ಸಾರಾಂಶ
- ಕತ್ತಿಗೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಸಂಸದೆ ಚಾಲನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿ, ಕೆಲಸ ಮಾಡುವ ಶಾಸಕ ಮತ್ತು ಸಂಸದರಿಗೆ ಮಾತ್ರವೇ ಗೆಲ್ಲಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಎಸ್.ಡಿ.ಪಿ.ಯೋಜನೆಯಡಿ ₹3 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ಅವರು ಮಾತನಾಡಿದರು.
ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಬಿಜೆಪಿಯ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಆದರೆ, ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಾಗಿಲ್ಲ ಎಂದು ಗ್ರಾಮಸ್ಥರೇ ಹಲವಾರು ಬೇಡಿಕೆಗಳನ್ನು ಮುಂದಿಡುತ್ತಿದ್ದೀರಿ. ಇನ್ನು ಮುಂದಾದರೂ ಕೆಲಸ ಮಾಡುವ ಶಾಸಕರಿಗೆ ಮತ್ತು ಸಂಸದರಿಗೆ ತಮ್ಮ ಮತ ನೀಡಬೇಕು. ಆ ಮೂಲಕ ಅಭಿವೃದ್ಧಿ ಕಾರ್ಯಗಳಾಗುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ಮನವಿ ಮಾಡಿದರು.ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ, ಸಂಸದೆ ಹಾಗೂ ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಸಚಿವರ ತ್ರಿಬಲ್ ಎಂಜಿನ್ ಸರ್ಕಾರವಿದೆ. ಆದ್ಯತೆ ಮೇರೆಗೆ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶವಿದೆ ಎಂದು ತಿಳಿಸಿದ್ದೀರಿ. ಈ ನೀರನ್ನು ಲ್ಯಾಬ್‍ನಲ್ಲಿ ತಪಾಸಣೆ ಮಾಡಿ, ಫ್ಲೋರೈಡ್ ಅಂಶ ಪತ್ತೆಯಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಮರಿಯಮ್ಮನಹಳ್ಳಿಯಿಂದ ಹೊನ್ನಾಳಿ ಮಾರ್ಗವಾಗಿ ಶಿವಮೊಗ್ಗ ರಸ್ತೆವರೆಗೆ ರಸ್ತೆ ಅಗಲೀಕರಣ ವಿಚಾರವಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯ ಅಗಲೀಕರಣವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದರು.ಗ್ರಾಮಸ್ಥರ ಸಹಕಾರ ಮುಖ್ಯ:
ಶಾಲಾ ಕಟ್ಟಡಗಳಿಗೆ ಮೊದಲ ಆದ್ಯತೆ ನೀಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಶಾಸಕರ ಅನುದಾನದಲ್ಲಿ 1 ಕೊಠಡಿ, ಸಂಸದರ ಅನುದಾನದಲ್ಲಿ 1 ಕೊಠಡಿ ಮತ್ತು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಪ್ರಾರಂಭಿಸಿ 1 ಕೊಠಡಿಗೆ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸಲಹೆ ನೀಡಿದರು.ಗ್ರಾಪಂ ಅಧ್ಯಕ್ಷೆ ಓಬಮ್ಮ, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ರಮೇಶ್, ಕುಬೇರಪ್ಪ, ಡಿಎಚ್‌ಒ ಷಣ್ಮುಖಪ್ಪ, ಡಿಎಚ್.ಇ.ಒ. ಸುರೇಶ್ ಬಾರ್ಕಿ, ಕತ್ತಿಗೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ್, ಟಿಎಚ್‍ಒ ಡಾ. ಎನ್.ಎಚ್. ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಪದ್ಮ, ಪಿಡಿಒ ಮಂಗಳೇಶ್ ನಾಯ್ಕ್, ಎಸ್.ಎಂ.ಡಿ. ಎಂಜಿನಿಯರ್ರ್ಸ್ ಮತ್ತು ಕಂಟ್ರಾಕ್ಟರ್ ಕಂಪೆನಿಯ ಸಂತೋಷ್, ಪುಟ್ಟಸ್ವಾಮಿ, ಎಂಜಿನಿಯರ್ ಮಂಜುನಾಥ್, ಮುಖಂಡರಾದ ಅರಕೆರೆ ಮಧುಗೌಡ, ಪರಮೇಶ್ವರಪ್ಪ, ಪಾಲಾಕ್ಷಪ್ಪ, ಮತ್ತಿತರರು ಉಪಸ್ಥಿತರಿದ್ದರು.
- - -ಬಾಕ್ಸ್ * ಆಸ್ಪತ್ರೆ ಕಾಮಗಾರಿ 8 ತಿಂಗಳಲ್ಲಿ ಅಂತ್ಯ: ಶಾಸಕ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹3 ಕೋಟಿ ಅನುದಾನ ಬಿಡುಗಡೆಯಾಗಿದೆ. 6 ಹಾಸಿಗೆಗಳ ಆಸ್ಪತ್ರೆ ಕಾಮಗಾರಿಯು 8 ತಿಂಗಳಲ್ಲಿ ಮುಗಿಯಲಿದೆ. ಕತ್ತಿಗೆ ಗ್ರಾಮದ ಚನ್ನಪ್ಪಸ್ವಾಮಿ ಬಡಾವಣೆಗೆ ₹25 ಲಕ್ಷ ಬಿಡುಗಡೆಯಾಗಿದೆ. ಈ ವಾರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನೂ ಗ್ರಾಮಕ್ಕೆ ಮಂಜೂರು ಮಾಡಲಾಗುವುದು ಎಂದರು. ಶಾಸಕನಾಗಿ 15 ತಿಂಗಳಾಗಿದ್ದು, ಅಂದಿನಿಂದ ಇಲ್ಲಿಯವರೆಗೆ 113 ಹೊಸ ಶಾಲಾ ಕೊಠಡಿಗಳಿಗೆ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪ್ರಕೃತಿ ವಿಕೋಪದಡಿ 30 ಶಾಲೆಗಳ ರಿಪೇರಿಗೆ ₹60 ಲಕ್ಷ ಮತ್ತು ಶಾಸಕರ ಅನುದಾನದಡಿ ₹60 ಲಕ್ಷಗಳ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಕತ್ತಿಗೆ ಗ್ರಾಮದ ಪ್ರೌಢಶಾಲಾ ಕ್ರೀಡಾಂಗಣದ ಕಾಮಗಾರಿಯು ಉದ್ಯೋಗ ಖಾತ್ರಿ ಯೋಜನೆಯಡಿ ₹10 ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ ಎಂದು ವಿವರಿಸಿದರು.
- - - -26ಎಚ್.ಎಲ್.ಐ2:ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಸಂಸದೆ ಡಾ.ಪ್ರಭಾ ಚಾಲನೆ ನೀಡಿ ಮಾತನಾಡಿದರು.