ಸೂಳೆಕೆರೆ ಸಂರಕ್ಷಣೆ ಭರವಸೆ ನೀಡುವ ಅಭ್ಯರ್ಥಿ, ಪಕ್ಷಕ್ಕೆ ಮತ

| Published : Apr 30 2024, 02:02 AM IST

ಸೂಳೆಕೆರೆ ಸಂರಕ್ಷಣೆ ಭರವಸೆ ನೀಡುವ ಅಭ್ಯರ್ಥಿ, ಪಕ್ಷಕ್ಕೆ ಮತ
Share this Article
  • FB
  • TW
  • Linkdin
  • Email

ಸಾರಾಂಶ

ಏಷ್ಯಾದ 2ನೇ ಅತಿ ದೊಡ್ಡ ಕೆರೆ, ದಾವಣಗೆರೆ ಜಿಲ್ಲೆಯ ಹೆಮ್ಮೆಯಾದ ಸೂಳೆಕೆರೆಯನ್ನು ಸಂರಕ್ಷಣೆ ಮಾಡುವ ಭರವಸೆ ನೀಡುವ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಮತದಾರರು ಮತ ನೀಡಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ನುಡಿದಿದ್ದಾರೆ.

- ಕೆರೆ ಒತ್ತುವರಿ ತೆರವು, ಹೂಳೆತ್ತುವ ಭರವಸೆ ನೀಡಲಿ: ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ಮನವಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಏಷ್ಯಾದ 2ನೇ ಅತಿ ದೊಡ್ಡ ಕೆರೆ, ದಾವಣಗೆರೆ ಜಿಲ್ಲೆಯ ಹೆಮ್ಮೆಯಾದ ಸೂಳೆಕೆರೆಯನ್ನು ಸಂರಕ್ಷಣೆ ಮಾಡುವ ಭರವಸೆ ನೀಡುವ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಮತದಾರರು ಮತ ನೀಡಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ನುಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶತಶತಮಾನಗಳ ಇತಿಹಾಸವಿರುವ ಸೂಳೆಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿದೆ. ಹೂಳೆತ್ತಿಸುವ ಕೆಲಸವಾದರೆ ಮಾತ್ರ ಕೆರೆಯಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ ಎಂದರು.

ಸೂಳೆಕೆರೆ ಹೂಳೆತ್ತಿದರೆ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಾದರೆ ಮಾತ್ರ ಭ‍ವಿಷ್ಯದಲ್ಲಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಜನರು, ರೈತರ ಬದುಕು ಹಸನಾಗುತ್ತದೆ. ಇದನ್ನೆಲ್ಲಾ ಮನಗಂಡು ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲೆಯ ಮತದಾರರು ಸೂಳೆಕೆರೆ ಸಂರಕ್ಷಿಸುವ ಅಭ್ಯರ್ಥಿ, ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಜಿಲ್ಲೆಯ ಸಮಸ್ತ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಅದರಲ್ಲೂ ಸೂಳೆಕೆರೆಯನ್ನು ಸಂರಕ್ಷಣೆ ಮಾಡುವ, ಅಭಿವೃದ್ಧಿಪಡಿಸುವ ಅಭ್ಯರ್ಥಿ ಅಥವಾ ಪಕ್ಷಕ್ಕೆ ಮತ ನೀಡಬೇಕು. ಖಡ್ಗ ಸಂಘ ಹಾಗೂ ಸೂಳೆಕೆರೆ ಸಂರಕ್ಷಣಾ ಸಮಿತಿ ನಿರಂತರವಾಗಿ ಸೂಳೆಕೆರೆ ಒತ್ತುವರಿ ತೆರವು ಹಾಗೂ ಸೂಳೆಕೆರೆ ಹೂಳೆತ್ತುವ ಮೂಲಕ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಟಿಸುವಂತೆ ಹೋರಾಟ ನಡೆಸಿಕೊಂಡೇ ಬಂದಿವೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸೂಳೆಕೆರೆ ವಿಚಾರವಾಗಿ ಆಗಬೇಕಾಗಿದ್ದ ಮಹತ್ವದ ಕಾರ್ಯವು 7 ವರ್ಷಗಳಾದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ಈ ವಿಚಾರ ಈಗ ನ್ಯಾಯಾಲಯ ಅಂಗಳದಲ್ಲಿದೆ. ಈ ಬಗ್ಗೆ ರಾಜಕೀಯವಾಗಿ ಸರ್ಕಾರದ ಗಮನ ಸೆಳೆಯುವುದೂ ಅನಿವಾರ್ಯ. ಈ ಹಿನ್ನೆಲೆ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅಥವಾ ಇತರೇ ಯಾವುದೇ ಪಕ್ಷ, ಪಕ್ಷೇತರ ಅಭ್ಯರ್ಥಿಗಳು ಯಾರೇ ಸೂಳೆಕೆರೆ ಒತ್ತುವರಿ ತೆರವು, ಹೂಳು ತೆಗೆಯುವ ಕೆಲಸದ ಬಗ್ಗೆ ಭರವಸೆ ನೀಡಿದ್ದರೆ ಅಂತಹ ಅಭ್ಯರ್ಥಿ, ಪಕ್ಷಕ್ಕೆ ಬೆಂಬಲಿಸುವಂತೆ ಹೇಳಿದರು.

ನಮ್ಮ ಜಿಲ್ಲೆಯ ಹೆಮ್ಮೆಯಾದ ಸೂಳೆಕೆರೆಯನ್ನು ಸಂರಕ್ಷಣೆ ಮಾಡುವ, ಹೂಳೆತ್ತಿಸುವ ಬಗ್ಗೆ ಬಹಿರಂಗವಾಗಿ ಭರವಸೆ ನೀಡುವ ಪಕ್ಷ ಅಥವಾ ಅಭ್ಯರ್ಥಿಗೆ ದಾವಣಗೆರೆ ಜಿಲ್ಲಾದ್ಯಂತ ಮತದಾರರು ಮತ ನೀಡಬೇಕು. ಈ ವಿಚಾರವನ್ನು ಸೂಳೆಕೆರೆಯ ಅವಲಂಬಿತ ಎಲ್ಲ ರೈತರು, ನಗರ, ಪಟ್ಟಣ, ಗ್ರಾಮೀಣ ವಾಸಿಗಳು, ಮತದಾರರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ನಮ್ಮ ನಿರ್ಧಾರ ಯಾವುದೇ ರಾಜಕೀಯ ಪ್ರರಿತವಾಗಲೀ, ವ್ಯಕ್ತಿಗಳ ಪ್ರೇರಿತವಾಗಲಿ ಅಲ್ಲ. ಸೂಳೆಕೆರೆ ಸಂರಕ್ಷಣೆ ಹಾಗೂ ರೈತರ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರವಾಗಿದೆ ಎಂದು ಪಾಂಡೋಮಟ್ಟಿ ಶ್ರೀ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಖಡ್ಗ ಸಂಘದ ಅಧ್ಯಕ್ಷ ಬಿ.ಆರ್. ರಘು, ಚಂದ್ರಹಾಸ ಲಿಂಗದಹಳ್ಳಿ, ಕುಬೇಂದ್ರ ಸ್ವಾಮಿ ಇತರರು ಇದ್ದರು.

- - - -29ಕೆಡಿವಿಜಿ5: ದಾವಣಗೆರೆಯಲ್ಲಿ ಸೋಮವಾರ ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.