ಹಕ್ಕುಪತ್ರ, ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರ

| Published : May 02 2024, 12:25 AM IST

ಹಕ್ಕುಪತ್ರ, ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಗಳಿಗೆ ಹಕ್ಕುಪತ್ರ ವಿತರಣೆ ಮತ್ತು ಮೂಲಸೌಕರ್ಯಗಳ ಕಲ್ಪಿಸಲು ಆಗ್ರಹಿಸಿ ನಗರದ ಪಾಲಿಕೆ ವ್ಯಾಪ್ತಿಯ ೧೦ನೇ ವಾರ್ಡ್‌ ೪೮ನೇ ಬೂತ್‌ನ ಭಾರತ್ ಆಯಿಲ್ ಮಿಲ್ ಕಾಪೌಂಡ್ ನಿವಾಸಿಗಳು ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿರುವುದಾಗಿ ನಿವಾಸಿ ಎಚ್.ಕೆ.ಮೂರ್ತಿ ಹರಿಹರದಲ್ಲಿ ಹೇಳಿದ್ದಾರೆ.

- ಭಾರತ್ ಆಯಿಲ್ ಮಿಲ್ ಕಾಪೌಂಡ್‌ ನಿವಾಸಿಗಳ ತೀರ್ಮಾನ: ಎಚ್‌.ಕೆ.ಮೂರ್ತಿ - - - ಕನ್ನಡಪ್ರಭ ವಾರ್ತೆ ಹರಿಹರ

ಮನೆಗಳಿಗೆ ಹಕ್ಕುಪತ್ರ ವಿತರಣೆ ಮತ್ತು ಮೂಲಸೌಕರ್ಯಗಳ ಕಲ್ಪಿಸಲು ಆಗ್ರಹಿಸಿ ನಗರದ ಪಾಲಿಕೆ ವ್ಯಾಪ್ತಿಯ ೧೦ನೇ ವಾರ್ಡ್‌ ೪೮ನೇ ಬೂತ್‌ನ ಭಾರತ್ ಆಯಿಲ್ ಮಿಲ್ ಕಾಪೌಂಡ್ ನಿವಾಸಿಗಳು ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿರುವುದಾಗಿ ನಿವಾಸಿ ಎಚ್.ಕೆ.ಮೂರ್ತಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು, ನಗರದ ಭಾರತ್ ಆಯಿಲ್ ಮಿಲ್ ಕಾಪೌಂಡ್‌ನಲ್ಲಿ ೧೩೦ಕ್ಕೂ ಹೆಚ್ಚು ಕುಟುಂಬಗಳು ಕಳೆದ ೬೦ ವರ್ಷಗಳಿಂದ ವಾಸಿಸುತ್ತಿದ್ದಾರೆ. ಇದುವರೆಗೂ ನಮ್ಮ ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಿಲ್ಲ. ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಬಡ ಕೂಲಿಕಾರ್ಮಿಕರು ಜೀವನ ಮಾಡುತ್ತಿದ್ದಾರೆ. ಆಳುವ ಸರ್ಕಾರಗಳಿಗೆ ಆದ್ಯತೆ ಮೇಲೆ ಈ ಭಾಗದಲ್ಲಿ ಅಭಿವೃದ್ಧಿ ಮಾಡುವುದು ಅವರ ಕರ್ತವ್ಯವಾಗಿದೆ. ಆದರೆ, ಇಲ್ಲಿನ ನಿವಾಸಿಗಳ ದುರ್ದೈವ ಎಂಬಂತೆ ಇಲ್ಲಿಯವರೆಗೂ ಚರಂಡಿ, ಬೀದಿದೀಪ, ಶುದ್ಧ ನೀರಿನ ಘಟಕ ಉತ್ತಮ ರಸ್ತೆ, ಶೌಚಾಲಯಗಳಿಂದ ವಂಚಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದ ಸಮಸ್ಯೆಗಳ ಕುರಿತು ಸ್ಥಳೀಯ ಜನಪ್ರತಿನಿಧಿ ಹಾಗೂ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದಾಗ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿ, ಕೂಡಲೇ ಬಗೆಹರಿಸುವುದಾಗಿ ಪೊಳ್ಳು ಭರವಸೆ ನೀಡುತ್ತ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಆಲಿಸಿ ಸೂಕ್ತ ಭರವಸೆ ನೀಡಬೇಕು. ಅದು ಸಮಂಜಸವೇ ಮತ್ತು ಕಾರ್ಯಸಾಧುವೇ ಎನ್ನುವುದನ್ನು ಸ್ಥಳೀಯರೊಂದಿಗೆ ಚರ್ಚಿಸಬೇಕು. ಇಲ್ಲದಿದ್ದರೆ ಮತದಾನದಿಂದ ದೂರ ಉಳಿಯುವುದಾಗಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ನಿವಾಸಿಗಳಾದ ಎಂ.ಕೃಷ್ಣ, ರಮೇಶ್, ಅಣ್ಣಪ್ಪ, ಹನುಮಂತಪ್ಪ ಎಚ್.ಯಮನೂರು ಸೇರಿದಂತೆ ಇತರರಿದ್ದರು. - - - -೧ಎಚ್‌ಆರ್‌ಆರ್೩:

ಹರಿಹರದ ಪತ್ರಿಕಾ ಭವನದಲ್ಲಿ ಬುಧವಾರ ಎಚ್.ಕೆ.ಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.