ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗ್ರಾಮಾಧಿಕಾರಿಗಳ ಮುಷ್ಕರ

| Published : Feb 11 2025, 12:50 AM IST

ಸಾರಾಂಶ

ಕಂದಾಯ ಇಲಾಖೆ ನೌಕರರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ, ಕಳೆದ ಎರಡು ವರ್ಷಗಳಿಂದ ೨೧ ಬೇಡಿಕೆಗಳನ್ನು ಸಲ್ಲಿಸಲಾಗಿದ್ದು, ಈವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರಕಿಲ್ಲ. ಮೂಲಭೂತ ಸೌಕರ್ಯಗಳಾದ ಗ್ರಾಮಾಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಟೇಬಲ್ ಕುರ್ಚಿ, ಅಲ್ಮೆರಾ, ಗುಣಮಟ್ಟದ ಮೊಬೈಲ್ ಪೋನ್ ಜೊತೆ ಸಿಯುಜಿ ಸಿಮ್ ಹಾಗೂ ಡೇಟಾ, ಗೂಗಲ್ ಕ್ರೋಮ್, ಲ್ಯಾಪ್ ಟ್ಯಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ವ್ಯವಸ್ಥೆಯನ್ನು ಕಲ್ಪಿಸಬೇಕು,

ಕನ್ನಡಪ್ರಭವಾರ್ತೆ ಹೊಸಕೋಟೆ

ಗ್ರಾಮಾಡಳಿತ ಅಧಿಕಾರಿಗಳ ಹುದ್ದೆಗೆ, ತಾಂತ್ರಿಕ ಹುದ್ದೆಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶವನ್ನು ನೀಡಬೇಕು ಎಂಬ ಬೇಡಿಕೆ ಸೇರಿ ಕಚೇರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಎರಡನೇ ಹಂತದ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ನ್ಯಾನಮೂರ್ತಿ ತಿಳಿಸಿದರು.

ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ಹಂತದ ಮುಷ್ಕರದಲ್ಲಿ ಮಾತನಾಡಿದರು.

ಕಂದಾಯ ಇಲಾಖೆ ನೌಕರರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ, ಕಳೆದ ಎರಡು ವರ್ಷಗಳಿಂದ ೨೧ ಬೇಡಿಕೆಗಳನ್ನು ಸಲ್ಲಿಸಲಾಗಿದ್ದು, ಈವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರಕಿಲ್ಲ. ಮೂಲಭೂತ ಸೌಕರ್ಯಗಳಾದ ಗ್ರಾಮಾಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಟೇಬಲ್ ಕುರ್ಚಿ, ಅಲ್ಮೆರಾ, ಗುಣಮಟ್ಟದ ಮೊಬೈಲ್ ಪೋನ್ ಜೊತೆ ಸಿಯುಜಿ ಸಿಮ್ ಹಾಗೂ ಡೇಟಾ, ಗೂಗಲ್ ಕ್ರೋಮ್, ಲ್ಯಾಪ್ ಟ್ಯಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ವ್ಯವಸ್ಥೆಯನ್ನು ಕಲ್ಪಿಸಬೇಕು, ಮೊಬೈಲ್ ತಂತ್ರಾಂಶದ ಕೆಲಸ ವಿಚಾರವಾಗಿ ಇದುವರೆಗೂ ಆಗಿರುವ ನೌಕರರ ಅಮಾನತ್ತನ್ನು ರದ್ದುಪಡಿಸಬೇಕು, ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಹಾಗೂ ರಾಜಸ್ವ ನಿರೀಕ್ಷಕ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿಗೆ ಕ್ರಮ ವಹಿಸಬೇಕು, ಅಂತರ್ ಜಿಲ್ಲಾ ಪತಿ, ಪತ್ನಿ ಪ್ರಕರಣಗಳ ವರ್ಗಾವಣೆಗಳಿಗೆ ಚಾಲನೆ ನೀಡುವಂತಾಗಬೇಕು. ವಿಶೇಷ ಚೇತನರ ತೀವ್ರ ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ಪ್ರಕರಣಗಳ ನಿಯೋಜನೆಗಳನ್ನು ಕೌನ್ಸೆಲಿಂಗ್ ಮೂಲಕ ನಿಯೋಜನೆ ಮಾಡಬೇಕು ಎಂಬ ಹಲವು ಬೇಡಿಕೆ ಇಟ್ಟಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಮೊದಲ ಹಂತದ ಪ್ರತಿಭಟನೆ ಹಮ್ಮಿಕೊಳ್ಳಾಗಿತ್ತು. ಆಗ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯ ಸಭೆಯಲ್ಲಿ ಮಾತಕತೆ ನಡೆಸಿ ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಐದು ತಿಂಗಳು ಕಳೆದರೂ ಸಹ ಯಾವುದೇ ಬೇಡಿಕೆ ಈಡೇರಿಸದ ಹಿನ್ನೆಲೆ ಎರಡನೇ ಹಂತದ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ತಾಲೂಕು ಗ್ರಾಮಾಡಳಿತ ಅಧಿಕಾರಿಗಳ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.