ಪಾರದರ್ಶಕ ಚುನಾವಣೆಗೆ ಮತದಾನ ಮಾಡಿ: ಜಿಲ್ಲಾಧಿಕಾರಿ ಸುಶೀಲಾ

| Published : Apr 23 2024, 12:50 AM IST

ಪಾರದರ್ಶಕ ಚುನಾವಣೆಗೆ ಮತದಾನ ಮಾಡಿ: ಜಿಲ್ಲಾಧಿಕಾರಿ ಸುಶೀಲಾ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಿಯಾದರೂ ಮತದಾರರನ್ನು ಸೆಳೆಯುವ, ಆಮಿಷ ಒಡ್ಡುವ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನಿಡಬೇಕು

ಕನ್ನಡಪ್ರಭ ವಾರ್ತೆ ಸುರಪುರ

ಮತದಾರರಲ್ಲಿ ಮತದಾನ ಅರಿವನ್ನು ಮೂಡಿಸಬೇಕಿದೆ. ಜಾಗೃತ ಮತದಾರನಾಗಿ ಮತದಾನ ಚಲಾಯಿಸಿ ಪಾರದರ್ಶಕ ಚುನಾವಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುಶೀಲಾ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಸೋಮವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ, ತಾಲೂಕು ಸ್ವೀಪ್ ಸಮಿತಿ, ನಗರಸಭೆ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

1950ಗೆ ಕಾಲ್ ಮಾಡಿ ಮತದಾರ ಗುರುತಿನ ಚೀಟಿ, ಹೆಸರಿನ ಕುರಿತು ಪರಿಶೀಲಿಸಬಹುದು. ಚುನಾವಣೆ ಘೋಷಿಸಿದ ದಿನದಿಂದಲೇ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಎಲ್ಲಿಯಾದರೂ ಮತದಾರರನ್ನು ಸೆಳೆಯುವ, ಆಮಿಷ ಒಡ್ಡುವ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನಿಡಬೇಕು ಎಂದರು.

ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹಬ್ಬಗಳಿದ್ದಂತೆ. ಎಲ್ಲ ಮತದಾರರು ಖುಷಿಯಿಂದ ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.70 ಮತ ದಾಖಲಾಗಿದೆ. ಇದು ಪ್ರಜಾಪ್ರಭುತ್ವದ ಸೋಲು ಎಂಬುದಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ಗೆಲ್ಲಿಸಲು ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಂಡು ಶೇ.100ರಷ್ಟು ಸಾಧನೆ ಮಾಡಬೇಕು ಎಂದು ಹೇಳಿದರು.

ಸಂವಿಧಾನವು ಪ್ರತಿಯೊಬ್ಬರಿಗೂ ಮತದಾನ ನೀಡುವ ಹಕ್ಕನ್ನು ನೀಡಿದೆ. ಈ ಮೂಲಕ ನಮಗೆ ಬೇಕಾದ ಅಭ್ಯರ್ಥಿಯನ್ನು ನಾವೇ ಆಯ್ಕೆ ಮಾಡಿಕೊಳ್ಳಬಹುದು. ಹೀಗಾಗಿ, ಸೂಕ್ತ ವ್ಯಕ್ತಿಗೆ ಮತ ಹಾಕಬೇಕು. ಅಭ್ಯರ್ಥಿಗಳಲ್ಲಿ ಯಾರು ಒಪ್ಪಿಗೆ ಆಗದಿದ್ದರೆ ನೋಟಾಗೆ ಮತ ಹಾಕಬಹುದು. ಪ್ರತಿಯೊಬ್ಬರು ಮತ ಹಾಕುತ್ತೇವೆ ಎಂಬುದಾಗಿ ಪ್ರತಿಜ್ಞೆ ಕೈಗೊಂಡು ಮತ ಚಲಾಯಿಸಬೇಕು ಎಂದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಬಸವರಾಜ ಸಜ್ಜನ್ ಮಾತನಾಡಿ, ಚುನಾವಣೆಯಲ್ಲಿ ಪ್ರತಿಯೊಬ್ಬರ ಮತವೂ ಅಮೂಲ್ಯ. ಎಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಕುಟುಂಬಸ್ಥರು, ಗೆಳೆಯರು, ಸಂಬಂಧಿಕರು, ನೆರೆ-ಹೊರೆಯವರಿಗೂ ತಿಳಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂಬುದಾಗಿ ಮತದಾನದ ಮಹತ್ವ ಸಾರಿದರು.

ಜಿಲ್ಲಾ ಚುನಾವಣಾ ರಾಯಭಾರಿ, ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಮತದಾನ ಪ್ರತಿ ಐದು ವರ್ಷಕ್ಕೊಮ್ಮೆ ದೊರೆಯುವ ಸುವರ್ಣ ಅವಕಾಶವಾಗಿದೆ. ಲೋಕಸಭಾ ಚುನಾವಣೆ ಮೇ 7ರಂದು ನಡೆಯಲಿದ್ದು, ತಪ್ಪದೇ ತಮ್ಮ ಮತ ಹಾಕಬೇಕು. ಮತದಾನದ ಮಹತ್ವವನ್ನು ಸ್ವೀಪ್ ಸಮಿತಿಯಡಿ ಹಲವಾರು ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಮತದಾರರಿಗೆ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಯೋಗ್ಯ ಅಭ್ಯರ್ಥಿ ಆಯ್ಕೆಗೆ ಮತ ಹಾಕಬೇಕು ಎಂಬುದಾಗಿ ಹಾಸ್ಯಮಿಶ್ರಿತ ಭಾಷಣದ ಮೂಲಕ ಮತದಾನದ ಮಹತ್ವ ಸಾರಿದರು.

ಕಾರ್ಯಕ್ರಮಕ್ಕೂ ಮುನ್ನ ರಂಗೋಲಿ ಸ್ಪರ್ಧೆ, ಗೋಣಿಚೀಲ ಹಾಗೂ ಚಮಚದಲ್ಲಿ ನಿಂಬು ಇಟ್ಟು ಕೊಂಡು ನಡೆಯುವ ಸ್ಪರ್ಧೆ ಜರುಗಿತು. ವಿವಿಧ ಸ್ಪರ್ಧಾ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.

ಬಿಇಒ ಯಲ್ಲಪ್ಪ ಕಾಡ್ಲೂರು, ಪೌರಾಯುಕ್ತ ಮಂಜುನಾಥ ಶಿಡ್ಲಘಟ್ಟ, ನಗರಸಭೆ ಅಧಿಕಾರಿ ಶಾಂತಪ್ಪ, ನಗರಸಭೆ ಯಲ್ಲಪ್ಪ ನಾಯಕ ಡೊಣ್ಣಿಗೇರಿ ಸೇರಿದಂತೆ ಇತರರಿದ್ದರು.