ಸಾರಾಂಶ
ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆ1998ರ ಹೊತ್ತಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದವು. ಅದರಲ್ಲೂ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವಿನ ಶೀತಲ ಸಮರ ಬಹಿರಂಗವಾಗಿತ್ತು. ಇದು ಆ ವರ್ಷದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನೇರ ಪರಿಣಾಮ ಬೀರಿತ್ತು.
ಹೌದು, ಜನತಾದಳದಲ್ಲಿನ ಆಂತರಿಕ ಕಚ್ಚಾಟ ವಿಕೋಪಕ್ಕೆ ಹೋಗಿತ್ತು. ರಾಜ್ಯದಲ್ಲಿ ಹೆಗಡೆ ಮತ್ತು ದೇವೇಗೌಡರ ನಡುವಿನ ರಾಜಕೀಯ ಮೇಲಾಟಗಳ ಸಂದರ್ಭದಲ್ಲಿ ನಡೆದ ಲೋಕಸಭೆ ಚುನಾವಣೆ ಬಾಗಲಕೋಟೆಯಲ್ಲಿಯೂ ವಿಭಿನ್ನ ಫಲಿತಾಂಶ ನೀಡಲು ಕಾರಣವಾಯಿತು. ಹೆಗಡೆಯ ಕಟ್ಟಾ ಅನುಯಾಯಿಯಾಗಿದ್ದ ಹಾಗೂ ಅಂದಿನ ಜೆ.ಎಚ್.ಪಟೇಲ ಸರ್ಕಾರದಲ್ಲಿ ಸಚಿವರಾಗಿದ್ದ ಅಜಯಕುಮಾರ ಸರನಾಯಕ ಸುಲಭವಾಗಿ ಗೆದ್ದು ಬಂದಿದ್ದರು. ಸರನಾಯಕ ಹೆಗಡೆ ಕಟ್ಟಿದ್ದ ಲೋಕಶಕ್ತಿ ಪಕ್ಷದಿಂದ ಸ್ಪರ್ಧಿಸಿ ಗೆಲವು ಕಂಡಿದ್ದು ಸಹ ವಿಶೇಷ. ದೇವೇಗೌಡರು ರಾಮಕೃಷ್ಣ ಹೆಗಡೆಯವರನ್ನು ಜನತಾದಳದಿಂದ ಉಚ್ಚಾಟಿಸಿದರು. ಇದು ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆಗಳಿಗೆ ಕಾರಣವಾಯಿತು. ಇಂತಹ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಬಾಗಲಕೋಟೆಯ ಜನತೆ ಹೆಗಡೆಯವರ ಶಿಷ್ಯ ಅಜಯಕುಮಾರ ಸರನಾಯಕರನ್ನು ಆಯ್ಕೆ ಮಾಡುವ ಮೂಲಕ ಪ್ರೀತಿ ತೋರಿಸಿದ್ದರು.ಅಂದು ಕ್ರೀಡಾ ಸಚಿವರಾಗಿದ್ದ ಅಜಯಕುಮಾರ ಸರನಾಯಕ ದೇವೇಗೌಡರ ಸಂಪುಟಕ್ಕೆ ರಾಜೀನಾಮೆ ನೀಡಿ ಹೊರಬಂದರು. ಹೆಗಡೆಯವರ ಲೋಕಶಕ್ತಿ ಪಕ್ಷದಲ್ಲಿ ಗುರುತಿಸಿಕೊಂಡು ತೆಂಗಿನ ಗಿಡ ಗುರುತಿನಿಂದ ಚುನಾವಣೆ ಎದುರಿಸಿ ಗೆದ್ದರು. ಸಾಮಾನ್ಯವಾಗಿ ಶಾಸಕ, ಸಚಿವರಂತಹ ಹುದ್ದೆಗಳು ದೊರೆಯುವುದೆ ದುರ್ಲಬ. ಅಂತಹದರಲ್ಲಿ ಪಕ್ಷದಿಂದ ಹೆಗಡೆಯವರನ್ನು ಹೊರಹಾಕಿದ್ದಕ್ಕೆ ತಮ್ಮ ಸಚಿವ ಸ್ಥಾನ ತೊರೆದು ಹೊರ ನಡೆದಿದ್ದರು. ಅದು ಹೆಗಡೆ ಮೇಲೆ ಅವರಿಟ್ಟಿದ್ದ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿತ್ತು.
ಮೇಟಿ, ನ್ಯಾಮಗೌಡ ಸೋಲು:1996ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮೊದಲ ಬಾರಿಗೆ ಸೋಲಿಸಿ ಜನತಾದಳದಿಂದ ಆಯ್ಕೆಯಾಗಿದ್ದ ಎಚ್.ವೈ.ಮೇಟಿ 1998ರಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು. ದೇವೇಗೌಡ ಹಾಗೂ ಸಿದ್ದರಾಮಯ್ಯನವರ ಜೊತೆಗೆ ಗುರುತಿಸಿಕೊಂಡಿದ್ದ ಎಚ್.ವೈ.ಮೇಟಿ ಜನತಾದಳ ಇಬ್ಭಾಗವಾದಾಗ ದೇವೇಗೌಡರ ಪಕ್ಷದ ಚಿಹ್ನೆಯಾದ ಚಕ್ರದ ಗುರುತಿನಿಂದ ಸ್ಪರ್ಧಿಸಿ ಸಂಸದರಾಗಿದ್ದರು. ಆದರೆ, ಈ ಸಲ ಕೇವಲ 80,868 ಮತಗಳನ್ನು ಮಾತ್ರ ಪಡೆದರು. 1996ರಲ್ಲಿ ಎಚ್.ವೈ.ಮೇಟಿ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಮಾಜಿ ಸಂಸದ ಸಿದ್ದು ನ್ಯಾಮಗೌಡ 1998ರಲ್ಲಿ ನಡೆದ ಲೋಕಸಭೆ ಮತ್ತೊಮ್ಮೆ ಸೋಲಿನ ರುಚಿ ಕಾಣಬೇಕಾಯಿತು. ಅದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ, ನಾಯಕರಲ್ಲಿನ ಪರಸ್ಪರ ನಂಬಿಕೆಯ ದ್ರೋಹಗಳು ಪ್ರಮುಖ ಕಾರಣಗಳಾಗಿದ್ದವು.
ಸರನಾಯಕ ಗೆಲವು:ಬಾಗಲಕೋಟೆ ವಿಧಾನಸಭೆಯಿಂದ ಎರಡು ಬಾರಿ ಶಾಸಕ ಹಾಗೂ ಸಚಿವರಾಗಿದ್ದ ಅಜಯಕುಮಾರ ಸರನಾಯಕ ಬಗ್ಗೆ ಜಿಲ್ಲೆಯಲ್ಲಿ ಒಳ್ಳೆಯ ಅಭಿಪ್ರಾಯಗಳಿದ್ದವು. ವಿವಾದಗಳಿಂದ ದೂರವಿದ್ದ ಈ ವ್ಯಕ್ತಿಗೆ ಎಲ್ಲ ಸಮುದಾಯಗಳಿಂದ ಉತ್ತಮ ಬೆಂಬಲ ದೊರೆತಿತ್ತು. ಜಿಲ್ಲೆಯಲ್ಲಿ ರಾಮಕೃಷ್ಣ ಹೆಗಡೆಯವರನ್ನು ಬೆಂಬಲಿಸುವ ಬಹುದೊಡ್ಡ ಗುಂಪು ಆ ಚುನಾವಣೆ ಸವಾಲಾಗಿ ಸ್ವೀಕರಿಸಿ ಸರನಾಯಕರ ಗೆಲುವು ಸರಳಗೊಳಿಸಿದ್ದರು. ಹೀಗಾಗಿ ತ್ರೀಕೋನ ಸ್ಪರ್ಧೆಯಲ್ಲಿ ಸರನಾಯಕ ಲೋಕಶಕ್ತಿಯಿಂದ ಗೆಲವು ಕಂಡಿದ್ದರು.
ಅಂದು ನಡೆದ ಚುನಾವಣೆಯಲ್ಲಿ ಒಟ್ಟು 6 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 72,4951 (ಶೇ. 67.13)ರಷ್ಟು ಮತದಾನವಾಗಿತ್ತು. ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ಅಜಯಕುಮಾರ ಸರನಾಯಕ 352795 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ 2,69,163ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಜನತಾದಳದಿಂದ ಸ್ಪರ್ಧಿಸಿದ್ದ ಹುಲ್ಲಪ್ಪ ಮೇಟಿಯವರು ಕೇವಲ 80,868 ಮತಗಳನ್ನು ಪಡೆದು ಸೋಲು ಕಂಡಿದ್ದರು. ಗೆಲುವಿನ ಅಂತರ 83,632 ಇತ್ತು.--------------