ಸಾರಾಂಶ
ಬರಗಾಲದಂತಹ ಸಂದರ್ಭದಲ್ಲೂ ಜನರಿಗೆ ಗ್ಯಾರಂಟಿ ಯೋಜನೆ ತಲುಪಿಸಿದ್ದರಿಂದ ಜನರ ಕೈಗಡ ಸಾಲ ಮಾಡದೇ ಹಬ್ಬದ ಸಾಮಗ್ರಿ ಖರೀದಿಸಲು ಅನುಕೂಲ
ಗದಗ: ಲೋಕಸಭಾ ಚುನಾವಣೆ ರಾಷ್ಟ್ರದ ಹಾಗೂ ನಿಮ್ಮ ದೃಷ್ಟಿಯಿಂದ ಸತ್ವಯುತವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಗೆಲ್ಲಿಸಿದ ರೀತಿಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಬೆಂಬಲಿಸಿ,ಗೆಲ್ಲಿಸಿಕೊಡಿ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮನವಿ ಮಾಡಿದರು.
ಗದಗ ನಗರದಲ್ಲಿನ ಅಶೋಕ್ ಜೈನ್ ಅವರ ಜಾಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರಾರ್ಥವಾಗಿ ನಡೆದ ರಾಜಸ್ಥಾನ ಹಾಗೂ ಜೈನ್ ಸಮಾಜದವರ ಸಭೆಯಲ್ಲಿ ಮಾತನಾಡಿದರು. ಸರ್ವಾಧಿಕಾರ ಬಂದರೆ ಯಾರಿಗೂ ಒಳ್ಳೆಯದಾಗಲ್ಲ. ಜಿಎಸ್‌ಟಿ ಅನುಷ್ಠಾನಗೊಂಡಾಗ ಆಗಿರುವ ತೊಂದರೆಗಳು ಅಷ್ಟಿಷ್ಟಲ್ಲ. ಸರ್ವಾಧಿಕಾರಿ ನಿರ್ಣಯ ಕೈಗೊಳ್ಳುವುದರಿಂದ ನಷ್ಟವೇ ಹೆಚ್ಚಾಗಿ ಸಂಭವಿಸುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದಡಿ ಕಾಂಗ್ರೆಸ್ ಕೈಗೊಳ್ಳುವ ನಿರ್ಣಯಗಳು ಬಡವರ ಬದುಕನ್ನು ಸುಧಾರಿಸುತ್ತದೆ ಎಂದು ಹೇಳಿದರು.ಗದಗಿನಲ್ಲಿ ವ್ಯಾಪಾರ ವೃದ್ಧಿಯಾಗಲು ಖಾಲಿಯಿರುವ 34 ವಕಾರಸಾಲು ಜಾಗದಲ್ಲಿ ಟೆಕ್ಸ್‌ಟೈಲ್ ಸೆಂಟರ್ ಬರಬೇಕು ಎಂದು ಆರ್ಕಿಟೆಕ್ಚರ್‌ಗೆ ಮಾಹಿತಿ ನೀಡಿದ್ದೇವೆ. ಕಳೆದ ಕೆಲವು ತಿಂಗಳಿನಿಂದ ನಿಮ್ಮ ವ್ಯಾಪಾರ ವಹಿವಾಟು ವೃದ್ಧಿಸಿದೆ. ಬರಗಾಲದಂತಹ ಸಂದರ್ಭದಲ್ಲೂ ಜನರಿಗೆ ಗ್ಯಾರಂಟಿ ಯೋಜನೆ ತಲುಪಿಸಿದ್ದರಿಂದ ಜನರ ಕೈಗಡ ಸಾಲ ಮಾಡದೇ ಹಬ್ಬದ ಸಾಮಗ್ರಿ ಖರೀದಿಸಲು ಅನುಕೂಲವಾಗಿರುವುದು ನಿಮ್ಮೆಲ್ಲರ ಗಮನಕ್ಕಿದೆ ಎಂದರು.
ಮುಖಂಡ ಮಹೇಂದರ್ ಸಿಂಘ್ವಿ ಮುಂತಾದವರು ಮಾತನಾಡಿದರು. ಅಶೋಕ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರೂಪಚಂದ್ ಜೈನ್, ಅಮೃತಲಾಲ್ ಜೈನ್, ಮದನ್ ಬನ್ಸಾಲಿ, ಮನೋಜ ಭಾಪಣಾ, ದೀಪಾ ರಾಮಜಿ ಹಾಗೂ ನಿವಾಸಿಗಳು ಹಾಜರಿದ್ದರು.