ಚುನಾವಣೆಯಲ್ಲಿ ಮತದಾನ ಮಾಡಿ: ಚಂದ್ರಶೇಖರ್‌

| Published : Mar 21 2024, 01:45 AM IST

ಸಾರಾಂಶ

ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಏ.26ರಂದು ನಡೆಯಲಿದೆ. ಮತದಾರ ಬಂಧುಗಳು ಕಡ್ಡಾಯವಾಗಿ ಪವಿತ್ರವಾದ ಮತದಾನದಲ್ಲಿ ಪಾಲ್ಗೊಂಡು ಸಂವಿಧಾನ ದತ್ತವಾದ ಹಕ್ಕು ಚಲಾಯಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿ ಚಂದ್ರಶೇಖರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನೇಕಲ್

ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಏ.26ರಂದು ನಡೆಯಲಿದೆ. ಮತದಾರ ಬಂಧುಗಳು ಕಡ್ಡಾಯವಾಗಿ ಪವಿತ್ರವಾದ ಮತದಾನದಲ್ಲಿ ಪಾಲ್ಗೊಂಡು ಸಂವಿಧಾನ ದತ್ತವಾದ ಹಕ್ಕು ಚಲಾಯಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿ ಚಂದ್ರಶೇಖರ್ ತಿಳಿಸಿದರು.

ಅವರು ಆನೇಕಲ್‌ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ರಾಮನಗರ ಜಿಲ್ಲೆ, ಕುಣಿಗಲ್, ಆನೇಕಲ್ ತಾಲೂಕು ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಸಂಸತ್ ಚುನಾವಣೆ ವ್ಯಾಪ್ತಿಗೆ ಬರುತ್ತವೆ. ಮತದಾರರು ಸಾಮಾಜಿಕ ಜವಾಬ್ದಾರಿ ಅರಿತು ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸಬೇಕೆಂದು ಮನವಿ ಮಾಡಿದರು.

ಚುನಾವಣಾ ನಾಮಪತ್ರ ಸಲ್ಲಿಕೆಯ ದಿನಾಂಕದವರೆಗೆ 18 ವಯಸ್ಸು ತುಂಬುವ ಯುವಕ ಯುವತಿಯರಿಗೆ ಮತ ಪಟ್ಟಿಯಲ್ಲಿ ನೋಂದಾಯಿಸಲು ಅವಕಾಶವಿದೆ. ಹಾಗೆಯೇ ವಿಜಿಲ್ ಆಪ್ ಡೌನ್ಲೋಡ್ ಮಾಡಿಕೊಂಡು ನೀತಿ ಸಂಹಿತೆಗೆ ವಿರುದ್ಧವಾಗಿ ಯಾರಾದರೂ ನಡೆದುಕೊಳ್ಳುತ್ತಿದ್ದರೆ ಕೂಡಲೇ ದೂರು ನಿರ್ವಹಣಾ ಕೇಂದ್ರ ದೂರವಾಣಿ ಸಂಖ್ಯೆ, 080 27859234 ಸಂಖ್ಯೆಗೆ ಕರೆ ಮಾಡಿ ಕುಂದು ಕೊರತೆ ಬಗ್ಗೆ ತಿಳಿಸಬಹುದಾಗಿದೆ. ದೂರು ನೀಡಿದವರ ಮೊಬೈಲ್ ಹಾಗೂ ಮಾಹಿತಿ ಬಗ್ಗೆ ಗೋಪ್ಯತೆಯನ್ನೂ ಕಾಪಾಡಲಾಗುವುದು ಎಂದರು.

ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,11,409 ಮತದಾರರಿದ್ದು ಅದರಲ್ಲಿ 1,96,596 ಮಹಿಳೆಯರು, 2,14,728 ಪುರುಷರು, 85 ತೃತೀಯ ಲಿಂಗಿಗಳು ಇದ್ದಾರೆ. ಇದರಲ್ಲಿ 1878 ಅಂಗವಿಕಲರು ಇದ್ದು, 85 ವಯಸ್ಸು ದಾಟಿದ ಹಿರಿಯ ನಾಗರಿಕರು 3156 ಸಂಖ್ಯೆಯಲ್ಲಿದ್ದಾರೆ.

ಜಾತ್ರೆ, ಊರ ಹಬ್ಬಕ್ಕೆ ಅನುಮತಿ ಕಡ್ಡಾಯ

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಜಾತ್ರೆ, ಊರ ಹಬ್ಬ ಕಾರ್ಯಕ್ರಮಮುಂತಾದವುಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಗಿಯನ್ನು ಪಡೆಯಬೇಕು. ತಾಲೂಕಿನಲ್ಲಿ ಐದು ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು ಸೋಲೂರು, ಅತ್ತಿಬೆಲೆ, ಸಮಂದೂರು, ಸರ್ಜಾಪುರ, ಟಿವಿಎಸ್ ಸರ್ಕಲ್ ಬಳ್ಳೂರುಗಳಲ್ಲಿ 3 ಪಾಳಿಯಲ್ಲಿ ದಿಟ್ಟ ಕರ್ತವ್ಯ ನಿರ್ವಹಿಸುವ ಸ್ಕ್ವಾಡ್ ಗಳನ್ನು ರಚಿಸಲಾಗಿದೆ. ಅವಶ್ಯ ತರಬೇತಿ ನೀಡಲಾಗಿದೆ. ಮತದಾನ ಪಟ್ಟಿಗೆ ಸೇರ್ಪಡೆ ಹಾಗೂ ಮನೆಯಲ್ಲಿ ಮತದಾನ ಮಾಡುವ ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಅನುವು ಮಾಡಿದ್ದು ವಿಶೇಷ ಕರ್ತವ್ಯ ಪಾಲನೆಗೆ ಸೂಕ್ತ ಅಧಿಕಾರವನ್ನು ನೀಡಲಾಗಿದೆ ಎಂದರು.

ತಾಲೂಕು ದಂಡಾಧಿಕಾರಿ ಶಶಿಧರ ಮಾಡ್ಯಾಳ್ ಮಾತನಾಡಿ ಆನೇಕಲ್ ಸಮೀಪದ ಅಲಯನ್ಸ್ ಕಾಲೇಜು ಆವರಣದಲ್ಲಿ ಮಷ್ಟರಿಂಗ್, ಡೀಮಷ್ಟ ಮಸ್ತರಿಂಗ್ ಹಾಗೂ ಪಾರದರ್ಶಕ ಚುನಾವಣೆ ನಡೆಯಲು ಅಗತ್ಯ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಸರ್ಕಾರದ ತಂಡದಿಂದ ಚುನಾವಣೆ ಹಾಗೂ ಮತದಾನ ವಿಷಯದ ಬಗ್ಗೆ ಅರಿವು ಮೂಡಿಸಲು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿಗೆ ಮೊದಲ ಸಲ ಮತ ದಾನ ಮಾಡುವ 784 ಮಂದಿ ನೊಂದಾಯಿಸಿಕೊಂಡಿದ್ದಾರೆ ಎಂದರು ಸುದ್ದಿಗೋಷ್ಠಿಯಲ್ಲಿ ತಹಸಿಲ್ದಾರ್ ಶಶಿಧರ ಮಾಡ್ಯಾಳ್ ಹಾಗೂ ಶಿರಸ್ತೆದಾರ್ ಗಳಾದ ಚಂದ್ರಶೇಖರ್ ಚೇತನ್ ಇತರರು ಪಾಲ್ಗೊಡಿದ್ದರು.