ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಜನರ ಕೈಗೆ ಸಿಗಲ್ಲ ಎಂಬುದು ಸುಳ್ಳು,ಎಲ್ಲರ ಕೈಗೂ ಸಿಗ್ತಾರೆ,ಸುನೀಲ್ ಬೋಸ್‌ಗೆ ವೋಟು ಹಾಕಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ತಾಲೂಕಿನ ಚಿಕ್ಕಾಟಿ,ನಿಟ್ರೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸುನೀಲ್ ಬೋಸ್ ಸಕ್ರೀಯ ರಾಜಕಾರಣದಲ್ಲಿ ಇರುವ ಕಾರಣ ಜನರ ಕೈಗೆ ಸಿಕ್ಕೇ ಸಿಗುತ್ತಾರೆ ಎಂದು ಭರವಸೆ ನೀಡಿದರು. ಜನಪರವಾಗಿ ಇರುವ ಸುನೀಲ್ ಬೋಸ್ ಆಯ್ಕೆ ಮಾಡಿದರೆ ಲೋಕಸಭೆ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ ಹಾಗಾಗಿ ವಿಪಕ್ಷದ ಮಾತಿಗೆ ಮರುಳಾಗದೆ ಸುನೀಲ್ ಬೋಸ್ ಗೆಲ್ಲಿಸಿ ಕಾಂಗ್ರೆಸ್‌ಗೆ ಶಕ್ತಿ ತುಂಬಿ ಎಂದರು.
ಸುನೀಲ್ ಬೋಸ್‌ಗೆ ರಾಜಕಾರಣ ಹೊಸತಲ್ಲ, ಸುನೀಲ್ ಬೋಸ್ ತಂದೆ ಕೂಡ ಕಳೆದ ಮೂರು ದಶಕಗಳಿಂದಲೂ ಸಕ್ರೀಯ ರಾಜಕಾರಣದಲ್ಲಿ ಇದ್ದಾರೆ. ಸುನೀಲ್ ಬೋಸ್ ಕೂಡ ನಂಜನಗೂಡು, ಟಿ.ನರಸೀಪುರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಆದರೀಗ ಕಾಂಗ್ರೆಸ್ ಹೈ ಕಮಾಂಡ್ ಟಿಕೆಟ್ ನೀಡಿದೆ ಎಂದರು.ನುಡಿದಂತೆ ನಡೆದಿದೆ: ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ 7 ಮಂದಿ ಶಾಸಕರು ಇದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೂಡ ಸಿದ್ದರಾಮಯ್ಯ ಚುನಾವಣಾ ಪೂರ್ವ ನೀಡಿದ್ದ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ದಾಗಿದೆ ಎಂದರು.
ಗೆಲುವು ಕಷ್ಟವಲ್ಲ:ಲೋಕಸಭೆ ಕ್ಷೇತ್ರದಲ್ಲಿ ೭ ಮಂದಿ ಶಾಸಕರು ಇದ್ದೇವೆ. ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೆ ತಂದಿದ್ದು ಇದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಷ್ಟ ಎನಿಸುವುದಿಲ್ಲ ಸುನೀಲ್ ಬೋಸ್ ಗೆಲುವಿನಲ್ಲಿ ಕಷ್ಟವಿಲ್ಲ ಎಂದರು. ನಿಮ್ಮ ಬೂತ್ ನಿಮ್ಮ ಹೊಣೆ ಎಂಬಂತೆ ಕ್ಷೇತ್ರದ ಎಲ್ಲಾ ಬೂತ್ ಗಳಲ್ಲಿ ಹೆಚ್ಚಿನ ಮತ ಕಾಂಗ್ರೆಸ್ ಬೀಳುವಂತೆ ಮಾಡುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರವಿದ್ದು ಪಕ್ಷದ ಕಾರ್ಯಕರ್ತರು ಶ್ರಮಿಸಿ ಹೆಚ್ಚಿನ ಮತ ಬೂತ್ ಬೀಳುವಂತೆ ನೋಡಿಕೊಳ್ಳಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷ ಎಲ್ಲರ ಪರವಾಗಿದೆ ಯಾವುದೇ ಒಂದು ಜಾತಿಗೆ ಮೀಸಲಾಗಿಲ್ಲ. ಗ್ಯಾರಂಟಿ ಯೋಜನೆಗಳ ಶೇ.೯೯ ರಷ್ಟು ಜಾರಿಯಾಗಿವೆ ಮಹಿಳಾ ಮತದಾರರು ಕಾಂಗ್ರೆಸ್‌ಗೆ ಹೆಚ್ಚು ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಚಿಕ್ಕಾಟಿ,ನಿಟ್ರೆ ಪ್ರಚಾರ ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು ,ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ನಂದಕುಮಾರ್, ಜಿಪಂ ಮಾಜಿ ಸದಸ್ಯ ನಿಟ್ರೆ ನಾಗರಾಜು, ಕೆ.ಶಿವಸ್ವಾಮಿ, ಕೆರಹಳ್ಳಿ ನವೀನ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ನಂದೀಶ್,ಬೋರ್ ಮಹೇಶ್ ಹಾಗೂ ನಿಟ್ರೆ, ಚಿಕ್ಕಾಟಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರಿದ್ದರು.