ಸಾರಾಂಶ
ಉಗಮ ಶ್ರೀನಿವಾಸ್ಕನ್ನಡಪ್ರಭ ವಾರ್ತೆ ತುಮಕೂರುಹೊರಗಿನವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂಬ ಮಾತನ್ನು ಸೋಮಣ್ಣ ಅವರು ಗೆಲ್ಲುವುದರ ಮೂಲಕ ಸುಳ್ಳಾಗಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಗೆದ್ದಿದ್ದು ಈ ಬಾರಿಯೂ ಸೋಮಣ್ಣ ಗೆಲುವಿನೊಂದಿಗೆ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಂಡಿದೆ.ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ದೇವೇಗೌಡರು ಅಭ್ಯರ್ಥಿಯಾಗಿದ್ದರೂ ಸಹ ಬಿಜೆಪಿಯ ಬಸವರಾಜು ಎದುರು ಪರಾಭವಗೊಂಡಿದ್ದರು. ಹೊರಗಿನವರು ಗೆಲ್ಲುವುದಿಲ್ಲ ಎಂಬ ಮಾತು ಸುಳ್ಳಾಗಿಸಿದ್ದಾರೆ.ಚುನಾವಣೆಗೆ 8 ತಿಂಗಳು ಇರುವಾಗಲೇ ಆಗ ಸಂಸದರಾಗಿದ್ದ ಜಿ.ಎಸ್. ಬಸವರಾಜು ಅವರು ಸೋಮಣ್ಣನವರನ್ನು ತುಮಕೂರಿಗೆ ಕರೆ ತರುವುದಾಗಿ ಹೇಳಿದ್ದರು. ಆಗಲೇ ತುಮಕೂರು ಕ್ಷೇತ್ರದಲ್ಲಿ 8 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹೀಗಾಗಿ ತುಮಕೂರಿಗೆ ಸ್ಪರ್ಧಿಸಲು ಬಂದಾಗ ಅವರಿಗೆ ದೊಡ್ಡ ಒತ್ತಡವೂ ಇತ್ತು. ಆದರೆ ಅದೆಲ್ಲವನ್ನು ನಿವಾರಿಸಿ ಜಯದ ನಗೆ ಬೀರಿದ್ದಾರೆ.ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು ಈ ಪೈಕಿ ಕಾಂಗ್ರೆಸ್ 4 ಹಾಗೂ ಜೆಡಿಎಸ್ ಮತ್ತು ಬಿಜೆಪಿ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ಕ್ಷೇತ್ರಗಳನ್ನು ಗೆದ್ದಿತ್ತು. ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡೂ ಪಕ್ಷಗಳು ತಲಾ 4 ಕ್ಷೇತ್ರಗಳಲ್ಲಿ ಸಮಬಲವನ್ನು ಸಾಧಿಸಿತ್ತು. ಆದರೆ ಈ ಚುನಾವಣೆಯಲ್ಲಿ ಎಲ್ಲಾ 8 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸುವುದರೊಂದಿಗೆ ಸತತ ಎರಡನೇ ಬಾರಿಗೆ ಬಿಜೆಪಿ ಜಯವನ್ನು ದಾಖಲಿಸಿದೆ.ಭಾರಿ ಅಂತರ: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1,75,594 ಮತಗಳ ಭಾರಿ ಅಂತರದಿಂದ ಜಯಗಳಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗಿನ ದಾಖಲೆ ಅಂತರ ಇದಾಗಿದೆ. ಒಮ್ಮೆ 75 ಸಾವಿರ ಮತಗಳ ಅಂತರದಿಂದ ಜಯ ಬಂದಿತ್ತು. ಆದರೆ ಈ ಬಾರಿ 1,75,594 ಮತಗಳ ಬೃಹತ್ ಅಂತರದಿಂದ ಜಯಗಳಿಸುವುದರೊಂದಿಗೆ ದಾಖಲೆಯನ್ನು ಸೋಮಣ್ಣ ಬರೆದಿದ್ದಾರೆ.ಚುನಾವಣೆಗೆ ಬಿಜೆಪಿ ಟಿಕೆಟ್ ಪಕ್ಕಾ ಆದ ಕೂಡಲೇ ಸೋಮಣ್ಣ ಅವರು ಇಡೀ ಜಿಲ್ಲೆಯನ್ನು 3 ಬಾರಿ ಸುತ್ತಿದರು. ಎರಡೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅಸಮಾಧಾನವಿದ್ದ ಕಡೆಯೆಲ್ಲಾ ಸಮಾಧಾನಗೊಳಿಸಿದರು. ಹೊಸ ಕಾರ್ಯಕರ್ತರ ಪಡೆಯನ್ನು ಕಟ್ಟಿ ಮುನ್ನುಗ್ಗಿದರು. ಅದರ ಫಲವೇ ಈಗ ಗೆಲುವು ಎಂಬ ವ್ಯಾಖ್ಯಾನ ಜಿಲ್ಲೆಯಲ್ಲಿ ಆರಂಭವಾಗಿದೆ.
ಸೋಮಣ್ಣ ಮೇಲೆ ಎರಡನೇ ಕಾಶಿ ಮಾಡುವ ಜವಾಬ್ದಾರಿ: ಸ್ಮಾರ್ಟ್ ಸಿಟಿಯೂ ಆಗಿರುವ ತುಮಕೂರನ್ನು ಎರಡನೇ ವಾರಣಾಸಿಯನ್ನಾಗಿ ಮಾಡುವ ಕನಸನ್ನು ಸೋಮಣ್ಣ ಚುನಾವಣೆಗೂ ಮುನ್ನವೇ ಕಂಡಿದ್ದರು. ಈಗ ಅವರ ಗೆಲುವಿನೊಂದಿಗೆ ಎರಡನೇ ಕಾಶಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿ ಸೋಮಣ್ಣ ಅವರ ಮೇಲಿದೆ.