ದೇಶದ ಒಳಿತಾಗಿ ಕಡ್ಡಾಯವಾಗಿ ಮತದಾನ ಮಾಡಿ

| Published : Apr 20 2024, 01:05 AM IST

ಸಾರಾಂಶ

ಸಮಾಜದ ಒಳಿತಿಗಾಗಿ, ಜಿಲ್ಲೆಯ, ದೇಶದ ಅಭಿವೃದ್ಧಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ಮೇ 7ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ರಿಷಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಮಾಜದ ಒಳಿತಿಗಾಗಿ, ಜಿಲ್ಲೆಯ, ದೇಶದ ಅಭಿವೃದ್ಧಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ಮೇ 7ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ರಿಷಿ ಹೇಳಿದರು.

ಶುಕ್ರವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿರುವ ಮತದಾನ ಜಾಗೃತಿಯ ಕಾರ್ಯಕ್ರಮದಲ್ಲಿ ವಿವಿಧ ಬಣ್ಣ ಬಣ್ಣದ ರಂಗೋಲಿಯಲ್ಲಿ‌ ಮೂಡಿರುವ ಮತದಾನ ಜಾಗೃತಿ ಚಿತ್ರಗಳನ್ನು ವೀಕ್ಷಿಸಿ, ಪಕ್ಷಿಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಮರದಲ್ಲಿ ನೇತಾಕಿ ಹಾಗೂ ಬಣ್ಣ ಬಣ್ಣದ ಹೀಲಿಯಂ ಬಲೂನ್‌ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಅವರು ಮಾತನಾಡಿದರು.

2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಶೇ 100ರಷ್ಟು ಮತದಾನವಾಗಿಸುವ ನಿಟ್ಟಿನಲ್ಲಿ, ವಿಶೇಷವಾಗಿ ನವ ಮತದಾರರು, ಮಹಿಳೆಯರು, ಮುಖ್ಯವಾಹಿನಿಯಿಂದ ದೂರವಿರುವ ಅಲೆಮಾರಿ ಜನಾಂಗದವರು, ದಿವ್ಯಾಂಗರು ಮತ್ತು ಹಿರಿಯ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಮತದಾನ ಮಾಡಿ ಪ್ರಜಾ ಪ್ರಭುತ್ವ ಗಟ್ಟಿಗೊಳಿಸಿ ಎಂದು ಹೇಳಿದರು.

ಇನ್ನೂ ಕಂದಾಯ ಇಲಾಖೆ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ನಿಮ್ಮ ಮನೆಯ ಒಂದು ಕಾರ್ಯಕ್ರಮದಲ್ಲಿ ಸುಮಾರು ದಿನಗಳ ಕಾಲ ತಯಾರಿ ಇಡೀ ಪಟ್ಟಣಕ್ಕೆ ಕರೆ ನೀಡಿದಾಗ ಯಾರೊಬ್ಬರೂ ಬರದೇ ಇದ್ದರೆ ನಿಮಗೆ ಅತ್ಯಂತ ನೋವು ಆಗುತ್ತದೆ. ಅದರಂತೆ ಸುಮಾರು 6 ತಿಂಗಳ ಕಾಲ ನಿರಂತರವಾಗಿ ಜಿಲ್ಲಾಡಳಿತ ಹಾಗೂ ಚುನಾವಣೆ ಇಲಾಖೆ 2024ರ ಲೋಕಸಭಾ ಚುನಾವಣೆ ತಯಾರಿ ನಡೆಸಿದೆ. ಅದಕ್ಕಾಗಿ ಪ್ರತಿಯೊಬ್ಬರನ್ನೂ ಪ್ರೇರೇಪಿಸಿ, ಜಾಗೃತಿಗೊಳಿಸಿ ಕಡ್ಡಾಯವಾಗಿ ಮತದಾನ ಮಾಡಲು ಮನವರಿಕೆ ಮಾಡಿ ಮತದಾನದ ಪ್ರತಿಶತ ಹೆಚ್ಚಿಸಿ ಪ್ರಜಾಪ್ರಭುತ್ವ ಹಬ್ಬ ಆಚರಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಮಂಜುಳಾ ನಾಯಿಕ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಎಸ್ ಬಿ ಮಾತನಾಡಿದರು. ತದನಂತರ ತಾಲೂಕು ಆಡಳಿತದ ಸೌಧದಿಂದ ರಥಯಾತ್ರೆ ಪ್ರಾರಂಭಿಸಿ, ರಸ್ತೆಯ ಉದ್ದಗಲಕ್ಕೂ ಎಸ್ ಬಿ ಎಮ್ ಸಾಂಪ್ರದಾಯಿಕ ಗೊಂಬೆಗಳ ಮೆರವಣಿಗೆಯ ಕುಣಿತ, 4 ನೂರು ಮೀಟರ್ ಉದ್ದದ ಮತದಾನ ಜಾಗೃತಿ ಧ್ವಜದೊಂದಿಗೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ , ಮಹಾವೀರ ವೃತ್ತ ಹಾಗೂ ನಗರ ಹೃದಯಭಾಗದ ಮಹಾತ್ಮಾ ಗಾಂಧೀಜಿ ವೃತ್ತ, ಶಾಂತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದು ಪಟ್ಟಣದ ಪ್ರಮುಖ ಬೀದಿ, ರಸ್ತೆಯಲ್ಲಿ ಜಾಥಾ ಮಾಡಲಾಯಿತು. ಪೊಲೀಸ್ ಮೈದಾನಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣದ ಎಲ್ಲರಿಗೂ ಸಿಇಒ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ, ಹೆಸ್ಕಾಂ ಇಲಾಖೆ ಅಧಿಕಾರಿ ಎಸ್ ಆರ್ ಮೆಡೆದಾರ, ಕ್ಷೇತ್ರ ಸಮನ್ವಯಾಧಿಕಾರಿ ನಡಗಡ್ಡಿ, ರಾಯಭಾರಿ ರಾಜೇಶ ಪವಾರ, ಸಿಡಿಪಿಒ ಗುತ್ತರಗಿಮಠ ಇನ್ನೂ ಅನೇಕ ತಾಲೂಕು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಕೆ ಅಮ್ಮಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ವಿವಿಧ ಸ್ವಸಹಾಯ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಖಾತ್ರಿ ಸಂಜಯ ಕಡಗೇಕರ್ ಸ್ವಾಗತಿಸಿದರು. ಪಿಡಿಒ ಬಸವರಾಜ ಬಬಲಾದ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜೆ ಇಂಡಿ ವಂದಿಸಿದರು.