್ದಾರಿ ನಮ್ಮ ಯುವಕರಲ್ಲಿದ್ದು, ಯುವ ಜನತೆ ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಿದರು.

ನೂರಕ್ಕೆ ನೂರು ಮತದಾನ ಆಗಲೇಬೇಕು ಎಂಬ ಮಹದಾಸೆಯಿಂದ ಚುನಾವಣಾ ಆಯೋಗ ವಿವಿಧ ಹಂತಗಳಲ್ಲಿ ಅರಿವು, ತರಬೇತಿ ಕಾರ್ಯಕ್ಕೆ ಮುಂದಾಗಿದೆ. ನಿಮ್ಮನ್ನು ಆಳುವವರನ್ನು ಆಯ್ಕೆಮಾಡಿಕೊಳ್ಳುವ ತೀರ್ಮಾನ ನಿಮ್ಮ ಕೈಯಲ್ಲಿದ್ದು, ಜನಸ್ನೇಹಿ ಮತದಾನಕ್ಕೆ ಮುಂದಾಗಬೇಕು ಎಂದರು.

ಮತ ಚಲಾವಣೆ ಮಾಡದೇ ಇರುವುದು ಅಭದ್ರತೆಗೆ ಕಾರಣವಾಗುತ್ತಿದ್ದು, ಮತದಾರ ಪಟ್ಟಿಯಲ್ಲಿರುವವರು ಕಡ್ಡಾಯವಾಗಿ ಮತ ಚಲಾವಣೆ ಮಾಡಲೇಬೇಕು. ವಿದ್ಯಾವಂತರು, ಆರ್ಥಿಕವಾಗಿ ಸಬಲರಿದ್ದವರು ಇಂದು ಆಸೆ, ಆಮಿಷಗಳಿಗೆ ಬಲಿಯಾಗುತ್ತಿರುವುದು ಕಂಡುಬರುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೇ ಪ್ರಬಲ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ವಿವೇಚನೆಯಿಂದ ಮತಚಲಾವಣೆ ಮಾಡಬೇಕು. ಚುನಾವಣಾ ಆಯೋಗದ ಆಸೆಯಂತೆ ವ್ಯವಸ್ಥಿತ ಮತದಾನಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಮಾತನಾಡಿ, ಜಗತ್ತಿನ ಯಾವ ದೇಶದಲ್ಲಿಯೂ ಮಾದರಿ ಮತ್ತು ಪ್ರಾಮಾಣಿಕ ಚುನಾವಣೆ ನಡೆಯುತ್ತಿಲ್ಲ ಎಂಬ ವರದಿ ಇದೆ. ಭಾರತ ದೇಶ ಬೇರೆ ದೇಶಗಳಿಗೆ ಮಾದರಿಯಾಗಿದೆ.

ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಮತದಾನ ಮಾಡುವವರ ಸಂಖ್ಯೆ ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಸಮಾಜದ ಹಾಗೂ ಪ್ರಜಾ ಪ್ರಭುತ್ವದ ಬಲವರ್ಧನೆಗೆ ತಪ್ಪದೇ ಮತದಾನ ಮಾಡಬೇಕು ಎಂದರು.

ಮತದಾನ ನಮ್ಮ ಹಕ್ಕಾಗಿದ್ದು ಗುಣಾತ್ಮಕ ಮತ್ತು ಪಾರದರ್ಶಕ ಮತದಾನ ಜರುಗಲು ಪ್ರತಿಯೊಬ್ಬರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸುವುದು ಅಗತ್ಯವಾಗಿದ್ದು, ಯಾರ ಒತ್ತಡಕ್ಕೂ ಮಣಿಯದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ಸರಿಯಾದ ವ್ಯಕ್ತಿಗೆ ಮತ ನೀಡಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಎಂ.ಸಿ. ಭಜಂತ್ರಿ, ಎಂ.ಕೆ. ಲಮಾಣಿ, ಸಂತೋಷ ಅಸ್ಕಿ, ಹನುಮೇಶ ಕೊಂಡಿಕೊಪ್ಪ, ಎನ್.ಎನ್. ಸಾವಿರಕುರಿ ಎಂ.ಎಂ. ನದಾಫ್, ಎನ್.ಎಚ್. ಹನಮರಡ್ಡಿ ಸೇರಿ ಇತರರು ಇದ್ದರು.