ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಪ್ರಜಾಪ್ರಭುತ್ವದ ಬಲವರ್ಧನೆಗೆ ಮತದಾರರನ್ನು ಜಾಗೃತಗೊಳಿಸುವ ರಾಷ್ಟ್ರೀಯ ಮತದಾರರ ದಿನವನ್ನು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 14ನೇ ‘ರಾಷ್ಟ್ರೀಯ ಮತದಾರರ ದಿನ’ ಆಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಮತದಾನದ ಬಗ್ಗೆ ಯುವಜನರು, ನಾಗರಿಕರು ಸೇರಿದಂತೆ ಎಲ್ಲರಿಗೂ ಅರಿವು ಮೂಡಿಸುವ ಮಹತ್ವದ ಕಾರ್ಯಕ್ರಮ ಇದಾಗಿದ್ದು ಮತದಾನ ಮೂಲಕ ಉತ್ತಮ, ಪ್ರಾಮಾಣಿಕ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಸೌಲಭ್ಯಗಳು ಜನಸಾಮಾನ್ಯರನ್ನು ತಲುಪಲಿವೆ. ಮತದಾರರು ಯಾವುದೇ ಹಣ, ಅಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಬಲ ತುಂಬಬೇಕು ಎಂದರು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಬೋಧಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಮತದಾನ ಹಕ್ಕು ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. 18 ವರ್ಷ ತುಂಬಿದ ಯುವ ಮತದಾರರು ಈ ಬಾರಿ ಮೊದಲ ಮತ ಚಲಾಯಿಸಲಿದ್ದು, ಇದು ಅವರ ಜೀವನದ ಪ್ರಮುಖ ಕ್ಷಣವಾಗಲಿದೆ. ಮತದಾನದ ಮೂಲಕ ನವಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಬದ್ಧರಾಗಬೇಕು ಎಂದರು.ರಾಷ್ಟ್ರೀಯ ಮತದಾರರ ದಿನವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಕರು, ನಾಗರಿಕರು, ವಿಶೇಷಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಮತಗಟ್ಟೆ ಅಧಿಕಾರಿಗಳನ್ನೊಳಗೊಂಡಂತೆ ಎಲ್ಲರನ್ನು ಒಂದೆಡೆ ಸೇರಿಸಿ ಹಬ್ಬದ ಮಾದರಿಯಲ್ಲಿ ಆಚರಿಸಲಾಗುತ್ತಿದೆ. ಮತದಾನ ಪ್ರಮಾಣ ಕಡಿಮೆಯಾಗಿರುವ ಜಿಲ್ಲೆಯ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಿ ಮತದಾನದ ಹೆಚ್ಚಳಕ್ಕೆ ಎಲ್ಲರೂ ಸಕ್ರಿಯರಾಗಬೇಕು. ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ನೇತೃತ್ವದಲ್ಲಿ ಎಲ್ಲರೂ ಸೇರಿ ಒಂದು ತಂಡವಾಗಿ ಮತದಾನದ ಪ್ರಗತಿಗಾಗಿ ಕೆಲಸ ಮಾಡೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.ವಿಶೇಷ ಉಪನ್ಯಾಸ ನೀಡಿದ ಡಯಡ್‌ನ ಹಿರಿಯ ಉಪನ್ಯಾಸಕ ಯು.ಆರ್. ಲಿಂಗರಾಜೇ ಅರಸ್ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆಗಾಗಿ, ಪ್ರಗತಿಪರ, ಸುಶಿಕ್ಷಿತ, ಸದೃಢ ಸಮಾಜ ನಿರ್ಮಾಣ ಹಾಗೂ ಎಲ್ಲರೂ ಸರ್ವತಂತ್ರ ಸ್ವತಂತ್ರವಗಿ ಬದುಕಲು ಮತದಾನದ ಅರಿವು ಎಲ್ಲರಿಗೂ ಅವಶ್ಯ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ ಹಾಗೂ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿಗಾಗಿ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಿದ್ಧಪಡಿಸಿರುವ ಜಿಲ್ಲೆಯ ಜಾನಪದ ಕಲೆ, ಸಂಸ್ಕೃತಿಯೊಂದಿಗೆ ಮತದಾನದ ಮಹತ್ವವನ್ನು ಸಾರುವ ಕಿರುಚಿತ್ರಗಳನ್ನು ಪ್ರಸಾರ ಮಾಡಲಾಯಿತು. ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ, ಭಿತ್ತಿಚಿತ್ರ ರಚನೆ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 18 ವರ್ಷ ತುಂಬಿದ ನೂತನ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಅಲ್ಲದೆ ಶತಾಯುಷಿ ಮತದಾರರಾದ ಜಿಲ್ಲೆಯ ಮೂಡ್ನಾಕೂಡು ಗ್ರಾಮದ ದೇವಪ್ಪ ಹಾಗೂ ಉಡಿಗಾಲ ಗ್ರಾಮದ ಲಕ್ಷ್ಮಮ್ಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಗಣ್ಯರು ಸಭಾಂಗಣದ ಹೊರಭಾಗದಲ್ಲಿ ‘ನಾನು ನೈತಿಕ ಮತದಾನ ಬೆಂಬಲಿಸುತ್ತೇನೆ’ ಕುರಿತ ಸಹಿ ಸಂಗ್ರಹ ಅಭಿಯಾನ ಫಲಕಕ್ಕೆ ಸಹಿ ಹಾಕಿದರು. ಬಳಿಕ ಜಿಲ್ಲಾಧಿಕಾರಿಯವರೊಂದಿಗೆ ವಿದ್ಯಾರ್ಥಿಗಳು ಸೆಲ್ಪಿ ಪಾಯಿಂಟ್‌ನಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು.