ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ದೇಶದಲ್ಲಿ ಸುಭದ್ರತೆ ಹಾಗೂ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡುತ್ತಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಚಲನಚಿತ್ರ ನಟಿ ಹಾಗೂ ಬಿಜೆಪಿ ಧುರೀಣೆ ತಾರಾ ಅನುರಾಧಾ ಹೇಳಿದರು.ನಗರದ ಸ್ಟೇಷನ್ ರಸ್ತೆಯ ಬಿಜೆಪಿ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಕಾಂಗ್ರೆಸ್‌ನ ಸುಳ್ಳು ಹೇಳಿಕೆಗೆ ಮಾರು ಹೋಗದೆ ಬಿಜೆಪಿಗೆ ಬೆಂಬಲ ನೀಡಬೇಕು. ದೇಶದ ಭದ್ರತೆ, ಆರ್ಥಿಕತೆ, ಮಹಿಳಾ ಸಬಲೀಕರಣಕ್ಕಾಗಿ ಎಲ್ಲರೂ ಬಿಜೆಪಿ ಬೆಂಬಲಿಸೋಣ ಎಂದರು.ಕುಂಕುಮ ಇಟ್ಟುಕೊಂಡು ಬಂದವರನ್ನು ನೋಡಿದರೆ ಭಯ ಆಗುತ್ತೆ ಎನ್ನುವ ಸಿಎಂ ಸಿದ್ದರಾಮಯ್ಯ ಬಿಜೆಪಿ ಸಮಾವೇಶಕ್ಕೆ ಬರುವ ಮಹಿಳೆಯರನ್ನು ನೋಡಿದರೆ ಮೂರ್ಛೆ ಹೋಗುತ್ತಾರೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಮಗದೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಎಲ್ಲರೂ ಬಿಜೆಪಿಗೆ ಮತ ನೀಡಿ, ಮತ ಹಾಕಿಸಿ ಎಂದರು.
ಬಿಜೆಪಿ ಗೆಲುವು ಸಾಧಿಸಿದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರ ರಚನೆಗೆ ನಡೆಯುತ್ತಿರುವ ಚುನಾವಣೆ. ಗ್ಯಾರಂಟಿ ಕೊಡುತ್ತಿರುವುದು ರಾಜ್ಯ ಕಾಂಗ್ರೆಸ್‌ನವರು. ಮಹಿಳೆಯರು ಒಂದನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದು ವೇಳೆ ಕಾಂಗ್ರೆಸ್‌ನವರು ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸಿದರೂ ನಾವು ಹೋರಾಟ ಮಾಡಿಯಾದರೂ ಅವುಗಳನ್ನು ಪುನಃ ಆರಂಭಿಸಲು ಒತ್ತಾಯ ಮಾಡುತ್ತೇವೆ ಎಂದರು.ರತ್ನಗಂಬಳಿ ಹಾಸಿ ಸ್ವಾಗತ:
ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರು ಮುಂದೊಂದು ದಿನ ವಿಧಾನಸಭೆ ಮೇಲೆ ಪಾಕಿಸ್ತಾನ ಧ್ವಜ ಹಾರಿಸಲು ಮುಂದಾಗುತ್ತಾರೆ. ಅಂತಹವರಿಗೆ ಅವಕಾಶ ಮಾಡಿಕೊಡಬಾರದು. ನಾವು ಎಚ್ಚರಿಕೆಯಿಂದ ಇರಬೇಕು. ಅದಕ್ಕಾಗಿ ಎಲ್ಲರೂ ಬಿಜೆಪಿ ಬೆಂಬಲಿಸೋಣ. ಒಂದು ಕಾಲದಲ್ಲಿ ನಮ್ಮ ದೇಶದ ಜನತೆ ಎಂದರೆ ಮೂರನೇ ದರ್ಜೆ ಜನ ಅಂತಾ ಹೇಳುತ್ತಿದ್ದರು. ವೀಸಾ ಸಹ ಭಾರತದ ಪ್ರಧಾನಿಗೆ ದೊರೆತಿರಲಿಲ್ಲ. ಆದರೀಗ ಭಾರತದ ಪ್ರಧಾನಿ ಬರ್ತಾರೆ ಎಂದರೆ ಬೇರೆ ದೇಶದವರು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಇದು ಬಿಜೆಪಿಯ ಬದಲಾವಣೆಯ ಯಶಸ್ಸು ಎಂದರು.ಬಿಜೆಪಿ ಮಹಿಳೆಯರು, ಬಡವರ, ಪರವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಸಮೀಕ್ಷೆಯಲ್ಲಿ ಎನ್‌ಡಿಎ 400 ಸೀಟು ಗೆಲ್ಲಲಿದೆ ಎಂದು ಬಂದಿದೆ. ಆದ್ದರಿಂದ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಬೇಕು. ನಾಲ್ಕು ನೂರರಲ್ಲಿ ಅವರು ಒಬ್ಬರು ಆಗಬೇಕು. ರಾಜ್ಯ ಸರ್ಕಾರ ಉಚಿತವಾಗಿ ಅಕ್ಕಿ ಕೊಡುತ್ತಿಲ್ಲ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಮಾತ್ರವಲ್ಲದೆ ದೇಶದ 85 ಕೋಟಿ ಕುಟುಂಬಗಳಿಗೆ 5 ಕೆ.ಜಿ. ಅಕ್ಕಿ ಕೊಡುತ್ತಿದ್ದಾರೆ. ಕಾಂಗ್ರೆಸ್ ರೈತರು, ಮಹಿಳೆಯರ ಹೆಸರಿನಲ್ಲಿ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಬಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪತ್ನಿ ಚೆನ್ನಮ್ಮ ಬೊಮ್ಮಾಯಿ ಮಾತನಾಡಿ, ದೇಶ ಇಷ್ಟೊಂದು ಅಭಿವೃದ್ಧಿ ಹೊಂದಲು ಮೋದಿ ಕಾರಣ. ಮಹಿಳೆಯರಿಗೆ ಸೂರು, ನೀರು ಬಹಳ ಮುಖ್ಯ. ಆದ್ದರಿಂದ ಮೋದಿಯವರು ಮುಂದಿನ ದಿನದಲ್ಲಿ ಮಹಿಳೆಯರ ಹೆಸರಿನಲ್ಲಿಯೆ ಆಶ್ರಯ ಮನೆ ನೀಡಬೇಕು ಎಂಬ ಕನಸ್ಸು ಹೊಂದಿದ್ದಾರೆ. ಆದ್ದರಿಂದ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಬೊಮ್ಮಾಯಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಬಿಜೆಪಿಗೆ ಮತ ನೀಡಿ:
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸೃಷ್ಟಿ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನೇಕ ಯೋಜನೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ₹2 ಸಾವಿರ ಮನೆಯ ಯಜಮಾನಿಗೆ ಕೊಟ್ಟು ₹4 ಸಾವಿರ ನಿಮ್ಮ ಪತಿಯಿಂದ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಮಹಿಳೆಯರು ₹2 ಸಾವಿರ ಹಾಗೂ ₹1 ಲಕ್ಷ ಹೆಸರಿನಲ್ಲಿ ಮೋಸ ಹೋಗಬೇಡಿ. ನಿಮಗೆ ಭದ್ರತೆ ನೀಡುವ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ, ಮಂಗಳಗೌರಿ ಪೂಜಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಭಾರತಿ ಜಂಬಗಿ, ಲಲಿತಾ ಜಾಧವ, ಭಾರತಿ ಅಳವಂಡಿ, ಶಿಲ್ಪಾ ಮರಳಪ್ಪನವರ, ಸುಜಾತಾ ಆರಾಧ್ಯಮಠ, ರೂಪಾ ಬಾಕಳೆ, ರಮೇಶ ಗುತ್ತಲ, ಪರಮೇಶ ಗೂಳಣ್ಣನವರ ಹಾಗೂ ಪಕ್ಷದ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.