ಧಾರವಾಡ ಜಿಲ್ಲೆಯಲ್ಲಿ ಮತದಾರರ ಮ್ಯಾಪಿಂಗ್ ಕಾರ್ಯವು ಶೇ. 89.94ರಷ್ಟಾಗಿದ್ದು ಪ್ರಗತಿಯಲ್ಲಿದೆ. ಮತಗಟ್ಟೆ ಮಟ್ಟದ ಏಜೆಂಟರು (ಬಿಎಲ್‌ಎ) ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಕ್ಷೇತ್ರಮಟ್ಟದಲ್ಲಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಹೇಳಿದರು.
ಧಾರವಾಡ:
ಜಿಲ್ಲೆಯಲ್ಲಿ ಜೂ. 30ರಿಂದ ಅ. 7ರ ವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಜರುಗಲಿದೆ. ಈ ಕಾರ್ಯ ಸುವ್ಯವಸ್ಥಿತವಾಗಿ ಜರುಗಿಸಲು ಜಿಲ್ಲಾಡಳಿತಕ್ಕೆ ಜಿಲ್ಲೆಯ ಸಾರ್ವಜನಿಕರು, ರಾಜಕೀಯ ಪಕ್ಷಗಳು ಸಹಕಾರ ನೀಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮತದಾರರ ಮ್ಯಾಪಿಂಗ್ ಕಾರ್ಯವು ಶೇ. 89.94ರಷ್ಟಾಗಿದ್ದು ಪ್ರಗತಿಯಲ್ಲಿದೆ. ಮತಗಟ್ಟೆ ಮಟ್ಟದ ಏಜೆಂಟರು (ಬಿಎಲ್‌ಎ) ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಕ್ಷೇತ್ರಮಟ್ಟದಲ್ಲಿ ಸಹಕಾರ ನೀಡಬೇಕು. ಆಯೋಗದ ವೇಳಾಪಟ್ಟಿಯಂತೆ ಎಸ್‌ಐಆರ್ ಅರ್ಹತಾ ಅವಧಿಯು ಅ. 10ರ ವರೆಗಿದ್ದು, ಪೂರ್ವ ಸಿದ್ಧತೆ, ತರಬೇತಿ ಮತ್ತು ಮುದ್ರಣವು ಜೂ. 20ರಿಂದ ಜೂ. 29ರ ವರೆಗೆ ನಡೆಯುವುದು. ಜೂ. 30ರಿಂದ ಜು. 29ರ ವರೆಗೆ ಬಿಎಲ್‌ಒನಿಂದ ಮನೆ-ಮನೆಗೆ ಭೇಟಿ ನೀಡುವರು. ಜು. 29ರಂದು ಮತಗಟ್ಟೆಗಳ ರ‍್ಯಾಶಲೈಜೆಶನ್‌ಗೊಳಿಸುವ ಕಾರ್ಯವಿದೆ. ಕರಡು ಮತದಾರರ ಪಟ್ಟಿಯನ್ನು ಆ. 5ರಂದು ಪ್ರಕಟಿಸಲಾಗುವುದು ಎಂದರು.
ಆ. 5ರಿಂದ ಸೆ. 4ರ ವರೆಗೆ ಮತದಾರರು ಅಗತ್ಯವಿದ್ದಲ್ಲಿ, ತಮ್ಮ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಕಾಲಾವಧಿವಿದೆ. ಸೆ. 5ರಿಂದ ಅ. 3ರ ವರೆಗೆ ನೋಟಿಸ್ ಹಂತ, ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿಗೊಳಿಸಲಾಗುವುದು. ಅ. 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.ರಾಜ್ಯದಲ್ಲಿ ಅರ್ಹತಾ 2002ರ ಜನವರಿ 1ನ್ನು ಆಧರಿಸಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗುತ್ತಿದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ, ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿದ ಬಗ್ಗೆ ಮತ್ತು ಅಂತಹ ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಜಾಗೃತಿ ವಹಿಸಲಾಗುವುದು ಎಂದರು. 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಗುರಿ
ಧಾರವಾಡ:ಜೂನ್ 28ರಿಂದ ಜು. 1ರ ವರಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಬೇಕು. ಹುಟ್ಟಿದ ಮಗುವಿಂದ ಹಿಡಿದು ಐದು ವರ್ಷದೊಳಗಿನ ಯಾವ ಮಗುವು ಪೋಲಿಯೋ ಹನಿಯಿಂದ ಹೊರಗುಳಿಯದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿಯ ಜಿಲ್ಲಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ 0-5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಸಲು ಸಿದ್ಧತೆ ಕೈಗೊಳ್ಳಬೇಕು. ಜೂ. 28ರಿಂದ ಜು. 1ರ ವರೆಗೆ ಜಿಲ್ಲೆಯ ವಿವಿಧ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಸಿಕಾ ಕಾರ್ಯ ನಡೆಯಲಿದೆ ಎಂದರು.ಜೂ. 28ರಂದು ಬೂತ್ ಮಟ್ಟದಲ್ಲಿ ಹಾಗೂ ಜೂ. 29 ಮತ್ತು 30ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಜೂ. 29ರಿಂದ ಜು. 1ರ ವರೆಗೆ ನಗರ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಆರೋಗ್ಯ ಕಾರ್ಯಕರ್ತರು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ. ಸಾರ್ವಜನಿಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು ಎಂದು ಕರೆ ನೀಡಿದರು.ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 2,07,837 ಇದ್ದು, 891 ಒಟ್ಟು ಲಸಿಕಾ ಕೇಂದ್ರ ಸ್ಥಾಪಿಸಲಾಗುತ್ತದೆ. 92 ಟ್ರಾಂಜಿಟ್ ತಂಡ, 57 ಮೊಬೈಲ್ ತಂಡ ಕಾರ್ಯನಿರ್ವಹಿಸಲಿವೆ. 3,829 ವ್ಯಾಕ್ಸಿನೇಟರ್ ಹಾಗೂ 241 ಮೇಲ್ವಿಚಾರಕರು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲೆಯ ಒಟ್ಟು 4,28,540 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ ಎಂದರು.ಇದೇ ವೇಳೆ ಜಿಲ್ಲೆಯಲ್ಲಿ ಮುಂಬರುವ ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಮಲೇರಿಯಾ, ಡೆಂಘೀ, ಚಿಕನ್‌ಗುನ್ಯಾ ಹಾಗೂ ಕೀಟಜನ್ಯ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಅವುಗಳ ನಿಯಂತ್ರಣ ಹಾಗೂ ಮುಂಜಾಗೃತಾ ಕ್ರಮಗಳ ಕುರಿತು ಜಿಲ್ಲಾಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿಯ ಸಭೆ ಜರುಗಿತು. ಡಿಎಚ್‌ಒ ಡಾ. ಎಸ್.ಎಂ. ಹೊನಕೇರಿ ಸ್ವಾಗತಿದರು. ಡಾ. ಸುಜಾತಾ ಹಸವೀಮಠ ವಂದಿಸಿದರು.