ಇಂದಿನಿಂದ ಮನೆಯಿಂದ ಮತದಾನ

| Published : Apr 25 2024, 01:00 AM IST

ಸಾರಾಂಶ

ಮನೆ ಮನೆಗೆ ತೆರಳುವ ತಂಡದಲ್ಲಿ ಸೆಕ್ಟರ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು, ಮೈಕ್ರೋ ಆಬ್ಸರ್ವರ್, ಬಿಎಲ್ಒ, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಒಳಗೊಂಡ ತಂಡಗಳನ್ನು ನಿಯೋಜಿಸಿದ್ದು, ಈ ಎಲ್ಲ ಸಿಬ್ಬಂದಿಗೆ ಈಗಾಗಲೇ ಅಗತ್ಯ ತರಬೇತಿಯನ್ನು ನೀಡಲಾಗಿದೆ.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯ ಒದಗಿಸಿದ್ದು, ಅದರಂತೆ ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ಏ. 25ರಿಂದ ಏ. 30ರ ವರೆಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಲೋಕಸಭಾ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡಲು ಈಗಾಗಲೇ 12ಡಿ ನಮೂನೆಗೆ ಒಪ್ಪಿಗೆ ಪತ್ರ ನೀಡಿರುವ 85 ವರ್ಷ ಮೇಲ್ಪಟ್ಟ 3046 ಹಾಗೂ 1977 ಅಂಗವಿಕಲ ಮತದಾರರ ಮನೆಗಳಿಗೆ ಮತಗಟ್ಟೆ ಸಿಬ್ಬಂದಿ ತೆರಳಿ ಮತದಾನ ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ. ಮನೆಯಿಂದ ಮತದಾನ ಮಾಡುವ ಅರ್ಹ ಮತದಾರರಿಗೆ, ಈಗಾಗಲೇ ಮತಗಟ್ಟೆ ಅಧಿಕಾರಿಗಳು ಅವರ ಮನೆಗಳಿಗೆ ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಬಿಎಲ್‌ಒಗಳ ಮುಖಾಂತರ ತಿಳಿಸಿದ್ದು, ಅಧಿಕಾರಿಗಳು ಬರುವ ಸಮಯದಲ್ಲಿ ಮತದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ತಿಳಿಸಲಾಗಿದೆ. ನಿಯೋಜಿಸಲಾದ ತಂಡವು ಮೊದಲ ಸಲ ಮತದಾರನ ಮನೆಗೆ ಭೇಟಿ ನೀಡಿದಾಗ ಮತದಾರನು ಲಭ್ಯವಿಲ್ಲದಿದ್ದಲ್ಲಿ ಎರಡನೇ ಸಲ ಭೇಟಿ ನೀಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮನೆ ಮನೆಗೆ ತೆರಳುವ ತಂಡದಲ್ಲಿ ಸೆಕ್ಟರ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು, ಮೈಕ್ರೋ ಆಬ್ಸರ್ವರ್, ಬಿಎಲ್ಒ, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಒಳಗೊಂಡ ತಂಡಗಳನ್ನು ನಿಯೋಜಿಸಿದ್ದು, ಈ ಎಲ್ಲ ಸಿಬ್ಬಂದಿಗೆ ಈಗಾಗಲೇ ಅಗತ್ಯ ತರಬೇತಿಯನ್ನು ನೀಡಲಾಗಿದೆ.

133 ತಂಡಗಳನ್ನು ಮನೆಯಿಂದ ಮತದಾನ ನಡೆಸುವ ಪ್ರಕ್ರಿಯೆಗೆ ನಿಯೋಜಿಸಲಾಗಿದೆ. ಎಲ್ಲ ತಂಡಗಳಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿದ್ದು, ರೂಟ್ ಮ್ಯಾಪ್ ಸಿದ್ಧಪಡಿಸಿ ಅದರಂತೆ ಪ್ರತಿದಿನ ನಿಗದಿತ ಮನೆಗಳಿಗೆ ಭೇಟಿ ನೀಡಿ, ಮತದಾನ ಮಾಡಿಸಿ, ಪ್ರತಿದಿನ ಪ್ರಗತಿಯ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

ಲೋಕಸಭಾ ಚುನಾವಣೆ: ವ್ಯಂಗ್ಯ ಚಿತ್ರಸ್ಪರ್ಧೆ

ಕಾರವಾರ: ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಪಂ ಸಹಯೋಗದಲ್ಲಿ ಏ. 30ರಂದು ವ್ಯಂಗ್ಯಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ ನಾಗರಿಕರು ಭಾಗವಹಿಸಬಹುದು. ಆಸಕ್ತರು ಏ. 26ರೊಳಗಾಗಿ ಜಿಪಂ ಕಚೇರಿಯ ಸಹಾಯವಾಣಿ 8277237100ಕ್ಕೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಸಿಇಒ ಈಶ್ವರಕುಮಾರ ಕಾಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯ ನಿಯಮ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿ ಕಚೇರಿ ಸಂಪರ್ಕಿಸಬಹುದು ಎಂದು ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.