ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ: ಬೀರಾದಾರ

| Published : Mar 29 2024, 12:45 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ನಿರ್ಭಯವಾಗಿ ತಮ್ಮ ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯ

ಕನ್ನಡಪ್ರಭ ವಾರ್ತೆ ಚಿಂಚೋಳಿ

ರಾಜ್ಯದ ಆಸ್ತಿತ್ವವನ್ನು ದೇಶದ ಭವಿಷ್ಯವನ್ನು ಜನಸಾಮಾನ್ಯರ ಬದುಕನ್ನು ಪ್ರಜಾತಂತ್ರದ ಉಳಿವನ್ನು ತೀರ್ಮಾನಿಸಲಿರುವ ಅತಿ ಮಹತ್ವದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ನಿರ್ಭಯವಾಗಿ ತಮ್ಮ ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಸಂಚಾಲಕ ಜಗದೀಶ ಬೀರಾದಾರ ಹೇಳಿದರು.

ಪಟ್ಟಣದ ಮಸೀದ ಹುದಾದಲ್ಲಿ ಏರ್ಪಡಿಸಿದ್ದ ನಾಡು ಉಳಿಸುವ ಮಹಾಕಾಯಕದಲ್ಲಿ ಕೈಗೂಡಿಸ ಬನ್ನಿ, ದೇಶವನ್ನು ಕಾಪಾಡಿಕೊಳ್ಳುವ ಬನ್ನಿ ಎಂಬ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಬಹುತ್ವದ ವಿಶೇಷತೆ ಒಟ್ಟಾಗಿ ಬಾಳಬೇಕಾಗಿದೆ. ಭೇದಭಾವ ಬೇಡ ಇದುವೇ ಸಂವಿಧಾನ ಆಶಯವಾಗಿದೆ. ಭವ್ಯ ಭಾರತ ಉಳಿಸಬೇಕಾದರೆ ಸಂವಿಧಾನ ಬೇಕು. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಸ್ವಾರ್ಥಿ ಮನೋಭಾವನೆ ಕಾಣುತ್ತೇವೆ. ದೆಹಲಿ ರೈತರ ಹೋರಾಟದಲ್ಲಿ ೭೭೦ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸುಕ್ಷಿತ ಸಮೃದ್ಧ ಭಾರತ ಮಾಡಬೇಕಾದರೆ ಒಳ್ಳೆಯ ವ್ಯಕ್ತಿಯನ್ನು ನಮ್ಮ ಪ್ರತಿನಿಧಿಯನ್ನಾಗಿ ಮಾಡಿಕೊಳ್ಳುವ ಭಾವನೆ ನಮ್ಮದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಓಂಪ್ರಕಾಶ ರೊಟ್ಟೆ ನ್ಯಾಯವಾದಿ ಎಂ.ಎ. ಖದೀರ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಎ. ಜಾಫರ, ಮಹ್ಮದ ಹಾಫೀಜ ಅಹೆಮದ, ಈರಣ್ಣ ಸುಗಂಧಿ, ಗೋಪಾಲ ರಾಂಪೂರೆ, ನ್ಯಾಯವಾದಿ ವಸಂತ ರಾಠೋಡ ಇನ್ನಿತರಿದ್ದರು.