ಸಾರಾಂಶ
ಮತದಾನದ ಮೂಲಕ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಸುಭದ್ರ ಸರ್ಕಾರ ರಚಿಸಲು ಮತದಾರರು ಸಹಕರಿಸಬೇಕು. ಮತದಾನ ಒಂದು ಪವಿತ್ರ ಕರ್ತವ್ಯವಾಗಿದೆ.
ಸಂಡೂರು: ಪಟ್ಟಣದಲ್ಲಿ ಶನಿವಾರ ತಾಲೂಕು ಸ್ವೀಪ್ ಸಮಿತಿ ಹಾಗೂ ಅಂಗವಿಕಲರಿಂದ ಬೈಕ್ ರ‍್ಯಾಲಿ ಹಮ್ಮಿಕೊಂಡು ಮತದಾನದ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ಎಚ್.ಕೆ. ಸತೀಶ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಮತದಾನದ ಮೂಲಕ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಸುಭದ್ರ ಸರ್ಕಾರ ರಚಿಸಲು ಮತದಾರರು ಸಹಕರಿಸಬೇಕು. ಮತದಾನ ಒಂದು ಪವಿತ್ರ ಕರ್ತವ್ಯವಾಗಿದೆ. ಪ್ರತಿಯೊಬ್ಬ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಕಡ್ಡಾಯವಾಗಿ ಮತದಾನ ಮಾಡಬೇಕು. ಅಂಗವಿಕಲರು ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಚ್.ಷಡಾಕ್ಷರಯ್ಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿ, ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಶೇಷ ಚೇತನರಿಗೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಮಾಡಲು ಹಲವು ಸೌಕರ್ಯಗಳನ್ನು ಕಲ್ಪಿಸಲಾಗಿದೆ. ರ‍್ಯಾಂಪ್, ವೀಲ್ ಚೇರ್, ಬೂತ್‌ಕನ್ನಡಿ, ಸಾರಿಗೆ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಯಾರು ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಎಳೆ ನಾಗಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ಎಂ.ಆರ್.ಡಬ್ಲುಸಿ ಕರಿಬಸಪ್ಪ, ಹಲವು ಅಂಗವಿಕಲರು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.