ಸಾರಾಂಶ
ಕನ್ನಡಪ್ರಭವಾರ್ತೆ ಚಳ್ಳಕೆರೆ/ ಹಿರಿಯೂರು/ ಹೊಸದುರ್ಗ
ದಲಿತ ಸಮೂಹದ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮೊದಲ ಬಾರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸತ್ ಭವನ ಪ್ರವೇಶಿಸುತ್ತಿರುವುದು ಸಂತಸ ತಂದಿದೆ. ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾರೆಂಬ ಭರವಸೆ ಎಲ್ಲರಿಗೂ ಇದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ತಿಳಿಸಿದರು.ಅವರು, ಮಂಗಳವಾರ ಇಲ್ಲಿನ ನೆಹರೂ ಸರ್ಕಲ್ ಮತ್ತು ವಾಲ್ಮೀಕಿ ವೃತ್ತದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಗೋವಿಂದ ಕಾರಜೋಳ ಗೆಲುವನ್ನು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿ ನೆರೆದಿದ್ದ ಕಾರ್ಯಕರ್ತರುನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ೨೦೧೯ರ ಚುನಾವಣೆಯಲ್ಲೂ ಸಹ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ಎ.ನಾರಾಯಣಸ್ವಾಮಿಯವರಿಗೆ ಗೆಲುವಿನ ಕೊಡುಗೆ ನೀಡಿ ಕೇಂದ್ರದ ಸಚಿವರಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಮಾಡಿಕೊಟ್ಟಿದ್ದರು. ಈ ಬಾರಿಯೂ ಸಹ ಎರಡನೇ ಬಾರಿಗೆ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿರುವ ಮತದಾರರ ಇಚ್ಛೆಯೂ ಸಹ ಗೋವಿಂದ ಕಾರಜೋಳ ಕೇಂದ್ರ ಸಚಿವರಾಗಲಿ ಎಂಬ ಅಭಿಲಾಷೆ ಹೊಂದಿದ್ದಾರೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮೊದಲ ಹಂತದಲ್ಲೇ ಗೆಲುವು ಸಾಧಿಸುವ ಮೂಲಕ ಮೈತ್ರಿಕೂಟಕ್ಕೆ ಉತ್ತಮ ಭವಿಷ್ಯವಿದೆ ಎಂಬುವುದನ್ನು ಗೆಲುವು ನಿರೂಪಿಸಿದೆ. ಅಭ್ಯರ್ಥಿಯಾಗಿ ಕೇವಲ ಬಂದೂವರೆ ತಿಂಗಳ ಅವಧಿಯಲ್ಲಿ ಗೋವಿಂದ ಕಾರಜೋಳ ರವರು ಇಡೀ ಕ್ಷೇತ್ರವನ್ನು ಹಗಲುರಾತ್ರಿ ಸುತ್ತಿ ಕ್ಷೇತ್ರದ ಮತದಾರರ ವಿಶ್ವಾಸವನ್ನು ಗಟ್ಟಿಗೊಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೋಜನೆಗಳು, ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಾರಿಗೆ ತಂದ ಅನೇಕ ಕಾರ್ಯಕ್ರಮಗಳು ಈ ಗೆಲುವಿಗೆ ಸಹಕಾರಿಯಾಗಿವೆ. ಬಿಜೆಪಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯ ಕರ್ತರು ಜೆಡಿಎಸ್‌ನೊಂದಿಗೆ ಸೌಹಾರ್ದಿತ ಹೊಂದಾಣಿಕೆ ಹೊಂದಿದ್ಧಾರೆ. ಮುಂದಿನ ದಿನಗಳಲ್ಲೂ ಈ ಮೈತ್ರಿ ಮುಂದುವರೆಯಬೇಕು ಎಂಬುವುದು ಕಾರ್ಯಕರ್ತರ ಅಭಿಲಾಷೆ ಯಾಗಿದೆ ಎಂದರು.ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಜಿಲ್ಲಾ ಮುಖಂಡರ ಜೆ.ಪಿ.ಜಯಪಾಲಯ್ಯ, ಜೆಡಿಎಸ್ ಮುಖಂಡ ಎಂ.ರವೀಶ್‌ಕುಮಾರ್, ಬಿಜೆಪಿ ಮುಖಂಡ ಆರ್.ಅನಿಲ್‌ಕುಮಾರ್, ಡಿ.ಸೋಮಶೇಖರ್ ಮಂಡಿಮಠ, ಸಿ.ಎಸ್.ಪ್ರಸಾದ್, ಡಿ.ಎಂ.ತಿಪ್ಪೇಸ್ವಾಮಿ, ಆದಿಭಾಸ್ಕರಶೆಟ್ಟಿ, ಮಾತೃಶ್ರೀ ಮಂಜುನಾಥ, ಶಶಿಧರ, ವೈ.ಕಾಂತರಾಜು, ಮಾರುತಿ, ನಗರಸಭಾ ಸದಸ್ಯರಾದ ವಿ.ವೈ.ಪ್ರಮೋದ್, ಪಾಲಮ್ಮ, ಇಂದುಮತಿ, ಶಾಂತಮ್ಮ, ಜಗದಾಂಭ, ಪಾಲನೇತ್ರ ನಾಯಕ, ಬಸವರಾಜು, ಮತ್ಸಮುದ್ರ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಮೈತ್ರಿಕೂಟದ ಕಾರ್ಯಕರ್ತರ ಶ್ರಮಕ್ಕೆ ಸಿಕ್ಕ ಜಯ: ರವೀಂದ್ರಪ್ಪ
ಹಿರಿಯೂರು: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳರವರ ಗೆಲುವಿಗೆ ಹಿರಿಯೂರು ಕ್ಷೇತ್ರದಲ್ಲಿ ಹೆಚ್ಚಿನ ಮತ ಬರಲು ಹಗಲಿರುಳು ಶ್ರಮಿಸಿದ ಮೈತ್ರಿ ಪಕ್ಷದ ಕಾರ್ಯಕರ್ತರುಗಳಿಗೆ ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ಘೋಷಣೆಯಾದ ದಿನವೇ ಗೆಲುವು ನಮ್ಮದು ಎಂದು ನಿರ್ಧರಿಸಲಾಗಿತ್ತು. ಅದರಂತೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರ ಪರಿಶ್ರಮದಿಂದ ನಮ್ಮ ಅಭ್ಯರ್ಥಿಗೆ ಲೀಡ್ ಕೊಡಲು ನಾವು ಯಶಸ್ವಿಯಾಗಿದ್ದೇವೆ. ಹಿರಿಯೂರು ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಶಾಸಕಿ ಕೆ.ಪೂರ್ಣಿಮಾ, ಡಿ.ಟಿ.ಶ್ರೀನಿವಾಸ್ ರವರ ಅಬ್ಬರದ ಪ್ರಚಾರದ ನಡುವೆಯೂ ಮತದಾರರು ನಮ್ಮ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದಾರೆ. ಗ್ಯಾರಂಟಿ ಯೋಜನೆಗಳ ಪ್ರಚಾರವನ್ನು ಮತದಾರರು ತಿರಸ್ಕರಿಸಿ ಎನ್.ಡಿ.ಎ. ಅಭ್ಯರ್ಥಿಗೆ ಲೀಡ್ ಕೊಟ್ಟಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಿದೆ.ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಸಚಿವರಾಗಿ, ರಾಜಕೀಯದಲ್ಲಿ ಅಪಾರ ಅನುಭವವಿರುವ ಕಾರಜೋಳರ ಗೆಲುವಿನಿಂದ ಜಿಲ್ಲೆಯು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಇದ್ದು ಜಿಲ್ಲೆಯ ನೀರಾವರಿ, ಕೃಷಿ ಯೋಜನೆಗಳಿಗೆ ನೂತನ ಸಂಸದರಿಂದ ಸಾಕಷ್ಟು ಕೆಲಸಗಳಾಗಲಿವೆ ಎಂಬ ವಿಶ್ವಾಸವಿದೆ ಎಂದರು.ಚಿತ್ರದುರ್ಗ ಬಿಜೆಪಿ ಪರ ಎಂಬುದು ರುಜು: ಮೂರ್ತಿಹೊಸದುರ್ಗ: ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಸೆಯಂತೆ ಮತದಾರ ತೀರ್ಪು ನೀಡಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ಮಾರ್ಗದರ್ಶನ ಹಾಗೂ ವಿಜಯೇಂದ್ರ ಅವರ ನಾಯಕತ್ವಕ್ಕೆ ಸಂದ ಜಯ ಇದಾಗಿದೆ ಎಂದು ಹೊಸದುರ್ಗ ಬಿಜೆಪಿ ಸಂಚಾಲಕ ಎಸ್.ಲಿಂಗಮೂರ್ತಿ ಹೇಳಿದರು.ಪಕ್ಷದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ ಆತ್ಮತೃಪ್ತಿ ನನಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮತದಾರರು ಜಿಲ್ಲೆ ಬಿಜೆಪಿ ಪರವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ನಾನಾ ಕಾರಣಗಳಿಂದಾಗಿ ಸೋತಿರಬಹುದು. ಆದರೆ ಇಂದಿನ ಮತದಾರರ ತೀರ್ಪು ಗಮನಿಸಿದರೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಚಿತ್ರದುರ್ಗ ಜಿಲ್ಲೆ, ಬಿಜೆಪಿ ಭದ್ರಕೋಟೆಯಾಗಲಿದೆ ಎಂದರು.