ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೇರಿದಂತೆ ಮೈತ್ರಿ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ 10 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು.
ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಿಗ್ಗೆ 9 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಿದರು.ತುಮುಲ್ ಚುನಾವಣೆಯ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿರವರ ನೇತೃತ್ವದಲ್ಲಿ ಈ ಚುನಾವಣೆಯ ಮತದಾನ ನಡೆದಿದ್ದು, 10 ತಾಲೂಕುಗಳಿಂದಲೂ 21 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 10 ನಿರ್ದೇಶಕರ ಸ್ಥಾನಕ್ಕೆ ನಡೆದಿರುವ ಈ ಚುನಾವಣೆಯಲ್ಲಿ ಮತದಾನ ಮಾಡಲು 10 ತಾಲೂಕುಗಳಿಂದಲೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಮತದಾರರು ಪ್ರತ್ಯೇಕ ವಾಹನಗಳಲ್ಲಿ ನಗರಕ್ಕೆ ಆಗಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಎಂಪ್ರೆಸ್ ಕಾಲೇಜಿನ ಆವರಣದಲ್ಲಿ ಪೆಂಡಾಲ್ ಹಾಕಿಕೊಂಡು ಅಭ್ಯರ್ಥಿಗಳ ಪರ ಬೆಂಬಲಿಗರು ಹಾಗೂ ಅಭ್ಯರ್ಥಿಗಳು ತಮಗೆ ಮತ ಹಾಕುವಂತೆ ಮತದಾರರ ಮನವೊಲಿವಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.ಎಂಪ್ರೆಸ್ ಕಾಲೇಜು ಮುಂಭಾಗದ ಅಶೋಕ ರಸ್ತೆಯಲ್ಲೂ ಸಹ ಚುನಾವಣೆಗೆ ಸ್ಪರ್ಧಿಸಿರುವ ತುಮಕೂರು, ಕುಣಿಗಲ್, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಸಿರಾ, ಮಧುಗಿರಿ ಹಾಗೂ ಪಾವಗಡ 10 ತಾಲೂಕುಗಳ 21 ಅಭ್ಯರ್ಥಿಗಳ ಪರ ಬೆಂಬಲಿಗರು ಜಮಾಯಿಸಿದ್ದರು.
ಮತದಾನಕ್ಕೆ ಅವಕಾಶ ಸಿಗದೆ ಅನರ್ಹಗೊಂಡಿದ್ದ 8 ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳು ಹೈಕೋರ್ಟ್ ಮೆಟ್ಟಿಲೇರಿ ಮತದಾನಕ್ಕೆ ಅವಕಾಶ ಪಡೆದುಕೊಂಡಿರುವುದರಿಂದ ಈ ತಾಲೂಕಿನವರು ಮತದಾನ ಮಾಡಲು ಹೈಕೋರ್ಟ್ ಆದೇಶದಂತೆ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪ್ರತ್ಯೇಕ ಮತಗಟ್ಟೆಗಳಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಮತದಾರರು ಮತದಾನ ಮಾಡಿದರು.ಮತಗಟ್ಟೆ ಕೇಂದ್ರದ ಮುಂದೆ ಡೆಲಿಗೇಟ್ಸ್ಗಳು ಮತ ಚಲಾಯಿಸಲು ಜಮಾಯಿಸಿದ್ದರು. ಹಾಗೆಯೇ 10 ತಾಲ್ಲೂಕುಗಳ ಮತದಾರರು ಸಹ ಸರದಿಯ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು.
ಮತಗಟ್ಟೆ ಕೇಂದ್ರದ ಬಳಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಮತ ಎಣಿಕೆ ಮುಂದೂಡಿಕೆ: ಹೈಕೋರ್ಟ್‌ನಲ್ಲಿ ನ. 26ರಂದು ಅನರ್ಹ ಮತದಾರರ ಸಂಬಂಧ ವಿಚಾರಣೆ ನಡೆಯಲಿರುವುದರಿಂದ ಅಂದಿನ ತೀರ್ಪಿನ ಆಧಾರದ ಮೇಲೆ ಮತಗಳ ಎಣಿಕೆ ನಡೆಯಲಿದೆ. ಹಾಗಾಗಿ ಅಲ್ಲಿಯವರೆಗೂ ಮತಪೆಟ್ಟಿಗೆಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇಡಲಾಗುತ್ತಿದೆ ಎಂದು ಚುನಾವಣಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದ್ದಾರೆ.