ಸಾರಾಂಶ
‘ಲೋಕಸಭೆ ಚುನಾವಣೆ ಸಂದರ್ಭ ಬೇರೆ ರಾಜ್ಯಕ್ಕೂ ಹೋಗಿ ಅಲ್ಲಿನ ಭಾಷೆಯಲ್ಲೇ ಮತದಾನ ಜಾಗೃತಿ ಮೂಡಿಸುವ ಆಸಕ್ತಿಯಿದೆ. ಸಂಗೀತ, ನೃತ್ಯ ಮಾಧ್ಯಮದ ಮೂಲಕ ಮತದಾನ ಜಾಗೃತಿ ಸಾಧ್ಯವೋ ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ. ಮತದಾನ ಕಡ್ಡಾಯವಾಗಿ ಮಾಡುವವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡಬೇಕು, ಆಗ ಮಾತ್ರ ಮತದಾನ ಜಾಸ್ತಿ ಆಗಬಹುದು’ ಎಂದು ಸನ್ನಿಧಿ ಹೇಳುತ್ತಾಳೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದಿರುವ ದಕ್ಷಿಣ ಕನ್ನಡದ ಮಾಣಿಯ 4ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿಗೆ ಕೇಂದ್ರ ಚುನಾವಣಾ ಆಯೋಗವು ಶಹಬ್ಬಾಸ್‌ಗಿರಿ ನೀಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನದ ಅರಿವು ಮೂಡಿಸುವ ಆಕೆಯ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.ಕಳೆದ ಚುನಾವಣೆಯಲ್ಲಿ ತಾನು ಮಾಡಿದ ಮತದಾನ ಜಾಗೃತಿಯ ದಾಖಲೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸನ್ನಿಧಿ ಇಮೇಲ್ ಮೂಲಕ ಕಳುಹಿಸಿದ್ದಳು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ನಡೆಯಲು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಸಹಕಾರ ಕೋರಿದ್ದಳು.ಆಯೋಗದಿಂದ ಪ್ರಶಂಸೆ: ಸನ್ನಿಧಿಯ ಪತ್ರಕ್ಕೆ ಇದೀಗ ಆಯೋಗದಿಂದ ಪ್ರತಿಕ್ರಿಯೆ ಬಂದಿದೆ. ‘ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಕ್ಕೆ ಧನ್ಯವಾದಗಳು. ಕೇಂದ್ರ ಚುನಾವಣಾ ಆಯೋಗವು ನಿಮ್ಮ ಮೌಲಿಕ ಅಭಿಪ್ರಾಯಗಳನ್ನು ಗುರುತಿಸಿದೆ. ಉತ್ತಮ ಚುನಾವಣಾ ಪ್ರಕ್ರಿಯೆ ನಡೆಯಲು ಪೂರಕವಾಗಿ ನಿಮ್ಮ ಅಭಿಪ್ರಾಯ, ಕಾರ್ಯಗಳನ್ನು ಪ್ರಶಂಸಿಸುತ್ತೇವೆ’ ಎಂದು ಪ್ರತಿಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ.ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿಯಾಗಿರುವ ಸನ್ನಿಧಿ, ಮಾಣಿ ಪೆರಾಜೆ ಬಾಲವಿಕಾಸ ಇಂಗ್ಲಿಷ್ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಸನ್ನಿಧಿ ತನ್ನ ನಾಲ್ಕೈದು ಮಂದಿ ಪುಟ್ಟ ಸಹಪಾಠಿಗಳೊಂದಿಗೆ ಮನೆ, ಅಂಗಡಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಮತದಾನ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಳು. ಎಲ್ಲರೂ ತಪ್ಪದೇ ಮತದಾನ ಮಾಡುವ ಜತೆಗೆ ಪಕ್ಷಾತೀತವಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಪ್ರೇರಣೆ ನೀಡಿದ್ದಳು. ದ.ಕ.ದ ಜಿಲ್ಲಾಧಿಕಾರಿ ಈಕೆಯ ಕಾರ್ಯವನ್ನು ಗುರುತಿಸಿ ಪ್ರಶಂಸಿಸಿದ್ದರು.‘ಲೋಕಸಭೆ ಚುನಾವಣೆ ಸಂದರ್ಭ ಬೇರೆ ರಾಜ್ಯಕ್ಕೂ ಹೋಗಿ ಅಲ್ಲಿನ ಭಾಷೆಯಲ್ಲೇ ಮತದಾನ ಜಾಗೃತಿ ಮೂಡಿಸುವ ಆಸಕ್ತಿಯಿದೆ. ಸಂಗೀತ, ನೃತ್ಯ ಮಾಧ್ಯಮದ ಮೂಲಕ ಮತದಾನ ಜಾಗೃತಿ ಸಾಧ್ಯವೋ ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ. ಮತದಾನ ಕಡ್ಡಾಯವಾಗಿ ಮಾಡುವವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡಬೇಕು, ಆಗ ಮಾತ್ರ ಮತದಾನ ಜಾಸ್ತಿ ಆಗಬಹುದು’ ಎಂದು ಸನ್ನಿಧಿ ಹೇಳುತ್ತಾಳೆ.