ಮಸ್ಕಿಯಲ್ಲಿ ಬಿಜೆಪಿ, ಕಾಂಗ್ರೆಸ್‌ನಿಂದ ಮತ ಬೇಟೆ

| Published : May 01 2024, 01:15 AM IST

ಸಾರಾಂಶ

ರಣಬಿಸಿಲನ್ನು ಲೆಕ್ಕಿಸದೆ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಮನೆ ಮನೆಗೆ ಬೇಟಿ, ಮತಯಾಚನೆ. ಜಿಲ್ಲೆಯಲ್ಲಿ ಅತಿಹೆಚ್ಚು ಬಿಸಿಲಿನ ತಾಪ ಹೆಚ್ಚಾಗಿ ಜನರು ಮನೆಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ರಾಜಕಾರಣಿಗಳು ಮಾತ್ರ ಉರಿಬಿಸಿಲನ್ನು ಲೆಕ್ಕಿಸದೇ ಮಸ್ಕಿ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಚಾರಕಾರ್ಯ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಸ್ಕಿ

ಬೇಸಿಗೆಯ ಬಿಸಿಲಿನ ತಾಪ ಪ್ರತಿನಿತ್ಯ ಹೆಚ್ಚಾಗುತ್ತಲೇ ಇದ್ದು ಇದರ ಜೊತೆಗೆ ಲೋಕಸಭೆ ಚುನಾವಣಾ ಪ್ರಚಾರದ ಕಾವು ಕೂಡ ಹೆಚ್ಚುತ್ತಿದೆ. ಮತದಾರನ ಮನ ಗೆಲ್ಲಲು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ವಿವಿಧ ರೀತಿಯ ಅಸ್ತ್ರಗಳನ್ನು ಪ್ರಯೋಗಿಸಿ ಕೊಪ್ಪಳ ಕ್ಷೇತ್ರವನ್ನು ತೆಕ್ಕೆಗೆ ಪಡೆಯಲು ಎರಡು ರಾಜಕೀಯ ಪಕ್ಷಗಳು ಶತಾಯಗತಾಯ ಪ್ರಯತ್ನ ನಡೆಸಿವೆ.

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಇನ್ನೇನು ಒಂದು ವಾರ ಮಾತ್ರ ಬಾಕಿ ಇದ್ದು ಇದೀಗ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ. ಬಿಜೆಪಿಯಿಂದ ಬಸವರಾಜ್ ಕ್ಯಾವಟರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ರಾಜಶೇಖರ್ ಹಿಟ್ನಾಳ ಸ್ಪರ್ಧಿಸಿದ್ದಾರೆ.

ಜಿಲ್ಲೆಯಲ್ಲಿ ಅತಿಹೆಚ್ಚು ಬಿಸಿಲಿನ ತಾಪ ಹೆಚ್ಚಾಗಿ ಜನರು ಮನೆಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ರಾಜಕಾರಣಿಗಳು ಮಾತ್ರ ಉರಿಬಿಸಿಲನ್ನು ಲೆಕ್ಕಿಸದೇ ಮಸ್ಕಿ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಚಾರಕಾರ್ಯ ಕೈಗೊಂಡಿದ್ದಾರೆ. ಆದರೆ ಬಿಸಿಗೆ ಹೆದರಿ ಜನರು ರಾಜಕೀಯ ಸಭೆ ಸಮಾರಂಭಗಳು ಯಾಕಾದ್ರೂ ಆಯೋಜನೆ ಮಾಡುತ್ತಾರೋ ಎಂದು ಕೆಲವು ಜನರಿಗೆ ಇದು ನುಂಗಲಾರದ ತುತ್ತಾಗಿ ಪರಿಣಿಸುತ್ತಿದೆ.

ಕಾಂಗ್ರೆಸ್‌ನಿಂದ ಗ್ಯಾರಂಟಿ ಪ್ರಯೋಗ:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಮತದಾರ ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಮತದಾರರ ಮನ ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಸಾಧಿಸಿತ್ತು. ಅದರಂತೆ ಲೋಕಸಭೆ ಚುನಾವಣೆಯಲ್ಲಿಯೂ ಸಹ ಕೈ ಪಡೆ ಮನೆ ಮನೆಗೆ ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ ಮತ್ತೆ ಕರ್ನಾಟಕದ ಮಾದರಿ ಗ್ಯಾರಂಟಿಗಳನ್ನು ಕೊಡಲಾಗುವುದು ಎಂದು ಮನೆ-ಮನೆಗೆ ಕಾರ್ಡ್‌ಗಳನ್ನು ವಿತರಿಸಿ ಮತದಾರರ ಮನ ಗೆಲ್ಲಲು ಮುಂದಾಗಿದೆ.

ಬಿಜೆಪಿಯಿಂದ ಮೋದಿ ಅಸ್ತ್ರ: ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೇ ಸ್ವಚ್ಛ ಆಡಳಿತ ನಡೆಸಿರುವ ಪ್ರಧಾನಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವುದಕ್ಕಾಗಿ ಹಾಗೂ ದೇಶದ ಭದ್ರತೆ ಸೇರಿದಂತೆ ವಿವಿಧ ಅಸ್ತ್ರಗಳನ್ನು ಮುಂದಿಟ್ಟುಕೊಂಡು ಇಲ್ಲಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮೋದಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಕೊಪ್ಪಳ ಲೋಕಸಭೆ ಕ್ಷೇತ್ರದ ಮತದಾರರು ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷದ ಕೈ ಹಿಡಿಯಲಿದ್ದಾರೆ ಕಾದು ನೋಡಬೆಕಾಗಿದೆ.