ಸಾರಾಂಶ
ಒಡೆದಾಳುವ ದುಷ್ಟ ಶಕ್ತಿಗಳಿಗೆ ಶಿಗ್ಗಾಂವಿ-ಸವಣೂರು ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದು, ಎಲ್ಲರನ್ನೂ ಜೊತೆಗೂಡಿ ಕರೆದೊಯ್ಯುವ, ಜಾತ್ಯತೀತ ತತ್ವ, ಸಿದ್ಧಾಂತಗಳನ್ನು ಅನುಸರಿಸುವ ಕಾಂಗ್ರೆಸ್‌ಗೆ ಆಶೀರ್ವದಿಸಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರತಿಕ್ರಿಯಿಸಿದ್ದಾರೆ.
ಹಾನಗಲ್ಲ: ಒಡೆದಾಳುವ ದುಷ್ಟ ಶಕ್ತಿಗಳಿಗೆ ಶಿಗ್ಗಾಂವಿ-ಸವಣೂರು ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದು, ಎಲ್ಲರನ್ನೂ ಜೊತೆಗೂಡಿ ಕರೆದೊಯ್ಯುವ, ಜಾತ್ಯತೀತ ತತ್ವ, ಸಿದ್ಧಾಂತಗಳನ್ನು ಅನುಸರಿಸುವ ಕಾಂಗ್ರೆಸ್‌ಗೆ ಆಶೀರ್ವದಿಸಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಾವೇರಿ ಜಿಲ್ಲೆಯ ಶರಣರು, ಸೂಫಿ, ಸಂತರು ಎಲ್ಲರೂ ಜೊತೆಗೂಡಿ ನಡೆಯುವ, ಒಂದಾಗಿ ಬದುಕುವ ಸಂದೇಶ ಸಾರಿದ್ದಾರೆ. ಇಂಥ ಜಿಲ್ಲೆಯ ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ದ್ವೇಷದ ಮಾತುಗಳಿಗೆ ಕಿವಿಗೊಡದೇ, ಪ್ರೀತಿಯಿಂದ ಎಲ್ಲರೂ ಒಂದಾಗಿ ಬಾಳುವ ದೃಢಸಂಕಲ್ಪ ತೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿಗ್ಗಾಂವಿ-ಸವಣೂರು ಕ್ಷೇತ್ರದ ಕಾಂಗ್ರೆಸ್ ಗೆಲುವು ಇಡೀ ರಾಜ್ಯಕ್ಕೊಂದು ಸಂದೇಶ ನೀಡಿದೆ. ಕಾಂಗ್ರೆಸ್ ಪರವಾಗಿ ಮತದಾರರನ್ನು ಅಭಿನಂದಿಸುವೆ. ವಿಶೇಷವಾಗಿ ಜಿಲ್ಲೆ, ಇಡೀ ರಾಜ್ಯದಿಂದ ಆಗಮಿಸಿ ಪಕ್ಷದ ಗೆಲುವಿಗೆ ಶ್ರಮ ವಹಿಸಿದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆಗಳು. ಶಿಗ್ಗಾಂವಿ-ಸವಣೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕೆ ಜೊತೆಗೂಡಿ ಶ್ರಮ ವಹಿಸಲಾಗುವುದು ಎಂದು ಶ್ರೀನಿವಾಸ ಮಾನೆ ಹೇಳಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿ ಎಷ್ಟೇ ಅಪಪ್ರಚಾರ ನಡೆಸಿದರೂ ರಾಜ್ಯದ ಜನ ಕಿವಿಗೊಟ್ಟಿಲ್ಲ. ಈ ಹಿಂದೆಯೂ ಸಹ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮೇಲೆ ಸಹ ಸುಳ್ಳು ಆರೋಪ ಹೊರಿಸಿ, ರಾಜಕೀಯ ಲಾಭ ಮಾಡಿಕೊಳ್ಳುವ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಗಿದ್ದನ್ನು ಶ್ರೀನಿವಾಸ ಮಾನೆ ಸ್ಮರಿಸಿದ್ದಾರೆ.