ಹನೂರು : ತುಳಸಿಕೆರೆ, ಪಡಸಲನಾಥ ಗ್ರಾಮದ ಮತದಾನ ಬಹಿಷ್ಕಾರ ವಾಪಸ್‌

| Published : Apr 03 2024, 01:38 AM IST / Updated: Apr 03 2024, 08:56 AM IST

ಹನೂರು : ತುಳಸಿಕೆರೆ, ಪಡಸಲನಾಥ ಗ್ರಾಮದ ಮತದಾನ ಬಹಿಷ್ಕಾರ ವಾಪಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ತುಳಸಿಕೆರೆ ಹಾಗೂ ಪಡಸಲನಾಥ ಗ್ರಾಮಕ್ಕೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಭೇಟಿ ನೀಡಿ ಗ್ರಾಮಸ್ಥರಿಗೆ ಮತದಾನ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಹನೂರು :  ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ತುಳಸಿಕೆರೆ ಹಾಗೂ ಪಡಸಲನಾಥ ಗ್ರಾಮಕ್ಕೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಭೇಟಿ ನೀಡಿ ಗ್ರಾಮಸ್ಥರಿಗೆ ಮತದಾನ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಒಳಪಡುವ ತುಳಸಿಕೆರೆ ಹಾಗೂ ಪಡಸಲನಾಥ ಗ್ರಾಮದ ನಿವಾಸಿಗಳು ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದರು. ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಡಸಲನಾಥ ಗ್ರಾಮಕ್ಕೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅಧಿಕಾರಿಗಳ ಜೊತೆ ತೆರಳಿ ಗ್ರಾಮಸ್ಥರ ಜೊತೆ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡುವುದು ನಿಮ್ಮ ಹಕ್ಕು ಹೀಗಾಗಿ ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕರಿಸುವುದು ತರವಲ್ಲ. ಸಮಸ್ಯೆಗಳಿದ್ದರೆ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿ ಹೇಳಿದರು.

ನಾಗರಾಜ್ ಹಾಗೂ ಲಿಂಗರಾಜು ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿ ನಂತರ ಇತ್ತ ತಿರುಗಿಯೂ ನೋಡುವುದಿಲ್ಲ ಹೀಗಾಗಿ ಲೋಕಸಭಾ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಲ್ಲ ಸೇರಿ ತಿಳಿಸಿದ್ದೇವೆ ಗ್ರಾಮಕ್ಕೆ ವಿದ್ಯುತ್ ಹಾಗೂ ರಸ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಇನ್ನು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದರಿಂದ ಮತದಾನ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಉಪ ವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಸ್ಥಳದಲ್ಲಿ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮಕ್ಕೆ ಓಡಾಡಲು ತಾತ್ಕಾಲಿಕ ಗುಂಡಿಗಳನ್ನು ಮುಚ್ಚಲು ಕ್ರಮವಹಿಸುವಂತೆ ತಿಳಿಸಿದರು. ಚುನಾವಣೆ ಮುಗಿದ ನಂತರ ಗ್ರಾಮಗಳಿಗೆ ವಿದ್ಯುತ್ ಮತ್ತು ಮೂಲಭೂತ ಸೌಲಭ್ಯ ನೀಡಲು ಕ್ರಮ ಕೈಗೊಳ್ಳುವಂತೆ ಜೊತೆಗೆ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಿದರು.

ತುಳಸಿಕೆರೆ ಗ್ರಾಮಕ್ಕೆ ಭೇಟಿ:

ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ತುಳಸಿಕೆರೆ ಗ್ರಾಮ ನಿವಾಸಿಗಳು ವಿದ್ಯುತ್ ಹಾಗೂ ರಸ್ತೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಉಪ ವಿಭಾಗಾಧಿಕಾರಿ ಶಿವಮೂರ್ತಿ ಮತ್ತು ಅಧಿಕಾರಿಗಳ ತಂಡ ಗ್ರಾಮದ ಮುಖಂಡರ ಜೊತೆ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡುವಂತೆ ಮನವೊಲಿಸಿದರು ಇಲ್ಲಿಯ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರದಿಂದ ಮಂಜೂರಾತಿ ಆದೇಶ ಮತ್ತು ವಿವಿಧ ಇಲಾಖೆಗಳ ಮಂಜೂರಾತಿಗಾಗಿ ಪತ್ರ ವ್ಯವಹಾರ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಲೋಕಸಭಾ ಚುನಾವಣೆ ಬಹಿಷ್ಕರಿಸದೆ ಮತದಾನ ಮಾಡುವಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಮನವೊಲಿಸಿದರು.

ಪ್ರತಿ ಬಾರಿಯೂ ಅಧಿಕಾರಿಗಳು ಗ್ರಾಮಗಳಿಗೆ ಬಂದು ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ ಅದು ಸುಳ್ಳಾಗಿದೆ ಹೀಗಾಗಿ ಈ ಬಾರಿ ವಿದ್ಯುತ್ ಕಂಬಗಳನ್ನಾದರೂ ಗ್ರಾಮದಲ್ಲಿ ಹಾಕಿ ಗ್ರಾಮಸ್ಥರ ಬೇಡಿಕೆ ಚುನಾವಣಾ ಮುನ್ನ ವಿದ್ಯುತ್ ಕಂಬಗಳನ್ನಾದರೂ ಗ್ರಾಮದಲ್ಲಿ ತಂದು ಹಾಕಿ ನಂತರ ವಿದ್ಯುತ್ ನೀಡಿ ಮತ್ತು ರಸ್ತೆ ಕಾಮಗಾರಿ ಹಮ್ಮಿಕೊಳ್ಳುವಂತೆ ಗ್ರಾಮಸ್ಥರು ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಮಲೆ ಮಾದೇಶ್ವರ ವನ್ಯಜೀವಿಲಯ ವಿಭಾಗ ಎಸಿಎಫ್ ಚಂದ್ರಶೇಖರ್ ತಹಿಸೀಲ್ದಾರ್ ಗುರುಪ್ರಸಾದ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಉಮೇಶ್ ಪರಿಶಿಷ್ಟ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ವಲಯ ಅರಣ್ಯ ಅಧಿಕಾರಿ ಭಾರತಿ ರಾಜಸ್ವ ನಿರೀಕ್ಷಕ ಶಿವಕುಮಾರ್ ಗ್ರಾಮ ಲೆಕ್ಕಿಗ ವಿನೋದ್, ಮಾದೇಶ್ವರ ಬೆಟ್ಟದ ಪಿಡಿಓ ಕಿರಣ್ ಕುಮಾರ್ ಇನ್ನಿತರರು ಇದ್ದರು.