ಸಾರಾಂಶ
ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಿನ್ನಾಳ ಗ್ರಾಮದಲ್ಲಿ ಕ್ಯಾಂಡಲ್ ಲೈಟ್ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಿನ್ನಾಳ ಗ್ರಾಮದಲ್ಲಿ ಕ್ಯಾಂಡಲ್ ಲೈಟ್ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.ಜಿಲ್ಲಾ ಚುನಾವಣಾ ರಾಯಭಾರಿ ಡಾ. ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ನಾವು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಶೇಷಚೇತನರು ಮತದಾನ ಮಾಡಿ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ನಾವು ಕೂಡಾ ದೈಹಿಕವಾಗಿ ಸಬಲರಾಗಿದ್ದು, ಮತದಾನ ಮಾಡುವುದರ ಮೂಲಕ ಮಾದರಿಯಾಗಬೇಕೆಂದರು.
ಜಿಲ್ಲಾ ಚುನಾವಣಾ ರಾಯಭಾರಿ ಪೂರ್ಣಿಮಾ ಯೋಳುಬಾವಿ ಮಾತನಾಡಿದರು. ಜಿಲ್ಲಾ ಚುನಾವಣಾ ರಾಯಭಾರಿ ಮೆಹಬೂಬ ಕಿಲ್ಲೆದಾರ ಚುನಾವಣಾ ಗೀತೆ ಪ್ರಚುರಪಡಿಸಿದರು.ಕ್ಯಾಂಡಲ್ ಲೈಟ್ ಜಾಥಾ:
ಗ್ರಾಮದ ಬಸವೇಶ್ವರ ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ ಮುಖ್ಯರಸ್ತೆಯಿಂದ ಸಾಗಿ ಗ್ರಾಮ ಪಂಚಾಯಿತಿಯ ಹತ್ತಿರ ಇರುವ ಸ್ವಾಮಿ ವಿವೇಕಾನಂದ ಸರ್ಕಲ್‌ರೆಗೆ ಸಾಗಿ ಮುಕ್ತಾಯಗೊಂಡಿತು.ಮೆಣದ ಬತ್ತಿಯಿಂದ ಮೊಳಗಿದ ನಮ್ಮ ಮತ, ನಮ್ಮ ಹಕ್ಕು:
ಗ್ರಾಮದ ದೇವಾಂಗ ಸಮುದಾಯ ಭವನದಲ್ಲಿ ನಮ್ಮ ಮತ, ನಮ್ಮ ಹಕ್ಕು ಎಂಬ ಅಕ್ಷರಗಳನ್ನು ಬಿಡಿಸಿ ಅದರ ಸುತ್ತಲೂ ಮೆಣಬತ್ತಿಗಳಿಂದ ಬೆಳಕು ಜಗಮಗಿಸಿತು.ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ:
ಕಾರ್ಯಕ್ರಮದಲ್ಲಿ ಮತದಾನ ಪ್ರತಿಜ್ಞಾ ವಿಧಿಯನ್ನು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಬೋಧಿಸಿದರು. ಈ ಸಂದರ್ಭ ವೇದಿಕೆಯ ಎಡಭಾಗದಲ್ಲಿದ್ದ ಪಾನ್ ಶಾಪ್ ಮಾಲೀಕ ಮಂಗಳೇಶಪ್ಪ ಮೂಲಿಮನಿ ಎದ್ದು ನಿಂತು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು ಗಮನ ಸೆಳೆಯಿತು.ಜಿಲ್ಲಾ ಚುನಾವಣಾ ರಾಯಭಾರಿಗಳು ನನ್ನ ಮತ, ನನ್ನ ಹಕ್ಕು ಎಂಬ ಮತದಾನ ಜಾಗೃತಿಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ, ಸಿಡಿಪಿಒ ಜಯಶ್ರೀ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ, ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಹನಮಂತಪ್ಪ, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಪಿಡಿಒ ಪರಮೇಶ್ವರಯ್ಯ ತೆಳಗಡೆಮಠ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಸ್ವೀಪ್ ಸಮಿತಿಯ ಸದಸ್ಯ ಬಸವರಾಜ ಬಳಿಗಾರ, ವೀರೇಶ್ ಬಡಿಗೇರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ತಾಜುದ್ದಿನ್, ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಿನ್ನಾಳ ಗ್ರಾಪಂ ಸಿಬ್ಬಂದಿ ಇದ್ದರು.