ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬರಗಾರದಲ್ಲಿ ಜನರ ಬದುಕು ನಿರ್ವಹಣೆಗೆ ಸಹಕಾರಿಯಾಗಿವೆ. ಜನಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯ ಜನತೆ ಲೋಕಸಭೆಯಲ್ಲಿ ಮತ ನೀಡಿ ಕೈಬಲಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.ತಾಲೂಕಿನ ಜಯಂತಿನಗರ ಎಸ್‌ಎಲ್‌ವಿ ಕಲ್ಯಾಣ ಮಂಟಪದ ಬಳಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ನಡದ ರೈತಸಂಘ-ಕಾಂಗ್ರೆಸ್ ಜಂಟಿ ಕಾರ್‍ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿಪಡಿಸಿದೆ. ಸಿಎಂ ಸಿದ್ದರಾಮಯ್ಯ ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಕೊಟ್ಟ ಮಾತಿನಂತೆ ಮೈ ಷುಗರ್ ಹೊಸ ಕಾರ್ಖಾನೆ ಹಾಗೂ ಕೃಷಿ ವಿಶ್ವವಿದ್ಯಾನಿಲಯ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.ಬಿಜೆಪಿ, ಜೆಡಿಎಸ್‌ನವರು ರಾಜ್ಯಕ್ಕೆ ಬರಗಾಲದಲ್ಲಿ ಕೇಂದ್ರ ಸರಕಾರ ನೀಡುವ ಎನ್‌ಡಿಆರ್‌ಎಫ್ ಹಣ ಕೊಡಿಸುವ ಕುರಿತು ಕೇಂದ್ರದೊಂದಿಗೆ ಒಮ್ಮೆಯೂ ಚರ್ಚಿಸಿಲ್ಲ. ಕೇಂದ್ರ ಸರಕಾರ ಸಹ ರಾಜ್ಯಕ್ಕೆ ಬರಬೇಕಾದ ಎನ್‌ಡಿಆರ್‌ಎಫ್ ಹಣ ನೀಡದೇ ಮಲತಾಯಿ ಧೋರಣೆಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ದೊಡ್ಡ ಉದ್ಯಮಿ. ಜನಸೇವೆ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದಾರೆ ಹೊರತು, ಹಣ ಮಾಡಬೇಕು ಎಂಬ ಆಸೆಯಿಂದ ಬಂದಿಲ್ಲ. ಜಿಲ್ಲೆಯ ಜನತೆ ನಮ್ಮ ಅಭ್ಯರ್ಥಿಗೆ ಮತಕೊಟ್ಟು ಗೆಲ್ಲಿಸಿ ನಮಗೆ ಐದು ವರ್ಷ ಅವಕಾಶ ಕೊಡಿ ಎಂದು ಮನವಿ ಮಾಡಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಿದೆ. ರೈತಸಂಘ-ಕಾಂಗ್ರೆಸ್ ಪಕ್ಷದ ಕಾರ್‍ಯಕರ್ತರು ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಬೂತ್‌ಮಟ್ಟದಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತ ಹಾಕಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಜಿಲ್ಲೆಯ ಮತದಾರನ್ನು ಭಾವನಾತ್ಮಕವಾಗಿ ಮರಳು ಮಾಡಲು ಮುಂದಾಗುತ್ತಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತಕೊಟ್ಟು ಗೆಲ್ಲಿಸಿ ಎಂದರು.ಸಭೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಮು, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಮುಖಂಡ ಬಿ.ರೇವಣ್ಣ, ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಸಿ.ಕೆ.ನಾಗರಾಜು, ರೈತನಾಯಕಿ ಸುನಿತ ಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಪಿ.ನಾಗರಾಜು, ಎಸ್.ದಯಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಡಿ.ಹುಚ್ಚೇಗೌಡ, ಸಿ.ಆರ್.ರಮೇಶ್, ಯುವ ಮುಖಂಡ ಎಸ್‌ಎಸ್‌ಎಸ್ ಸತೀಶ್ ಶಿಂಢಬೋಗನಹಳ್ಳಿ, ಉಮಾಶಂಕರ್, ಜಯಲಕ್ಷ್ಮೀ ಸೇರಿ ಹಲವರು ಭಾಗವಹಿಸಿದ್ದರು.