ಶೇ.100 ಮತದಾನ ಮಾಡಿ ದೇಶಕ್ಕೇ ಮಾದರಿಯಾಗಿ: ಇಒ

| Published : May 02 2024, 12:23 AM IST

ಸಾರಾಂಶ

ನಮ್ಮ ರಾಜ್ಯದಲ್ಲಿ ಈಗಾಗಲೇ ಮೊದಲನೇ ಹಂತದ ಚುನಾವಣೆಯೂ ನಡೆದಿದೆ. ಮತದಾನ ಪ್ರಮಾಣ ಕೂಡ ಎಲ್ಲರೂ ಗಮನಿಸಿದ್ದೀರಿ.

ಹರಪನಹಳ್ಳಿ: ಶೇ.100 ಮತದಾನ ಮಾಡುವ ಮೂಲಕ ಇಡೀ ದೇಶಕ್ಕೆ ಹರಪನಹಳ್ಳಿ ತಾಲೂಕು ಮಾದರಿಯಾಗಿ ನಿಲ್ಲುವಂತೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಪಂ ಇಒ ವೈ.ಎಚ್. ಚಂದ್ರಶೇಖರ್ ಹೇಳಿದರು.

ತಾಲೂಕಿನ ಕುಂಚೂರು ಗ್ರಾಪಂ ವ್ಯಾಪ್ತಿಯ ಕುಂಚೂರು ಗ್ರಾಮದಲ್ಲಿ ನರೇಗಾದಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ತಾಪಂ, ಕುಂಚೂರು ಗ್ರಾಪಂನಿಂದ ಬುಧವಾರ ಹಮ್ಮಿಕೊಂಡಿದ್ದ ಚುನಾವಣಾ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಈಗಾಗಲೇ ಮೊದಲನೇ ಹಂತದ ಚುನಾವಣೆಯೂ ನಡೆದಿದೆ. ಮತದಾನ ಪ್ರಮಾಣ ಕೂಡ ಎಲ್ಲರೂ ಗಮನಿಸಿದ್ದೀರಿ. ನಮ್ಮ ತಾಲೂಕಿನಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಅಂದು ಶೇ.100ರಷ್ಟು ಮತದಾನ ಮಾಡಬೇಕು. ಅದರಲ್ಲೂ ವಿದ್ಯಾವಂತರೇ ಹೆಚ್ಚೆಚ್ಚು ಮತದಾನ ಮಾಡಿ ಬೇರೆಯವರಿಗೂ ವೋಟ್ ಹಾಕಲು ಪ್ತೋತ್ಸಾಹಿಸಬೇಕು ಈ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಕಾರಣ ಮತದಾನ ಮಾಡಿದವರೇ ಇಲ್ಲಿ ಮಹಾಶೂರರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್., ಪಂ.ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಪಿಡಿಒ ಮಂಜ್ಯಾನಾಯ್ಕ, ತಾಲೂಕು ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ನಿಟ್ಟೂರು ಕಾರ್ಯದರ್ಶಿ ಬಸವರಾಜ, ತಾಂತ್ರಿಕ ಸಹಾಯಕ ಅಭಿಯಂತರ ಆರ್.ಲೋಕೇಶ್ ನಾಯ್ಕ, ಬಿಎಫ್‌ಟಿ ಕೊಟ್ರೇಶ್ ಬಂಡ್ರಿ ಸೇರಿದಂತೆ ಕುಂಚೂರು, ನಿಟ್ಟೂರು ಗ್ರಾಪಂ ಸಿಬ್ಬಂದಿ, ನರೇಗಾ ಮೇಟಿಗಳು, 8೦೦ಕ್ಕೂ ಅಧಿಕ ಕೂಲಿಕಾರರು ಇದ್ದರು.

ಕೋಟ್:ಲೋಕಸಭಾ ಚುನಾವಣೆ ಇರುವುದರಿಂದ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ದೇಶವು ಇಡೀ ಪ್ರಪಂಚದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಮತದಾನ ಮಾಡುವಲ್ಲಿ ಜನರು ನಿರ್ಲಕ್ಷ್ಯ ತೋರಬಾರದು. ಚುನಾವಣೆ ಪರ್ವ, ದೇಶದ ಗರ್ವವಾಗಿದೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ ನಮ್ಮ ಪ್ರಜಾಪ್ರಭುತ್ವದ ಗೌರವವನ್ನು ಮತ್ತಷ್ಟು ಹೆಚ್ಚಿಸಬೇಕು. ಚಂದ್ರಶೇಖರ್ ವೈ.ಎಚ್., ಹರಪನಹಳ್ಳಿ ತಾಪಂ ಇಒನರೇಗಾ ಸಹಾಯವಾಣಿ ಬಗ್ಗೆ ಮಾಹಿತಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆಂದೇ ರಾಜ್ಯಮಟ್ಟದಲ್ಲಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಇತ್ತು. ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ವಿವಿಧ ಸೌಲಭ್ಯ ಹಾಗೂ ಕುಂದು-ಕೊರತೆಗಳನ್ನು ಸಾರ್ವಜನಿಕರು ತಿಳಿಸಲು ಏಕೀಕೃತ ಸಹಾಯವಾಣಿ ಸಂಖ್ಯೆ ಆರಂಭಿಸಿದ್ದು, ಇದರಲ್ಲಿ ನರೇಗಾದ ದೂರು, ಮಾಹಿತಿ, ಕೆಲಸದ ಬೇಡಿಕೆ, ಕೂಲಿ ಹಣ ಪಾವತಿ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಹಾಯವಾಣಿ ಸಂಖ್ಯೆ 82775೦6೦೦೦ ಗೆ ಕರೆ ಮಾಡಬಹುದು ಎಂದು ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.