ಮತದಾನ ಎನ್ನುವುದು ಸಂವಿಧಾನಾತ್ಮಕವಾಗಿ ನೀಡಿದ ಹಕ್ಕನ್ನು ಬಳಸುವುದರ ಮೂಲಕ ಸಮಾಜಕ್ಕೆ ಉತ್ತಮ ನಾಯಕರನ್ನು ಆಯ್ಕೆ ಮಾಡುವಂತಹ ಸುವರ್ಣ ಅವಕಾಶವನ್ನು ಮತದಾರರು ಕಳೆದುಕೊಳ್ಳಬಾರದು.
ಗದಗ: ಸದೃಢ ಸಮಾಜ, ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮತದಾನದ ಪಾತ್ರ ಬಹುಮುಖ್ಯ. ಮತದಾನದ ಹಕ್ಕನ್ನು ಪಡೆದ ಪ್ರತಿಯೊಬ್ಬ ಅರ್ಹ ಮಾತದಾರರು ಚುನಾವಣೆಗಳಲ್ಲಿ ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಭಾನುವಾರ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮತದಾನ ಎನ್ನುವುದು ಸಂವಿಧಾನಾತ್ಮಕವಾಗಿ ನೀಡಿದ ಹಕ್ಕನ್ನು ಬಳಸುವುದರ ಮೂಲಕ ಸಮಾಜಕ್ಕೆ ಉತ್ತಮ ನಾಯಕರನ್ನು ಆಯ್ಕೆ ಮಾಡುವಂತಹ ಸುವರ್ಣ ಅವಕಾಶವನ್ನು ಮತದಾರರು ಕಳೆದುಕೊಳ್ಳಬಾರದು. ತಮ್ಮ ಅಮೂಲ್ಯವಾದ ಮತದಿಂದ ಸಮಾಜ, ರಾಷ್ಟ್ರಕ್ಕೆ ಉತ್ತಮವಾದವರನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ಅರ್ಹ ಮತದಾರರ ಆದ್ಯ ಕರ್ತವ್ಯವಾಗಿದೆ ಎಂದರು.
ಮತದಾನದ ಮಹತ್ವ ಹಾಗೂ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಉದ್ದೇಶದೊಂದಿಗೆ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಮತದಾರರ ದಿನವನ್ನು ಕಳೆದ ಹದಿನೈದು ವರ್ಷಗಳಿಂದ ಆಚರಿಸಲಾಗುತ್ತಿದೆ. ಸಂವಿಧಾನಾತ್ಮಕ ನೀಡಿದ ಮತದಾನದ ಹಕ್ಕನ್ನು ಚಲಾಯಿಸುವುದನ್ನು ಯಾರೂ ಮರೆಯಬಾರದು ಎನ್ನುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.ಮತದಾನದ ದಿನಗಳಂದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತಿರುವುದು ಕಳಕವಳಕಾರಿ ಸಂಗತಿ. 18 ವರ್ಷ ಮೇಲ್ಪಟ್ಟ ಯುವ ಮತದಾರರು ಉತ್ತಮ ನಾಯಕರನ್ನು ಆರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮತವನ್ನು ತಪ್ಪದೇ ಚಲಾಯಿಸುವುದರ ಮೂಲಕ ಸಶಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, ದೇಶದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಯಾವುದೇ ರಾಷ್ಟ್ರ ಮುಂದುವರಿಯಬೇಕಾದರೆ ಯುವಜನತೆಯ ಪಾತ್ರ ಬಹುಮುಖ್ಯವಾಗಿದೆ ಎಂದರು.ಈ ವೇಳೆ ಯುವ ಮತದಾರರಿಗೆ ಮತಾದಾನ ಗುರುತಿನ ಚೀಟಿ ವಿತರಣೆ, ಮತದಾರರ ನೋಂದಣಿ ಕಾರ್ಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಬಿಎಲ್ಒ, ಡಾಟಾ ಎಂಟ್ರಿ ಆಪರೇಟರ್, ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಮತದಾನದ ಮಹತ್ವ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೆಶಕ ಬಸನಗೌಡ ಕೊಟೂರ, ಡಿಎಸ್‌ಪಿ ಮುರ್ತುಜಾ ಖಾದ್ರಿ, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಕಂಬಾಳಿಮಠ, ತಹಸೀಲ್ದಾರ್ ಶ್ರಿನಿವಾಸಮೂರ್ತಿ ಕುಲಕರ್ಣಿ, ಆಹಾರ ಇಲಾಖೆ ಉಪನಿರ್ದೇಶಕ ರಮೇಶ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಡಾ. ನಂದಾ ಹಣಬರಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು. ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸ್ವಾಗತಿಸಿದರು.