ಸಾರಾಂಶ
ಮತದಾನದ ಸಂದರ್ಭದಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಮತದಾರರು ಬಲಿಯಾಗದೆ ಯೋಗ್ಯರಿಗೆ ಮತ ಚಲಾಯಿಸಿ, ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಯುತ್ತದೆ, ಮತದಾನದಿಂದ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಾಳಪ್ಪ ಅಪ್ಪಣ್ಣ ಜರಗು ಅಭಿಪ್ರಾಯಪಟ್ಟರು. ನಗರದ ಮಹೇಶ್ವರಿ ಕಾಲೇಜಿನಲ್ಲಿ ಜಿಲ್ಲಾಡಳಿತ, ನಗರಸಭೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಹೇಶ್ವರಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಮತ್ತು ಮತದಾನ ಜಾಗೃತಿ ಸಮಾವೇಶ ಉಧ್ಘಾಟಿಸಿ ಮಾತನಾಡಿದರು.ರಕ್ತದಾನ ಮಾಡಿ ಜೀವ ಉಳಿಸಿ
ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಕೊಡುವುದಕ್ಕೆ ‘ರಕ್ತದಾನ’ ಎನ್ನುತ್ತಾರೆ. ಅದೇ ರೀತಿ ಜಾಗೃತ ಮತದಾರರಿಂದ ಸಧೃಡ ಪ್ರಜಾಪ್ರಭುತ್ವ ನಿರ್ಮಿಸಲು ಸಾಧ್ಯವಾಗುತ್ತದೆ.ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಅರುಣಾಕುಮಾರಿ ಮಾತನಾಡಿ, ಮತದಾನದ ಸಂದರ್ಭದಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಮತದಾರರು ಬಲಿಯಾಗದೆ ಯೋಗ್ಯರಿಗೆ ಮತ ಚಲಾಯಿಸಿ, ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕು. ಮತದಾನ ನಮ್ಮ ಹಕ್ಕಾಗಿದ್ದು, ಜೊತೆಗೆ ನಮ್ಮ ಭವಿಷ್ಯಕ್ಕಾಗಿ ಮತ್ತು ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ರಂಗವು ಸುಭದ್ರ ತಳಹದಿಯ ಮೇಲೆ ಸಾಗುವಂತೆ ನೋಡಿಕೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕ ಕರ್ತವ್ಯವಾಗಿದೆ ಎಂದರು.
ಅರ್ಹರು ತಪ್ಪದೆ ಮತದಾನ ಮಾಡಿತಹಸೀಲ್ದಾರ್ ಅನಿಲ್ ಮಾತನಾಡಿ, ಹದಿನೆಂಟು ವರ್ಷ ಮೇಲ್ಪಟ್ಟ ಜನರು ತಪ್ಪದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ಕೋರಿದರು.
ಈ ಸಂದರ್ಭದಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶೃತಿ, ನಗರಸಭೆ ಪೌರಾಯುಕ್ತ ಮಂಜುನಾಥ್, ಪರಿಸರ ಅಭಿಯಂತರ ಉಮಾಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ, ರೆಡ್ ಕ್ರಾಸ್ ಕಾರ್ಯದರ್ಶಿ ರವಿಕುಮಾರ್, ಕಾಲೇಜಿನ ಅಧ್ಯಕ್ಷ ಸಂದೀಪ್ ಚಕ್ರವರ್ತಿ, ಪ್ರಾಂಶುಪಾಲೆ ಸುಶ್ಮಿತ, ಪ್ಯಾನಲ್ ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯಗಾಂಧಿ ಇದ್ದರು.